371(ಜೆ) ಕಲಂ ತಿದ್ದುಪಡಿಗೆ ಎಲ್.ಕೆ. ಅಡ್ವಾನಿ ವಿರೋಧಿಸಿದ್ದರು: ಸಿದ್ದರಾಮಯ್ಯ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5 ಸಾವಿರ ಕೋಟಿ, ಬೀದರ್‌ನಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ
ಬೀದರ್(ಫೆ.05): ಈ ಭಾಗದ ಸರ್ವಾಂಗಿಣ ಅಭಿವೃದ್ಧಿ ಹಾಗೂ ಯುವಕರಿಗೆ ಉನ್ನತ ಶಿಕ್ಷಣ, ಉದ್ಯೋಗದಲ್ಲಿ ಅವಕಾಶ ಸಿಗುವ ಉದ್ದೇಶದಿಂದ ಸಂವಿಧಾನದ 371(ಜೆ) ತಿದ್ದುಪಡಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರೆ ಅಂದಿನ ಉಪಪ್ರಧಾನಿ ಲಾಲ್‌ಕೃಷ್ಣ ಅಡ್ವಾನಿ ತಿರಸ್ಕರಿಸಿದ್ದರು. ನಂತರ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ಇದನ್ನು ಮಾಡಿಸಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಅವರು ಬೀದರ್‌ನ ಗಣೇಶ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಅವರಿಗೆ ಅಭಿವೃದ್ಧಿ, ಯುವಕರಿಗೆ ಉದ್ಯೋಗ ನೀಡುವ ಉದ್ದೇಶ ಇರಲ್ಲ ಕೇವಲ ಜನರಿಗೆ ಸುಳ್ಳು ಹೇಳುವ ಮೂಲಕ ಅಧಿಕಾರಕ್ಕೆ ಬರುವುದು ಒಂದೆ ಗೊತ್ತು ಎಂದರು.
ಈ ಭಾಗದ ಅಭಿವೃದ್ಧಿಗೆ ಬಸವರಾಜ ಬೊಮ್ಮಾಯಿ ಅವರು 1500 ಕೋಟಿ ಇಟ್ಟಿದ್ದರು, ನಂತರ 3 ಸಾವಿರ ಕೋಟಿ ನೀಡುತ್ತೇನೆ ಎಂದರು, ಆದರೆ ಇಲ್ಲಿಯವರೆಗೆ ನೀಡಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 5 ಸಾವಿರ ಕೋಟಿ ರು. ಕೊಡುತ್ತೇವೆ. ಈ ಭಾಗದಲ್ಲಿ ಖಾಲಿ ಇರುವ 36 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂಬ ಭರವಸೆ ಸಿದ್ದರಾಮಯ್ಯ ನೀಡಿದರು.
'ವೇಸ್ಟ್ ಫೆಲ್ಲೊ, ನಾನ್ ಸೆನ್ಸ್' ಎಂದು ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ
ನಾವು ಅಧಿಕಾರಕ್ಕೆ ಬಂದರೆ ಬಡವರಿಗೆ ನೀಡುವ ಅಕ್ಕಿ 5 ಕೆ.ಜಿ. ಯಿಂದ 10 ಕೆ.ಜಿ. ಗೆ ಏರಿಸುತ್ತೇವೆ, 200 ಯುನಿಟ್ ವಿದ್ಯುತ್ ಉಚಿತ, ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ರು. ನೇರವಾಗಿ ಅವರ ಖಾತೆಗೆ ಜಮಾ ಆಗುತ್ತದೆ ಎಂದು ಹೇಳಿದರು. ಬಸವಾದಿ ಶರಣರು ನುಡಿದಂತೆ ನಡೆದಿದ್ದರು, ನಾವು ಕೂಡ ಕೊಟ್ಟಮಾತಿನಂತೆ ನಡೆಯುತ್ತೇವೆ. ಈ ಹಿಂದೆ ಕೂಡ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳು ಈಡೇರಿಸಿದ್ದೇನೆ. ಎಂದರು.
ಸ್ವಾಭಿಮಾನ ಇದ್ದರೆ ಬಿಜೆಪಿಗೆ ಓಟ ಹಾಕಬೇಡಿ:
ಈ ಭಾಗದ ಕೋಲಿ, ಕಬ್ಬಲಿಗ, ಗೋಂಡ ಜಾತಿಗಳಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಲು ನಾನು ಸಿಎಂ ಇದ್ದಾಗ ಕೇಂದ್ರಕ್ಕೆ 3 ಸಲ ಶಿಫಾರಸ್ಸು ಮಾಡಿದ್ದೆ, ಆದರೆ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ಹೀಗಾಗಿ ಈ ಸಮಾಜಗಳಿಗೆ ಸ್ವಾಭಿಮಾನ ಇದ್ದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಓಟು ಕೂಡ ಹಾಕಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಜಾತಿ ರಾಜಕಾರಣ ಮಾಡೋರಿಗೆ ಪಾಠ ಕಲಿಸಿ:
ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರು ಅಭಿವೃದ್ಧಿ ಬಗ್ಗೆ ಮಾತನಾಡದೇ ಲವ ಜೀಹಾದ್ ಬಗ್ಗೆ ಮಾತನಾಡಿ ಜನರನ್ನು ಉದ್ರೇಕವನ್ನಾಗಿಸಿ ವೈಮನಸ್ಸು ಉಂಟು ಮಾಡುತ್ತಿದ್ದಾರೆ. ಹೀಗೆ ದಿನ ಬೆಳಗಾದರೆ ಕೋಮುವಾದ, ಹಿಂದುತ್ವ, ದ್ವೇಷ ಹಾಗೂ ವೀಷ ಬೀಜ ಬಿತ್ತುವ ಮೂಲಕ ಜಾತಿ ರಾಜಕಾರಣ ಮಾಡುವ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಮನವಿ ಮಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬಿಸುತ್ತಿದೆ. ಬಿಜೆಪಿ ವಿರುದ್ಧ ಜನ ಬೇಸತ್ತಿದ್ದಾರೆ ಎಂದರು.
ಎಷ್ಟೆ ಆಕಾಂಕ್ಷಿಗಳಿದ್ದರು ಟಿಕೇಟ್ ಮಾತ್ರ ಒಬ್ಬರಿಗೆ:
ಬೀದರ್ ಉತ್ತರ ಕ್ಷೇತ್ರದಿಂದ 6 ಜನ ಆಕಾಂಕ್ಷಿಗಳಿದ್ದರೆ, ಬೀದರ್ ದಕ್ಷಿಣದಲ್ಲಿ 8 ಜನ ಆಕಾಂಕ್ಷಿಗಳಿದ್ದಾರೆ. ಟಿಕೇಟ್ ಸಿಗುವುದು ಒಬ್ಬರಿಗೆ ಮಾತ್ರ, ಹೀಗಾಗಿ ಪಕ್ಷದಿಂದ ಯಾರಿಗೆ ಟಿಕೇಟ್ ಸಿಕ್ಕರೂ ಎಲ್ಲರು ಒಟ್ಟಾಗಿ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಿ ತರಬೇಕು ಎಂದು ಮನವಿ ಮಾಡಿದರು.
ಬೀದರ್: ಪತ್ರಕರ್ತರಿಗೆ ಅವಮಾನಿಸಿದ ಕಾಂಗ್ರೆಸ್ ಪ್ರಜಾಧ್ವನಿ ವೇದಿಕೆ
ಎರಡು ಕ್ಷೇತ್ರದ ಕಾರ್ಯಕ್ರಮ ಒಟ್ಟಿಗೆ ಆಯೋಜಿಸಿದ್ದೇವೆ. ಬೀದರ್ ಉತ್ತರದಲ್ಲಿ ರಹೀಮ್‌ಖಾನ್‌ಗೆ 4ನೇ ಬಾರಿಗೆ ಗೆಲ್ಲಿಸಿ, ಅದೇ ರೀತಿ ದಕ್ಷಿಣ ಕ್ಷೇತ್ರದಲ್ಲಿ ಅಶೋಕ ಖೇಣಿಗೆ ಮತ್ತೋಮ್ಮೆ ಆಶಿರ್ವದಿಸಿ ಎಂದು ಸಿದ್ದರಾಮಯ್ಯ ಹೇಳುವ ಮೂಲಕ ಆಕಾಂಕ್ಷಿಗಳಲ್ಲಿ ಸಂಚಲನ ಮೂಡಿಸಿದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಪ್ರಜಾಧ್ವನಿ ಯಾತ್ರೆಯ ಅಧ್ಯಕ್ಷರಾದ ಬಸವರಾಜ ರಾಯರೆಡ್ಡಿ, ಪ್ರಕಾಶ ರಾಠೋಡ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಜಮೀರ ಅಹ್ಮದ್‌ಖಾನ್, ಎಂಎಲ್‌ಸಿ ಡಾ. ಚಂದ್ರಶೇಖರ ಪಾಟೀಲ್, ಅರವಿಂದ ಅರಳಿ, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ಶಾಸಕ ಅಶೋಕ ಖೇಣಿ, ವಿಜಯಸಿಂಗ್, ಅಮೃತ ಚಿಮಕೋಡ, ಗೀತಾ ಚಿದ್ರಿ, ಮಿನಾಕ್ಷಿ ಸಂಗ್ರಾಮ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.