ಲಿಂಗಾಯತ ಸಿಎಂ ವಿಚಾರವಾಗಿ ಶಾಮನೂರಿಗೆ ಸಿಎಂ ತಿರುಗೇಟು!
ರಾಜ್ಯ ಸರ್ಕಾರದಲ್ಲಿ ಮತ್ತೆ ಸಿಎಂ ಕೂಗು ಎದ್ದಿದೆ. ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂದಿದ್ದರು. ಇದಕ್ಕೆ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಸೆ.30): ರಾಜ್ಯದಲ್ಲಿ ಮತ್ತೆ ಸಿಎಂ ಕೂಗು ಎದ್ದಿದೆ. ದಾವಣಗೆರೆಯ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಡಿಸಿಎಂ ಎಲ್ಲಾ ಯಾರಿಗೆ ಬೇಕು, ಮಾಡೋದಿದ್ರೆ ನಮ್ಮ ಸಮುದಾಯದ ವ್ಯಕ್ತಿಯನ್ನು ಸಿಎಂ ಮಾಡಿ ಎನ್ನುವ ಹೇಳಿಕೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಶನಿವಾರ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಸ್ವತಃ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಅದರೊಂದಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಈ ಸ್ಫೋಟಕ ಹೇಳಿಕೆಯ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರು ಬ್ಯಾರಿ ವೆಲ್‌ಫೇರ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ಧರಾಮಯ್ಯ ಅದರ ಬಳಿಕ, ಸರ್ಕಾರದಲ್ಲಿ ಲಿಂಗಾಯತರ ಕಡೆಗಣನೆಯ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ನಮ್ಮದೇ ಸರ್ಕಾರದಲ್ಲಿ 7 ಜನ ಮಂತ್ರಿಗಳು ಲಿಂಗಾಯತರೇ ಇದ್ದಾರೆ. ನನ್ನ ಬಳಿ ಇದರ ಅಂಕಿ ಅಂಶಗಳು ಕೂಡ ಇವೆ. ನಮ್ಮ ಸರ್ಕಾರ ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಏಕೆ ಹೀಗೆ ಹೇಳಿದ್ದಾರೆ ಎನ್ನುವ ಕುರಿತು ಅವರ ಬಳಿ ಚರ್ಚೆ ಮಾಡುತ್ತೇನೆ. ಅವರ ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ, ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಆಹಾರ ಮತ್ತು ನಾಗರೀಕ ಸಚಿವ ಕೆಎಚ್ ಮುನಿಯಪ್ಪ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆರೋಪದ ಬಗ್ಗೆ ಮಾತನಾಡಿದ್ದಾರೆ. ಐದು ವರ್ಷವೂ ನಮ್ಮ ಸರ್ಕಾರವೇ ಇರಲಿದೆ. ಶಾಮನೂರು ಶಿವಶಂರಪ್ಪನವರೂ ಸೇರಿದಂತೆ 224 ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೆ. ಶಾಮನೂರು ಅವರನ್ನೂ ಒಳಗೊಂಡಂತೆ ಎಲ್ಲರೂ ಸಹಮತದಿಂದಲೇ ಈಗಿನ ಸಿಎಂ ಆಯ್ಕೆ ಮಾಡಿದ್ದಾರೆ. ನಮ್ಮಲ್ಲೇನೇ ಬದಲಾವಣೆಗಳಿದ್ದರೂ ಬೇಡಿಕೆಗಳಿದ್ದರೂ ಅದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಎಲ್ಲರಿಗೂ ಮಾತನಾಡುವ ಅವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಸ್ಥಿತಿ ನಾಯಿಪಾಡು ಆಗಿದೆ ಎನ್ನುವ ಶಾಮನೂರು ಅವರ ಹೇಳೀಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹಿರಿಯರಾದ ಶಾಮನೂರು ಸರ್ ಅವರು ಹೇಳಿದ ವಿಚಾರ ನನ್ನ ಗಮನಕ್ಕೂ ಬಂದಿದೆ. ನಾನೂ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಯಾವುದೇ ಒಂದು ಸಮುದಾಯದಿಂದ ಕಾಂಗ್ರೆಸ್ ಸರ್ಕಾರ ಬಂದಿಲ್ಲ. ಹಿಂದೆಲ್ಲಾ ಲಿಂಗಾಯತ ಸಮಾಜ ಕಾಂಗ್ರೆಸ್ ಜೊತೆಗೆ ಇಲ್ಲ ಎಂಬ ಕೊರಗಿತ್ತು. ಆ ಕೊರಗು ಈಗ ಇಲ್ಲ. ಕೆಲವು ಅಧಿಕಾರಿಗಳು ನಮ್ಮ ಬಳಿಯೂ ಕೂಡ ಬಂದಿದ್ದರು. ನಾನೂ ಕೂಡ ವಿಷಯ ಮಾಹಿತಿ ಪಡೆದುಕೊಂಡಿದ್ದೇನೆ. ಸಂಬಂಧ ಪಟ್ಟ ಹಿರಿಯರ ಜೊತೆಗೆ ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಲಿಂಗಾಯತ ಡಿಸಿಎಂ ಯಾರಿಗೆ ಬೇಕು, ಮಾಡೋದಿದ್ರೆ ಸಿಎಂ ಮಾಡಿ: ಶಾಮನೂರು ಶಿವಶಂಕರಪ್ಪ ಸ್ಪೋಟಕ ಹೇಳಿಕೆ
ಗದಗದಲ್ಲಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಎಚ್‌ಕೆ ಪಾಟೀಲ್, ಪ್ರಜಾಪ್ರಭುತ್ವದಲ್ಲಿ ಪ್ರಭು ಬಹಳ ಎತ್ತರದಲ್ಲಿದ್ದಾನೆ ಜನರೇ ಜನಾರ್ಧನರು. ಅತ್ಯಂತ ಪರಿಣಾಮಕಾರಿ ಜನಸೇವೆಯಲ್ಲಿ ನಾನಿದ್ದೇನೆ. ಈ ಸಂದರ್ಭದಲ್ಲಿ ಯಾವುದೇ ರಾಜಕಾರಣ, ಜಾತಿ ರಾಜಕಾರಣವಾಗಲಿ ಮಾತನಾಡೋಲ್ಲ. ನಯವಾಗಿ ವಿವಾದಿತ ವಿಷಯದ ಬಗ್ಗೆ ಮಾತನಾಡುವುದನ್ನು ಎಚ್‌ಕೆ ಪಾಟೀಲ್ ತಿರಸ್ಕರಿಸಿದ್ದಾರೆ.
ಲಿಂಗಾಯತ ಅಧಿಕಾರಿಗಳದು ನಾಯಿಪಾಡು: ಶಾಮನೂರು ಶಿವಶಂಕರಪ್ಪ