ಇಂದು 100ಕ್ಕೂ ಅಧಿಕ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಎಚ್.ಡಿ.ಕುಮಾರಸ್ವಾಮಿ
ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರು (ಡಿ.16): ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಅದರಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ರಾಮನಗರದಲ್ಲಿ ಶುಕ್ರವಾರ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಕಲ್ಯಾಣೋತ್ಸವ ಮುಗಿದ ನಂತರ ದೇವರ ಅನುಗ್ರಹ ಪಡೆದು 97 ರಿಂದ 116 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ರಾಮನಗರದಲ್ಲಿ ಶುಕ್ರವಾರ ಸಂಜೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ನಡೆಯಲಿದೆ. ಕಾರ್ಯಕ್ರಮ ಮುಗಿದ ಬಳಿಕ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಪಂಚರತ್ನ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೆಡಿಎಸ್‌ಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಾತಾವರಣ ಇದೆ ಎಂದರು.
ಎಚ್‌ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್ ಕುಮಾರಸ್ವಾಮಿ
ನಿಖಿಲ್ ಸ್ಪರ್ಧೆ ಜನರೇ ತೀರ್ಮಾನ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯವನ್ನು ನನಗೆ ರಾಜಕೀಯವಾಗಿ ಜನ್ಮ ಕೊಟ್ಟಜನರೇ ತೀರ್ಮಾನ ಮಾಡುತ್ತಾರೆ. ರಾಮನಗರದಿಂದ ನಾನು ಸ್ಪರ್ಧೆ ಮಾಡಬೇಕೇ? ಅಥವಾ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕೇ ಎಂಬುದನ್ನು ಜನ ನಿರ್ಧಾರ ಮಾಡುತ್ತಾರೆ. ನಿಖಿಲ್ ಕುಮಾರಸ್ವಾಮಿ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರ ಹೆಸರನ್ನು ಘೋಷಣೆ ಮಾಡುವುದಕ್ಕೆ ನನಗೆ ಯಾವುದೇ ಅಂಜಿಕೆ ಇಲ್ಲ. ನನಗೆ ನಿಖಿಲ್ ಅವರನ್ನು ಹೇಗೆ ದಡ ಸೇರಿಸುವುದು ಎಂಬ ಚಿಂತೆ ಇಲ್ಲ. ನನಗೆ ಇರುವುದು ನಾಡಿನ ಜನರ ಚಿಂತೆ ಎಂದರು.
ಪಟ್ಟಿಯಲ್ಲಿ ನಿಖಿಲ್ ಹೆಸರು?: ಶುಕ್ರವಾರ ಜೆಡಿಎಸ್ ಬಿಡುಗಡೆ ಮಾಡುವ ಮೊದಲ ಪಟ್ಟಿಯಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರು ಸಹ ಇರುವ ಸಾಧ್ಯತೆ ಇದೆ. ಪುತ್ರನಿಗೆ ರಾಜಕೀಯ ಭವಿಷ್ಯ ರೂಪಿಸುವ ಉದ್ದೇಶದಿಂದ ರಾಮನಗರದಿಂದ ಅವರನ್ನು ವಿಧಾನಸಭೆ ಚುನಾವಣೆಗೆ ಕುಮಾರಸ್ವಾಮಿ ಕಣಕ್ಕಿಳಿಸುವ ನಿರೀಕ್ಷೆ ಇದೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯ ಬಗ್ಗೆ ಸದ್ಯಕ್ಕೆ ಎಚ್.ಡಿ.ಕುಮಾರಸ್ವಾಮಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಮೂಲಗಳ ಪ್ರಕಾರ ರಾಮನಗರ ಕ್ಷೇತ್ರದಿಂದ ಕಣಕ್ಕಿಳಿಸಿ ರಾಜಕೀಯ ಭವಿಷ್ಯವನ್ನು ರೂಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಹೀಗಾಗಿ ಈ ಬಾರಿ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಸುವ ಚಿಂತನೆಯನ್ನು ಕುಮಾರಸ್ವಾಮಿ ಅವರು ಮಾಡಿದ್ದಾರೆ ಎನ್ನಲಾಗಿದೆ. ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ, ಚನ್ನಪಟ್ಟಣ ಕ್ಷೇತ್ರದಿಂದ ತಾವು ಸ್ಪರ್ಧಿಸುವ ಯೋಚನೆ ಕುಮಾರಸ್ವಾಮಿ ಅವರಿಗೆ ಎಂದು ಹೇಳಲಾಗಿದೆ.
ಜೆಡಿಎಸ್ ಗ್ರಾಫ್ ಏರ್ತಿದೆ, 123 ಸೀಟು ಗೆಲ್ತೀವಿ: ಎಚ್.ಡಿ.ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯವನ್ನು ನನಗೆ ರಾಜಕೀಯವಾಗಿ ಜನ್ಮಕೊಟ್ಟಜನರೇ ತೀರ್ಮಾನಿಸುತ್ತಾರೆ. ರಾಮನಗರದಿಂದ ನಾನು ಸ್ಪರ್ಧೆ ಮಾಡಬೇಕೇ, ಅಥವಾ ಅನಿತಾ ಸ್ಪರ್ಧಿಸಬೇಕೇ ಅಥವಾ ನಿಖಿಲ್ ಸ್ಪರ್ಧಿಸಬೇಕೇ ಎಂಬುದನ್ನೂ ಜನರೇ ನಿರ್ಧರಿಸುತ್ತಾರೆ. ನಿಖಿಲ್ ಹೆಸರು ಘೋಷಿಸುವುದಕ್ಕೆ ನನಗೆ ಯಾವುದೇ ಅಂಜಿಕೆ ಇಲ್ಲ. ಅವರನ್ನು ಹೇಗೆ ದಡ ಸೇರಿಸಬೇಕೆಂಬ ಚಿಂತೆ ನನಗಿಲ್ಲ.
- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ