ಸಂಕ್ರಾಂತಿಯೊಳಗೆ ಮೊದಲ ‘ಕೈ’ ಪಟ್ಟಿ  ಖರ್ಗೆ ಭೇಟಿ ಬಳಿಕ ಡಿಕೆಶಿ ಹೇಳಿಕೆ ಇನ್ನು 3-4 ಜಿಲ್ಲೆ ಸಭೆ ಮಾತ್ರ ಬಾಕಿ

ಬೆಂಗಳೂರು (ಜ.2) : ವಿಧಾನಸಭೆ (ಚುನಾವಣೆಗೆ ಅಭ್ಯರ್ಥಿಗಳ ಶಿಫಾರಸ್ಸಿನ ಕುರಿತು 3-4 ಜಿಲ್ಲೆಗಳ ಸಭೆ ಮಾತ್ರ ಬಾಕಿಯಿದೆ. ಸಂಕ್ರಾಂತಿಯೊಳಗೆ ಮೊದಲ ಪಟ್ಟಿಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ ಹೊಸ ವರ್ಷದ ಶುಭಾಶಯ ತಿಳಿಸಿದ ಅವರು ಸುದೀರ್ಘ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ತುಂಬು ಹೃದಯದಿಂದ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ. ಕಳೆದ ಮೂರು ವರ್ಷಗಳಿಂದ ರಾಜ್ಯಕ್ಕೆ ಬಂದಿರುವ ಕಳಂಕವನ್ನು 2023ರಲ್ಲಿ ತೆಗೆದುಹಾಕುವ ಕೆಲಸ ಮಾಡಬೇಕು. ಈ ರಾಜ್ಯದ ಜನರು ಈ ಸರ್ಕಾರವನ್ನು ಕಿತ್ತೊಗೆದು ಬದಲಾವಣೆ ತರುತ್ತಾರೆಂದು ನಾನು ನಂಬಿದ್ದೇನೆ ಎಂದರು.

ಏನ್‌ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ: ಡಿ.ಕೆ.ಶಿವಕುಮಾರ್‌

ವಿಧಾನಸಭೆ ಚುನಾವಣೆ(Assembly election)ಗೆ ಅಭ್ಯರ್ಥಿಗಳ ಶಿಫಾರಸಿಗೆ ಜಿಲ್ಲಾ ಸಮಿತಿಗಳಿಗೆ ಡಿ.31ರವರೆಗೆ ಗಡುವು ನೀಡಿದ್ದೆವು. 3-4 ಜಿಲ್ಲೆಗಳಲ್ಲಿ ಇನ್ನೂ ಸಭೆ ನಡೆದಿಲ್ಲ. ಮೂರು ದಿನಗಳಲ್ಲಿ ಲಿಸ್ಟ್‌ ಕಳುಹಿಸಲಿದ್ದು, ಬಳಿಕ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಹೀಗಾಗಿ ಸಂಕ್ರಾಂತಿಯೊಳಗೆ ಮೊದಲ ಪಟ್ಟಿಬಿಡುಗಡೆ ಸಾಧ್ಯತೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಬಗ್ಗೆ ಕೇಂದ್ರಕ್ಕೆ ವಿಶ್ವಾಸವಿಲ್ಲ:

ಈ ಹಿಂದೆ ಅಮಿತ್‌ ಶಾ(Amit shah) ಅವರು ಬೊಮ್ಮಾಯಿ(Basavaraj bommai) ನಾಯಕತ್ವದಲ್ಲೇ ಚುನಾವಣೆ(Election) ನಡೆಯುತ್ತದೆ ಎಂದು ಹುಬ್ಬಳ್ಳಿ(Hubballi)ಯಲ್ಲಿ ಹೇಳಿದ್ದರು. ಇದೀಗ ನರೇಂದ್ರ ಮೋದಿ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ತನ್ಮೂಲಕ ರಾಜ್ಯ ಕಾಂಗ್ರೆಸ್‌ ನಾಯಕರಿಗೆ(Congress leaders) ಯಾವೊಬ್ಬ ರಾಜ್ಯ ಬಿಜೆಪಿ ನಾಯಕರೂ(BJP Leaders) ಪ್ರತಿಸ್ಪರ್ಧಿಯಲ್ಲ. ಅವರಿಗೆ ಆ ಸಾಮರ್ಥ್ಯವಿಲ್ಲ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ತನ್ಮೂಲಕ ಕಳೆದ ಮೂರು ವರ್ಷಗಳ ದುರಾಡಳಿತದ ಬಗ್ಗೆ ಪ್ರಮಾಣಪತ್ರ ನೀಡಿದ್ದಾರೆ. ಹೀಗಾಗಿ ಅಮಿತ್‌ ಶಾ ಅವರನ್ನು ಅಭಿನಂದಿಸುತ್ತೇನೆ ಎಂದರು.

ಸಾಮೂಹಿಕ ನಾಯಕತ್ವ:

ಕಾಂಗ್ರೆಸ್‌ ಪಕ್ಷವು ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಪರಮೇಶ್ವರ್‌, ಎಚ್‌.ಕೆ.ಪಾಟೀಲ…, ಎಂ.ಬಿ.ಪಾಟೀಲ…, ಹರಿಪ್ರಸಾದ್‌ ಸೇರಿದಂತೆ ಹಲವು ನಾಯಕರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ನಮ್ಮ ಸಾಮೂಹಿಕ ನಾಯಕತ್ವವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದು ಪ್ರಧಾನಮಂತ್ರಿಗಳ ಹೆಸರನ್ನು ಮುಂಚೂಣಿಗೆ ಇಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರದ ಆಡಳಿತ ಸಂಪೂರ್ಣ ವಿಫಲ ಆಗಿದೆ ಎಂಬುದಕ್ಕೆ ಅವರ ನುಡಿಮುತ್ತುಗಳೇ ಸಾಕ್ಷಿ ಎಂದು ಹೇಳದರು.

2023ರಲ್ಲಿ ಬದಲಾವಣೆ ಆಗುತ್ತೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರುತ್ತೆ: ಡಿಕೆಶಿ

ಬಿಜೆಪಿ ಹಿಂದೂ ಅಜೆಂಡಾ ಪ್ರಯೋಗಿಸಲಿದೆಯೇ ಎಂಬ ಪ್ರಶ್ನೆಗೆ, ‘ಅವರು ಭಾವನೆ ಮೇಲೆ ಹೋದರೆ ನಾವು ಬದುಕಿನ ಮೇಲೆ ಹೋಗುತ್ತೇವೆ. ಭಾವನೆ ಮತ್ತು ಬದುಕಿನ ನಡುವೆ ವ್ಯತ್ಯಾಸವಿದೆ. ಅವರು ಏನು ಮಾಡಿದರೂ ತೊಂದರೆ ಇಲ್ಲ. ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಬಿಜೆಪಿಯವರ ಆಚಾರ-ವಿಚಾರ, ದುರಾಡಳಿತವನ್ನು ಜನ ನೋಡಿದ್ದಾರೆ’ ಎಂದು ತಿಳಿಸಿದರು.