ಸಚಿವ ಮಧು ಬಂಗಾರಪ್ಪ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ: ಬಿ.ವೈ.ರಾಘವೇಂದ್ರ

ಶಿವಮೊಗ್ಗದಲ್ಲಿ ಈ ಬಾರಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಾಲಿಗೆ ಮೇಲೆ ಹಿಡಿತ ಇಲ್ಲದಂತೆ ಅಸಹ್ಯ ತರುವಂತಹ ಮಾತನಾಡುತ್ತಿದ್ದು, ಶಿಕ್ಷಣ ಸಚಿವರಾಗಿ ಇನ್ನು ಮುಂದಾದರೂ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
 

Lok Sabha Election 2024 BY Raghavendra Slams On Minister Madhu Bangarappa gvd

ಶಿವಮೊಗ್ಗ (ಮಾ.29): ಚುನಾವಣೆಯಲ್ಲಿ ಸಾಮಾನ್ಯವಾಗಿ ಅಭಿವೃದ್ಧಿ ವಿಷಯ ಇಟ್ಟುಕೊಂಡು ಚುನಾವಣಾ ಪ್ರಚಾರ ಮಾಡುವುದು ವಾಡಿಕೆ. ಆದರೆ ಶಿವಮೊಗ್ಗದಲ್ಲಿ ಈ ಬಾರಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಾಲಿಗೆ ಮೇಲೆ ಹಿಡಿತ ಇಲ್ಲದಂತೆ ಅಸಹ್ಯ ತರುವಂತಹ ಮಾತನಾಡುತ್ತಿದ್ದು, ಶಿಕ್ಷಣ ಸಚಿವರಾಗಿ ಇನ್ನು ಮುಂದಾದರೂ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾಲಿಗೆ ಅವರ ಸಂಸ್ಕೃತಿ ತೋರಿಸುತ್ತದೆ ಎನ್ನುತ್ತಾರೆ. ಇದು ನನ್ನ ಅನುಭವಕ್ಕೆ ಬರುತ್ತಿದೆ ಎಂದು ವ್ಯಂಗ್ಯವಾಡಿದರು. ನಾವು ರಾಷ್ಟ್ರದ ಹಿತ ಚಿಂತನೆ, ಅಭಿವೃದ್ಧಿ ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದೇವೆ. 400ಕ್ಕೂ ಹೆಚ್ಚು ಸೀಟುಗಳ ಗುರಿ ಹಿಡಿದು ಬಿಜೆಪಿ ಹೊರಟಿದೆ. ಇದಕ್ಕೆ ಪೂರಕ ಎನ್ನುವಂತೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳಿಸುತ್ತದೆ ಎಂಬ ಮಾತು ಆಡಿದ್ದು, ಇದನ್ನು ನಾವು ನಿಜ ಮಾಡಲಿದ್ದೇವೆ ಎಂದರು.

ಜೆಡಿಎಸ್‌ ಎಲ್ಲಿ ಎಂದು ತೋರುವ ಶಕ್ತಿ ಮೈತ್ರಿಗಿದೆ: ಎಚ್.ಡಿ.ದೇವೇಗೌಡ

ಕೀಳು ಅಭಿರುಚಿ ಮಾತುಗಳು ಸರಿಯಲ್ಲ: ಶಿವಮೊಗ್ಗ ಕ್ಷೇತ್ರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಾರ್ವಜನಿಕ ಸಭೆಗಳಲ್ಲಿ ಬಳಸುವ ಪದಗಳು ಅಸಹ್ಯ ಹುಟ್ಟಿಸುತ್ತವೆ. ಇದು ಬೇಸರ ತರಿಸುತ್ತಿದೆ. ಇಡೀ ವಿಶ್ವವೇ ಕೊಂಡಾಡುವ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಕೀಳು ಅಭಿರುಚಿಯ ಮಾತುಗಳ ಆಡುವುದು ಸರಿಯಲ್ಲ. ನಾವೇನು ಪುಕ್ಸಟೆ ಬಂದಿದ್ದೇವಾ ಎಂದು ಹಗುರವಾಗಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ ಎಂದರು. ಒಬ್ಬ ಶಿಕ್ಷಣ ಸಚಿವನಾಗಿ ಮಕ್ಕಳಿಗೆ, ಹಿರಿಯರಿಗೆ ಮಾದರಿಯಾಗಿ ಮಾತನಾಡಬೇಕು. ಬೌದ್ಧಿಕ ಶಕ್ತಿ ತುಂಬಬೇಕಾದ ನಾಲಿಗೆಯಿಂದ ತಮ್ಮ ಸಂಸ್ಕೃತಿ ಅನಾವರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಸಂಸದರಾಗಿ ರಾಘವೇಂದ್ರ ಏನು ಸಾಧನೆ ಮಾಡಿದ್ದಾರೆ ಎಂದು ಪದೇ ಪದೇ ಕೇಳುತ್ತಾರೆ. ಸಂಸತ್‌ ನಲ್ಲಿ ಏನು ಮಾತನಾಡಿದ್ದೇನೆ ಎಂದು ಕೇಳುತ್ತಿದ್ದಾರೆ. ದಾಖಲೆ ಸಮೇತ ಎಲ್ಲವನ್ನೂ ಕೊಡುತ್ತಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಪ್ರದರ್ಶಿಸಿದರು.

ಸಾಗುವಳಿ ಹಕ್ಕುಪತ್ರ ವಿತರಣೆಗೆ ಸಿದ್ಧತೆ: ಸುಮಾರು 65 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಶರಾವತಿ ಮುಳುಗಡೆ ಸಂತ್ರಸ್ತರಿಗಾಗಿ ಏನೂ ಮಾಡಲಿಲ್ಲ. ಆಗ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಯಲ್ಲಿ ಇರಲಿಲ್ಲ. ರಾಜ್ಯ ಸರ್ಕಾರವೇ ಹಕ್ಕುಪತ್ರ ನೀಡುವ ಅಧಿಕಾರ ಹೊಂದಿದ್ದರು. ಆಗ ಏನೂ ಮಾಡದ ಇವರು ಈಗ ಬಿಜೆಪಿ ಏನು ಮಾಡುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಸಾಗುವಳಿ ಹಕ್ಕುಪತ್ರ ನೀಡಲು ಎಲ್ಲಾ ರೀತಿಯಿಂದಲೂ ಮುಂದುವರಿಯಲಾಗುತ್ತಿದೆ. ಬಗರ್‌ ಹುಕುಂ ಹಕ್ಕುಪತ್ರ ನೀಡುವ ವಿಚಾರದಲ್ಲಿಯೂ ಇದೇ ರೀತಿ ಕೆಲಸ ಮಾಡುತ್ತಿದ್ದೇವೆ. ವಿಐಎಸ್ಎಲ್ ಕಾರ್ಖಾನೆ ಉಳಿಸಲು ಏನು ಮಾಡಿದ್ದೇನೆ ಎಂಬುದಕ್ಕೆ ದಾಖಲೆಯಿದೆ. ವಿಐಎಸ್‌ಎಲ್ ಕಾರ್ಖಾನೆ ಕೇವಲ ಒಂದು ರುಪಾಯಿಗೆ ಕೇಂದ್ರಕ್ಕೆ ಬರೆದುಕೊಟ್ಟ ಇವರ ಪಕ್ಷ ಆಗ ಇದರ ಪುನರುಜ್ಜೀವನಕ್ಕೆ ಬೇಕಾದ ಪತ್ರ ಏಕೆ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಬಂದಾಗ ಅವರಿಗೆ ಈ ಸಮಸ್ಯೆಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಮೋದಿಯವರು ಕೆಲಸ ಮಾಡುವ ಮೊದಲು ಯಾವುದೇ ಆಶ್ವಾಸನೆ ನೀಡುವವರಲ್ಲ ಎಂಬುದು ಇದುವರೆಗೆ ಸಾಬೀತಾಗಿದೆ. ಕೆಲಸ ಮಾಡಿ ತೋರಿಸುತ್ತಾರೆ. ಮೋದಿ ಬಂದು ಮಾತನಾಡಿ ಹೋಗಿರುವ ಮೈಕಿನ ಕರೆಂಟ್ ನಮ್ಮಪ್ಪ ಕೊಟ್ಟಿದ್ದು ಎಂದು ಮಧು ಬಂಗಾರಪ್ಪ ಉಡಾಫೆಯ ಮಾತನಾಡಿದ್ದಾರೆ. ಆದರೆ ಶರಾವತಿ ಮುಳುಗಡೆ ಸಂತ್ರಸ್ತರ ತ್ಯಾಗದಿಂದ ನಾಡಿಗೆ ವಿದ್ಯುತ್ ಸಿಕ್ಕಿದೆ ಎಂಬುದು ಸಚಿವರು ಮೊದಲು ತಿಳಿದುಕೊಳ್ಳಬೇಕು ಟಾಂಗ್‌ ನೀಡಿದರು. ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್‌, ವಿಧಾನಪರಿಷತ್‌ ಸದಸ್ಯರಾದ ಎಸ್. ರುದ್ರೇಗೌಡರು, ಡಿ. ಎಸ್‌. ಅರುಣ್‌, ಪಕ್ಷದ ನಾಯಕರಾದ ಆರ್‌. ಕೆ. ಸಿದ್ದರಾಮಣ್ಣ, ಹೆಚ್‌. ಟಿ. ಬಳಿಗಾರ್‌, ಎಸ್‌. ದತ್ತಾತ್ರಿ, ಎಸ್‌. ಎಸ್‌.ಜ್ಯೋತಿ ಪ್ರಕಾಶ್‌, ಶಿವರಾಜ್‌, ಹರೀಶ್‌, ಗಾಯತ್ರಿ ಮಲ್ಲಪ್ಪ, ಸುಧಾಕರ್‌, ಗಿರೀಶ್‌, ಮಾಲತೇಶ್‌ ಜಗದೀಶ್‌, ಎಸ್‌. ಚಂದ್ರಶೇಖರ್‌, ಅಣ್ಣಪ್ಪ ಮತ್ತಿತರರಿದ್ದರು.

ಸಿಎಂ ಸಿದ್ದರಾಮಯ್ಯ ತವರಲ್ಲಿ ಬಿಜೆಪಿ ಅತೃಪ್ತಿಗೆ ಮದ್ದರೆದ ಬಿ.ವೈ.ವಿಜಯೇಂದ್ರ!

ಬಂಗಾರಪ್ಪ ಚುನಾವಣೆಗೆ ಇದೇ ಚೇಲಾಗಳಿಂದ ಬೆಂಬಲ: ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರ ಚೇಲಾಗಳೆಂದು ಉಲ್ಲೇಖಿಸಿದ್ದಾರೆ. ಇವರು ಬಿಜೆಪಿ ಕಾರ್ಯಕರ್ತರಿಗೆ ಚೇಲಾ ಎಂದು ಕರೆಯುವುದೇ ಹೌದಾದರೆ, ಇದೇ ಚೇಲಾಗಳೇ ನಿಮ್ಮ ತಂದೆಯವರಿಗೆ ಚುನಾವಣೆಯಲ್ಲಿ ಬೆಂಬಲಕ್ಕೆ ನಿಂತವರು ಎಂಬುದು ಮರೆಯಬಾರದು ಎಂದು ಟಾಂಗ್‌ ನೀಡಿದರು. ಜೊತೆಗೆ ಮಧು ಬಂಗಾರಪ್ಪನವರು ಪುಕ್ಸಟೆ ದುಡ್ಡು, ಹಡಬಿಟ್ಟಿ ದುಡ್ಡು ಇಂತಹ ಕೆಟ್ಟ ಭಾಷೆಗಳ ಬಳಸುತ್ತಿದ್ದಾರೆ. ಇವರ ಇಂತಹ ಮಾತುಗಳ ಬಗ್ಗೆ ಸ್ವತಃ ಕಾಂಗ್ರೆಸ್‌ ಪಕ್ಷದಲ್ಲಿಯೇ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಎಂದು ರಾಘವೇಂದ್ರ ಹೇಳಿದರು.

Latest Videos
Follow Us:
Download App:
  • android
  • ios