ಬೆಂಗಳೂರು(ಜ.14):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಬಹುತೇಕ ಭರ್ತಿಯಾದರೂ ಸುಮಾರು 12 ಜಿಲ್ಲೆಗಳಿಗೆ ಈಗಲೂ ಪ್ರಾತಿನಿಧ್ಯ ದೊರೆತಿಲ್ಲ.

"

ರಾಜಕೀಯ ಪ್ರಭಾವ ಹೊಂದಿರುವ ರಾಜಧಾನಿ ಬೆಂಗಳೂರು ನಗರ ಜಿಲ್ಲೆ ಉಪಮುಖ್ಯಮಂತ್ರಿ ಸೇರಿದಂತೆ ಎಂಟು ಸಚಿವ ಸ್ಥಾನಗಳ ಮೂಲಕ ಸಿಂಹಪಾಲು ಪಡೆದಿದೆ. ಇತ್ತ ಸದಾ ರಾಜಕೀಯ ತಂತ್ರಗಾರಿಕೆಯಿಂದ ಸದ್ದು ಮಾಡುವ ಬೆಳಗಾವಿ ಜಿಲ್ಲೆ ಸಹ ಉಪಮುಖ್ಯಮಂತ್ರಿ ಸೇರಿ ಐವರು ಸಚಿವರನ್ನು ದಕ್ಕಿಸಿಕೊಂಡಿದೆ. ಇದರ ನಂತರ ಹಾವೇರಿ ಜಿಲ್ಲೆಯ ಮೂವರು ಮಂತ್ರಿಗಳಾಗಿದ್ದಾರೆ. ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸೇರಿ ಇಬ್ಬರಿದ್ದಾರೆ. ಬಾಗಲಕೋಟೆಯಲ್ಲೂ ಒಬ್ಬ ಉಪಮುಖ್ಯಮಂತ್ರಿ ಹಾಗೂ ಒಬ್ಬ ಸಚಿವರಿದ್ದಾರೆ.

ಆದರೆ ಏಳು ಶಾಸಕರಿರುವ ದಾವಣಗೆರೆ, ಕಲುಬರಗಿ, ಮಡಿಕೇರಿ, ಮೈಸೂರು, ಉಡುಪಿ, ಚಿಕ್ಕಮಗಳೂರು, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಈ ಬಾರಿಯೂ ನಿರಾಸೆ ಮೂಡಿದೆ. ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರಿಲ್ಲದಿದ್ದರೂ ವಿಧಾನಪರಿಷತ್‌ ಸದಸ್ಯರಿಗೆ ಅವಕಾಶ ಕೊಡಲಾಗಿದೆ.

ಸಂಪುಟಕ್ಕೆ ನೂತನ ಸಚಿವರ ಎಂಟ್ರಿ: ಯಾರಿಗೆ ಯಾವ ಖಾತೆ?

ಪ್ರಾತಿನಿಧ್ಯ ಸಿಕ್ಕಿದ ಜಿಲ್ಲೆಗಳು:

ಶಿವಮೊಗ್ಗ- ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ. ಬೆಂಗಳೂರು ನಗರ- ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರ್‌.ಅಶೋಕ್‌, ಎಸ್‌.ಸುರೇಶ್‌ ಕುಮಾರ್‌, ವಿ.ಸೋಮಣ್ಣ, ಕೆ.ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌, ಅರವಿಂದ್‌ ಲಿಂಬಾವಳಿ. ಹಾವೇರಿ- ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್‌, ಎಸ್‌.ಶಂಕರ್‌. ಉಡುಪಿ- ಕೋಟ ಶ್ರೀನಿವಾಸ ಪೂಜಾರಿ. ದಕ್ಷಿಣ ಕನ್ನಡ- ಎಸ್‌.ಅಂಗಾರ. ತುಮಕೂರು- ಜೆ.ಸಿ.ಮಾಧುಸ್ವಾಮಿ, ಗದಗ- ಸಿ.ಸಿ.ಪಾಟೀಲ್‌. ಬೀದರ್‌- ಪ್ರಭು ಚವ್ಹಾಣ್‌. ಬೆಳಗಾವಿ- ಲಕ್ಷಣ್‌ ಸವದಿ, ಶಶಿಕಲಾ ಜೊಲ್ಲೆ, ರಮೇಶ್‌ ಜಾರಕಿಹೊಳಿ, ಉಮೇಶ್‌ ಕತ್ತಿ, ಶ್ರೀಮಂತ್‌ ಪಾಟೀಲ್‌. ಬಳ್ಳಾರಿ-ಆನಂದ್‌ ಸಿಂಗ್‌. ಧಾರವಾಡ- ಜಗದೀಶ್‌ ಶೆಟ್ಟರ್‌. ಚಿತ್ರದುರ್ಗ- ಬಿ.ಶ್ರೀರಾಮುಲು. ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್‌. ಮಂಡ್ಯ-ನಾರಾಯಣಗೌಡ, ಉತ್ತರ ಕನ್ನಡ- ಶಿವರಾಮ್‌ ಹೆಬ್ಬಾರ್‌. ರಾಮನಗರ- ಸಿ.ಪಿ.ಯೋಗೇಶ್ವರ್‌. ಬಾಗಲಕೋಟೆ- ಗೋವಿಂದ ಕಾರಜೋಳ, ಮುರುಗೇಶ್‌ ನಿರಾಣಿ. ಬೆಂಗಳೂರು ಗ್ರಾಮಾಂತರ-ಎಂ.ಟಿ.ಬಿ ನಾಗರಾಜ್‌.