42 ಮಂದಿಯ 2ನೇ ಪಟ್ಟಿಯಲ್ಲಿ ಒಕ್ಕಲಿಗರಿಗೆ 12, ಲಿಂಗಾಯತರಿಗೆ 11 ಸೀಟು, ಎರಡೂ ಪಟ್ಟಿಯಲ್ಲಿ ಲಿಂಗಾಯತರು- ಒಕ್ಕಲಿಗರಿಗೇ ಅರ್ಧಕ್ಕಿಂತ ಹೆಚ್ಚು ಟಿಕೆಟ್‌. 

ಬೆಂಗಳೂರು(ಏ.07): ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲೂ ಕಾಂಗ್ರೆಸ್‌ ಪಕ್ಷವು ಲಿಂಗಾಯತರು, ಒಕ್ಕಲಿಗರಿಗೆ ಮಣೆ ಹಾಕಿದೆ. 42 ಮಂದಿಯ ಪಟ್ಟಿಯಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸೇರಿದಂತೆ ಒಕ್ಕಲಿಗರಿಗೆ 12, ಲಿಂಗಾಯತರಿಗೆ 11 ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ತನ್ಮೂಲಕ ಕಾಂಗ್ರೆಸ್‌ ಟಿಕೆಟ್‌ ಪೈಕಿ ಶೇ.29ರಷ್ಟುಸ್ಥಾನ ಒಕ್ಕಲಿಗರಿಗೆ, ಶೇ.26ರಷ್ಟುಸ್ಥಾನಗಳನ್ನು ಲಿಂಗಾಯತರಿಗೆ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಪ್ರಕಟವಾಗಿದ್ದ 124 ಸೇರಿ ಒಟ್ಟು 166 ಸ್ಥಾನಗಳ ಪೈಕಿ ಲಿಂಗಾಯತರಿಗೆ 41, ಒಕ್ಕಲಿಗರಿಗೆ 39 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ದೊರಕಿದಂತಾಗಿದೆ.

ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆ: 42 ಕ್ಷೇತ್ರಗಳ ಅಭ್ಯರ್ಥಿಗಳು ಇಲ್ಲಿದ್ದಾರೆ ನೋಡಿ..

ಗುರುವಾರ ಒಟ್ಟು 42 ಹೆಸರುಗಳ ಪಟ್ಟಿಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಮೇಲುಕೋಟೆಯಿಂದ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸುತ್ತಿರುವ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್‌ ಕ್ಷೇತ್ರ ಬಿಟ್ಟುಕೊಟ್ಟಿದೆ. ಹೀಗಾಗಿ ದರ್ಶನ್‌ ಸೇರಿದರೆ ಒಟ್ಟು 12 ಮಂದಿ ಒಕ್ಕಲಿಗರಿಗೆ ಎರಡನೇ ಪಟ್ಟಿಯಲ್ಲಿ ಅವಕಾಶ ನೀಡಿದಂತಾಗುತ್ತದೆ.

ಲಿಂಗಾಯತರಿಗೆ 11 ಸ್ಥಾನ, ಹಿಂದುಳಿದ ವರ್ಗಗಳ ಪೈಕಿ ಕುರುಬ 3, ಮರಾಠ 2, ರಜಪೂತ 1, ಈಡಿಗ 1, ಬಲಿಜಿಗ ನಾಯ್ಡು 1, ಈಡಿಗ 1, ಕೋಳಿ ಸಮಾಜ 1, ಬೆಸ್ತ-ಮೊಗವೀರ 1 ಸೇರಿದಂತೆ 11 ಕ್ಷೇತ್ರ, ಪರಿಶಿಷ್ಟಜಾತಿಗೆ 4 ಸ್ಥಾನ ನೀಡಿದ್ದು ಇದರಲ್ಲಿ ಎಡಗೈ ಸಮುದಾಯಕ್ಕೆ 2, ಬಲಗೈ ಸಮುದಾಯಕ್ಕೆ ಎರಡು ಕ್ಷೇತ್ರದ ಟಿಕೆಟ್‌ ಹಂಚಲಾಗಿದೆ. ಉಳಿದಂತೆ ಮುಸ್ಲಿಮರಿಗೆ 2 ಸ್ಥಾನ ಕಲ್ಪಿಸಲಾಗಿದೆ.

ರಾಹುಲ್‌ ಕರ್ನಾಟಕ ಪ್ರವಾಸ ಬಳಿಕ ಕಾಂಗ್ರೆಸ್‌ ಪಟ್ಟಿ ಬಿಡುಗಡೆ: ಡಿಕೆಶಿ

2ನೇ ಪಟ್ಟಿಯಲ್ಲಿ ಜಾತಿ ಲೆಕ್ಕಾಚಾರ
ಲಿಂಗಾಯತರು 11
ಒಕ್ಕಲಿಗ 12 (ದರ್ಶನ್‌ ಪುಟ್ಟಣ್ಣಯ್ಯ ಸೇರಿ)
ಪರಿಶಿಷ್ಟಜಾತಿ 4 (2 ಎಡ, 2 ಬಲ)
ಪರಿಶಿಷ್ಟಪಂಗಡ 2
ಹಿಂದುಳಿದ ವರ್ಗ 11 (ಕುರುಬ 3, ಮರಾಠ 2, ರಜಪೂತ 1, ಈಡಿಗ 1, ಬಲಿಜಿಗ ನಾಯ್ಡು 1, ಈಡಿಗ 1, ಕೋಳಿ ಸಮಾಜ 1, ಬೆಸ್ತ-ಮೊಗವೀರ 1)
ಮುಸ್ಲಿಂ 2
ಒಟ್ಟು 166 ಅಭ್ಯರ್ಥಿಗಳ ಜಾತಿ ಲೆಕ್ಕಾಚಾರ
ಲಿಂಗಾಯತ 41
ಒಕ್ಕಲಿಗ 39
ಪರಿಶಿಷ್ಟಜಾತಿ 26
ಪರಿಶಿಷ್ಟಪಂಗಡ 12
ಹಿಂದುಳಿದ ವರ್ಗ 30
ಮುಸ್ಲಿಂ 10
ಬ್ರಾಹ್ಮಣ 5
ಕ್ರಿಶ್ಚಿಯನ್‌ 1
ಜೈನ 1
ವೈಶ್ಯರು 1

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.