ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿದ ನಾಲ್ಕೇ ದಿನದಲ್ಲಿ ಕಾಂಗ್ರೆಸ್ 43 ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಿದ್ದು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಪುತ್ರ ನಕುಲ್‌ನಾಥ್‌, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಗೆಹ್ಲೋಟ್‌ ಸೇರಿದಂತೆ ಹಲವು ಪ್ರಮುಖರಿಗೆ ಟಿಕೆಟ್‌ ನೀಡಲಾಗಿದೆ. 


ನವದೆಹಲಿ: ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿದ ನಾಲ್ಕೇ ದಿನದಲ್ಲಿ ಕಾಂಗ್ರೆಸ್ 43 ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಿದ್ದು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಪುತ್ರ ನಕುಲ್‌ನಾಥ್‌, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಗೆಹ್ಲೋಟ್‌ ಸೇರಿದಂತೆ ಹಲವು ಪ್ರಮುಖರಿಗೆ ಟಿಕೆಟ್‌ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. ಕಾಂಗ್ರೆಸ್‌ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಯಾವ ಅಭ್ಯರ್ಥಿಯೂ ಸ್ಥಾನ ಪಡೆದಿಲ್ಲ. ಇದರೊಂದಿಗೆ ಕಾಂಗ್ರೆಸ್‌ ಒಟ್ಟು82 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಕಮಲ್‌ನಾಥ್‌ ಪುತ್ರ ನಕುಲ್‌ನಾಥ್‌ ಮಧ್ಯಪ್ರದೇಶದ ಛಿದ್ವಾಡಾದಿಂದ, ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಗೆಹ್ಲೋಟ್‌ ರಾಜಸ್ಥಾನದ ಜಾಲೋರ್‌ನಿಂದ, ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪನಾಯಕ ಗೌರವ್‌ ಗೊಗೋಯ್‌ ಅಸ್ಸಾಂನ ಜೋರ್ಹಾಟ್‌ನಿಂದ, ಇತ್ತೀಚೆಗೆ ಕಾಂಗ್ರೆಸ್‌ ಸೇರ್ಪಡೆ ಆಗಿದ್ದ ಬಿಜೆಪಿ ಸಂಸದ ರಾಹುಲ್‌ ಕಸ್ವಾನ್‌ ರಾಜಸ್ಥಾನದ ಚುರುನಿಂದ ಕಣಕ್ಕಿಳಿಯಲಿದ್ದಾರೆ.

ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಅಸ್ಸಾಂನಲ್ಲಿ 13, ಮಧ್ಯಪ್ರದೇಶ, ರಾಜಸ್ಥಾನದ 10, ಗುಜರಾತ್‌ನಿಂದ 7, ಉತ್ತರಾಖಂಡದಿಂದ 3ರ ಜೊತೆಗೆ ದಿಯು ದಾಮನ್‌ನಲ್ಲಿರುವ ಏಕೈಕ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಅಭ್ಯರ್ಥಿಗಳಲ್ಲಿ 33 ಮಂದಿ ಹಿಂದುಳಿದ ಜನಾಂಗಕ್ಕೆ ಸೇರಿದ್ದು, 25 ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.