ಪಕ್ಷ ಹೇಳಿದ್ರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ: ಜಗದೀಶ್ ಶೆಟ್ಟರ್
ನಾನು ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಯಾವ ಕ್ಷೇತ್ರವನ್ನೂ ಕೇಳಿಲ್ಲ. ಪಕ್ಷದ ತೀರ್ಮಾನವೇ ಅಂತಿಮ. ಪಕ್ಷ ಹೇಳಿದರೆ ಚುನಾವಣೆಗೆ ನಿಲ್ಲುತ್ತೇನೆ. ಇಲ್ಲದಿದ್ದರೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ (ಮಾ.13): ನಾನು ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಯಾವ ಕ್ಷೇತ್ರವನ್ನೂ ಕೇಳಿಲ್ಲ. ಪಕ್ಷದ ತೀರ್ಮಾನವೇ ಅಂತಿಮ. ಪಕ್ಷ ಹೇಳಿದರೆ ಚುನಾವಣೆಗೆ ನಿಲ್ಲುತ್ತೇನೆ. ಇಲ್ಲದಿದ್ದರೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಹಾವೇರಿ, ಬೆಳಗಾವಿಯಿಂದ ನನ್ನನ್ನು ಕರೆಯುತ್ತಿದ್ದಾರೆ. ಆದರೆ, ಹುಬ್ಬಳ್ಳಿ-ಧಾರವಾಡಕ್ಕೆ ಬಹಳ ಜನ ಬೆಂಬಲ ತೋರಿಸುತ್ತಿದ್ದಾರೆ. ಹಿಂದೆ ನನಗೆ ಲೋಕಸಭೆ ಚುನಾವಣೆಗೆ ನಿಲ್ಲಲು ಅವಕಾಶ ಸಿಕ್ಕರೂ ಹೋಗಿರಲಿಲ್ಲ.
ಮೂರು ಸಲ ಅವಕಾಶ ಬಂದಿತ್ತು. ನನಗೆ ಆಸಕ್ತಿ ಇರಲಿಲ್ಲ. ಆದರೆ, ಈಗ ಜನರ ಒತ್ತಡ ಬಹಳಷ್ಟಿದೆ. ಪಕ್ಷದ ನಾಯಕರು ಹೇಳಿದರೆ ನಾನು ಸ್ಪರ್ಧೆಗೆ ಸಿದ್ಧ ಎಂದು ಶೆಟ್ಟರ್ ಹೇಳಿದರು. ತಮ್ಮ ಮತ್ತು ಪ್ರಹ್ಲಾದ ಜೋಶಿ ಮುನಿಸಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ನಾನು ಎಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಎಂದಷ್ಟೇ ಹೇಳಿದರು.
ಶಾಮನೂರು ಅವರಿಗೆ ಬಿಜೆಪಿ ಆಫರ್ ನೀಡಿದೆಯಂತೆ ಎಂಬ ಪ್ರಶ್ನೆಗೆ, ಡಿ.ಕೆ.ಶಿವಕುಮಾರ ಸುಳ್ಳು ಹೇಳುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಮೌನವೇ ಉತ್ತರ!: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಸ್ಥಳೀಯವಾಗಿಯೇ ಶೆಟ್ಟರ್ ಇದ್ದರೂ ಸಹ ಹುಬ್ಬಳ್ಳಿಯಲ್ಲಿ ನಡೆದ ವಿಕಸಿತ ಭಾರತ ಅಭಿಯಾನ ಹಾಗೂ ವಿಮಾನ ನಿಲ್ದಾಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ಬಿಜೆಪಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡದ ವಿಚಾರಕ್ಕೆ ಮೌನದಿಂದಲೇ ಉತ್ತರಿಸಿದ ಜಗದೀಶ ಶೆಟ್ಟರ್, ಆಹ್ವಾನದ ವಿಚಾರವಾಗಿ ನಾನು ಏನನ್ನೂ ಮಾತನಾಡುವುದಿಲ್ಲ, ಮೌನವೇ ಅದಕ್ಕೆ ಉತ್ತರ ಎಂದರು.