ರಾಯಚೂರು: ಚಿನ್ನದ ನಾಡಿಗೆ ಯಾರಾಗಲಿದ್ದಾರೆ ರಾಜ? ಮತದಾರರ ಸೆಳೆಯಲು ಟಿಕೆಟ್ ಆಕಾಂಕ್ಷಿಗಳ ಕಸರತ್ತು ಜೋರು!

  • ಚಿನ್ನದ ನಾಡಿಗೆ ಯಾರಾಗಲಿದ್ದಾರೆ ರಾಜ!
  • ಮತದಾರರ ಮನಸೆಳೆಯಲು ಆಕಾಂಕ್ಷಿಗಳು ಕಸರತ್ತು
  • ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಹೈಕಮಾಂಡ್ ನಲ್ಲಿ ಟಿಕೆಟ್ ಗಾಗಿ ಪರದಾಟ
  • ಟಿಕೆಟ್ ಖಾತ್ರಿ ಇಲ್ಲದಿದ್ರೂ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಓಡಾಟ
Lingasuguru assembly constituency Intense competition between JDS, Congress BJP parties at raichur rav

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು (ಏ.7) : ಜಿಲ್ಲೆಯ ಚಿನ್ನದ ನಾಡಾಗಿರುವ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಭಾರೀ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ

ಲಿಂಗಸೂಗೂರು ವಿಧಾನಸಭಾ ಕ್ಷೇತ್ರ(Lingsuguru assembly constituency)ದಲ್ಲಿ ಹಳೆಯ ಕಲಿಗಳ ಕಾದಾಟವೇ ಈ ಚುನಾವಣೆಯಲ್ಲಿಯೂ ಕಾಣಬಹುದಾಗಿದೆ. ಆದ್ರೂ ಕೆಲ ಹೊಸ ಮುಖಗಳ ನಾಯಕರು ಕ್ಷೇತ್ರದಲ್ಲಿ ಓಡಾಟ ನಡೆಸಿ ಈ ಬಾರಿ ನಾನೇ ಲಿಂಗಸೂಗೂರು ಕ್ಷೇತ್ರದ ಶಾಸಕ ಆಗುವುದು, ಎಲ್ಲರೂ ನನಗೆ ಆರ್ಶಿವಾದ ಮಾಡಿ ಎಂದು ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ. 

Karnataka election 2023: ಸುರಪುರದಲ್ಲಿ ‘ನಾಯಕ’ರಿಬ್ಬರ ನಡುವೆ ಗೆಲುವಿಗೆ ಸಮರ:

 ಲಿಂಗಸೂಗೂರು ಕ್ಷೇತ್ರದ ಪರಿಚಯ: 

ರಾಯಚೂರು(Raichur) ಜಿಲ್ಲೆಯಲ್ಲಿ ಬರುವ ಲಿಂಗಸೂಗೂರು ವಿಧಾನಸಭಾ ಕ್ಷೇತ್ರವೂ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿದೆ. ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ 2,53,335 ಮತದಾರರು ಇದ್ದಾರೆ. ಅದರಲ್ಲಿ 1,25,885 ಪುರುಷ ಮತದಾರರು ಇದ್ದು, 1,27,441 ಮಹಿಳಾ ಮತದಾರರು ಇದ್ದಾರೆ. 

ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ 20ವರ್ಷದಿಂದ 40 ವರ್ಷದೊಳಗಿನ ಮತದಾರರೇ ಹೆಚ್ವಾಗಿದ್ದಾರೆ. ಇನ್ನೂ ತಾಲೂಕಿನ ವ್ಯಾಪ್ತಿಯಲ್ಲಿ 8 ಜಿ.ಪಂ. ಕೇಂದ್ರಗಳು ಬರುತ್ತವೆ. ಆದ್ರೆ ಮಸ್ಕಿ ವಿಧಾನಸಭಾ ಕ್ಷೇತ್ರವೂ(Maski assembly constituency) ಆಗಿದ್ದರಿಂದ ಒಂದು ಜಿ.ಪಂ. ಕ್ಷೇತ್ರವೂ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದರೂ ಈ ಹತ್ತಾರು ಜಾತಿಗಳು ಇದ್ರೂ ಸಹ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ರೆಡ್ಡಿ ಲಿಂಗಾಯತ ಸಮುದಾಯದ ಮುಖಂಡರೇ ರಾಜಕೀಯ ಗುರುಗಳು. ಯಾವುದೇ ಪಕ್ಷದ ಶಾಸಕರು ಆದ್ರೂ ರೆಡ್ಡಿ ಲಿಂಗಾಯತ ಸಮುದಾಯದ ತೀರ್ಮಾನವೇ ಅಂತಿಮ.

1957ರಿಂದ 2004ರವರೆಗೆ ಸಾಮಾನ್ಯ ಕ್ಷೇತ್ರವಾದ ಲಿಂಗಸೂಗೂರು ವಿಧಾನಸಭಾ ‌ಕ್ಷೇತ್ರವೂ 2008ರಲ್ಲಿ ಪರಿಶಿಷ್ಟ ‌ಜಾತಿಗೆ ಮೀಸಲು ಕ್ಷೇತ್ರವಾಯ್ತು. ಆ ಬಳಿಕ 2008ರಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಗೆಲುವು ಸಾಧಿಸಿದ್ರು‌. 2013ರಲ್ಲಿ ಮಾನಪ್ಪ ವಜ್ಜಲ್ ಜೆಡಿಎಸ್ ನಿಂದ ಸ್ಪರ್ಧೆ, ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್. ಹೂಲಗೇರಿಗೆ ಸೋಲಿಸಿ ಗೆದ್ದರು. ಮುಂದೆ 2018ರವರೆಗೆ ಡಿ.ಎಸ್. ಹೂಲಗೇರಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಟ ನಡೆಸಿ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿಗೆ ಸೋಲಿಸಿ ಡಿ.ಎಸ್. ಹೂಲಗೇರಿ ಶಾಸಕರಾಗಿ ಆಯ್ಕೆಯಾದರು. ಈ ಮಧ್ಯೆ ಹೊಸಬರು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಕಾಂಗ್ರೆಸ್ ಟಿಕೆಟ್ ಪಡೆಯಲು ಅರ್. ರುದ್ರಯ್ಯ ಮತ್ತು ಹಾಲಿ ಕಾಂಗ್ರೆಸ್ ಶಾಸಕ ಡಿ.ಎಸ್. ಹೂಲಗೇರಿ(DS hulageri MLA) ನಡುವೆ ಬಿಗ್ ಫೈಟ್ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ರೂ ಲಿಂಗಸೂಗೂರು ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ. 

ಇತ್ತ ಈಗಾಗಲೇ ಬಿಜೆಪಿಯ ಮಾಜಿ ಶಾಸಕ, ಹಟ್ಟಿಚಿನ್ನದ ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್‌(Manappa vajval) ಕ್ಷೇತ್ರದ ತುಂಬಾ ಓಡಾಟ ಶುರು ಮಾಡಿದ್ದಾರೆ. ‌ಅಷ್ಟೇ ಅಲ್ಲದೇ ಯುವಕರನ್ನು ಟಾರ್ಗೆಟ್ ಮಾಡಿದ ಮಾನಪ್ಪ ವಜ್ಜಲ್, ಪಕ್ಷ ಸೇರ್ಪಡೆ, ಜಾತ್ರೆ, ಮದುವೆ ಹೀಗೆ ಯಾವುದೇ ಸಮಾರಂಭ ಇದ್ರೂ ಭಾಗವಹಿಸಿ ಆಶೀರ್ವಾದ ಮಾಡಿ ಎಂದು ಮನವಿ ಮಾಡುತ್ತಾ ಓಡಾಟ ನಡೆಸಿದ್ದಾರೆ. ಇನ್ನೊಂದು ಕಡೆ ಲಿಂಗಸೂಗೂರು ಕ್ಷೇತ್ರದ ಜನರು ಸಹ ಮಾನಪ್ಪ ವಜ್ಜಲ್ ಗೆ ಅದ್ದೂರಿಯಾಗಿ ಸ್ವಾಗತ ಕೋರಲು ಶುರು ಮಾಡಿದ್ದಾರೆ. ಮತದಾರರು ಸಹ ಈ ಬಾರಿ ಮಾನಪ್ಪ ವಜ್ಜಲ್ ಗೆ ಬೆಂಬಲಿಸೋಣ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಇದಕ್ಕೆ ಕಾರಣವೂ ಹತ್ತಾರು ಇವೆ.

ಕಳೆದ ಬಾರಿ ವಿಧಾನಸಭಾ  ಚುನಾವಣೆಯಲ್ಲಿ ಕೇವಲ 5002 ಮತಗಳಿಂದ ಸೋತ ಜೆಡಿಎಸ್ ಅಭ್ಯರ್ಥಿ ಸಿದ್ದು ವೈ. ಬಂಡಿ(Siddu Y bandi) ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಅನುಕಂಪದ ಅಲೆ ಸಿದ್ದು ಬಂಡಿ ಪರ ಇದೆ. ಆದ್ರೆ ಕ್ಷೇತ್ರದಲ್ಲಿ ಸಿದ್ದು ಬಂಡಿಗೆ ಕಳೆದ ಬಾರಿ ಸಿಕ್ಕ ಬೆಂಬಲ ಈ ಬಾರಿ ಸಿಗದೇ ಇರುವುದರಿಂದ ಕೆಲ ನಾಯಕರು ಸಿದ್ದು ಬಂಡಿ ಪರ ಅಪಪ್ರಚಾರವೂ ಶುರು ಮಾಡಿದ್ದಾರೆ. 

ಇತ್ತೀಚೆಗೆ ಕ್ಷೇತ್ರಕ್ಕೆ ಕಾಲಿಟ್ಟು ಕೆಲವೇ ದಿನಗಳಲ್ಲಿ ಜನರ ಚಿತ್ತ ಸೆಳೆಯುತ್ತಿರುವುದು ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸುವ, ಮೇಲ್ಮಟ್ಟದಲ್ಲಿ ಉತ್ತಮ ಸಂಪರ್ಕ ಹೊಂದಿರುವ ಜೊತೆಗೆ ನೀರಾವರಿ ತಜ್ಞರೆಂದು ಹೇಳಲಾಗುತ್ತಿರುವ ಆರ್‌.ರುದ್ರಯ್ಯ ಸಹ ಲಿಂಗಸೂಗೂರು  ರಾಜಕೀಯದಲ್ಲಿ ಬಲಾಬಲ ಪ್ರದರ್ಶನಕ್ಕೆ ತಯಾರಿ ನಡೆಸಿದ್ದಾರೆ. ಇತ್ತ ಆಪ್ ಅಭ್ಯರ್ಥಿ ಶಿವಪುತ್ರಪ್ಪ ಗಾಣದಾಳ ಸೇರಿದಂತೆ ಹತ್ತಾರು ಸೇವಾ ಆಕಾಂಕ್ಷಿಗಳು ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಚಿಂತನೆ ‌ನಡೆಸಿದ್ದಾರೆ. ಮತ್ತೊಂದು ವಿಶೇಷವೆಂದರೆ ಜೆಡಿಎಸ್ ಅಭ್ಯರ್ಥಿ ಹೆಸರು ಬಿಟ್ಟರೇ ಬೇರೆ ಯಾವುದೇ ಪಕ್ಷದ ಅಭ್ಯರ್ಥಿಗಳ ಹೆಸರು ಫೈನಲ್ ಆಗಿಲ್ಲ. 

ಹಿಂದಿನ ಚುನಾವಣೆಗಳ ಫಲಿತಾಂಶ: 

ಲಿಂಗಸೂಗೂರು ವಿಧಾನಸಭಾ ಕ್ಷೇತ್ರಕ್ಕೆ 1957ರಲ್ಲಿ ಮೊದಲ ವಿಧಾನಸಭಾ ಚುನಾವಣೆ ನಡೆಯುತ್ತೆ. ಆಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ12,672 ಮತಗಳು ಪಡೆದು ಸ್ವತಂತ್ರ ಅಭ್ಯರ್ಥಿ ಶಿವಶಂಕರ ರಾವ್ ವೆಂಕಟರಾವ್ ವಿರುದ್ಧ 7521 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. 2004ರವರೆಗೆ ಸಾಮಾನ್ಯ ಕ್ಷೇತ್ರವಾಗಿತ್ತು. ಆ ಬಳಿಕ ಎಸ್. ಸಿ. ಮೀಸಲು ಕ್ಷೇತ್ರವಾಯ್ತು. ಆ ಬಳಿಕ ಇಡೀ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಚಿತ್ರಣವೇ ಬದಲಾಯ್ತು.‌ 

2008ರಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ 51,017 ಮತಗಳು ಪಡೆದರೇ ಆಗಿನ ಕಾಂಗ್ರೆಸ್ ಅಭ್ಯರ್ಥಿ ಎ. ವಸಂತಕುಮಾರ್ 31,837 ಮತಗಳು ಪಡೆದರು. ಸುಮಾರು 19,180 ಮತಗಳ ಅಂತರದಿಂದ ಮಾನಪ್ಪ ವಜ್ಜಲ್ ಗೆಲುವು ಸಾಧಿಸಿದ್ರು‌. ಆ ಬಳಿಕ ಮತ್ತೆ 2013ರಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ ಮಾನಪ್ಪ ವಜ್ಜಲ್ 31,737 ಮತಗಳು ಪಡೆದರೇ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಡಿ.ಎಸ್. ಹೂಲಗೇರಿ 30,451 ಮತಗಳು ಪಡೆದರೂ 1,286 ಮತಗಳಿಂದ ಮಾನಪ್ಪ ವಜ್ಜಲ್ ಗೆಲುವು ಸಾಧಿಸಿದರು. 2018ರಲ್ಲಿ ಚುನಾವಣೆ ನಡೆದ 1286 ಮತಗಳಿಂದ ಸೋತ ಡಿ.ಎಸ್. ಹೂಲಗೇರಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ 54,230 ಮತಗಳು ಪಡೆದು ಶಾಸಕರಾಗಿ ಆಯ್ಕೆಯಾದರು.

ಹಳೆಯ ಕಲಿಗಳ ಕಾದಾಟಕ್ಕೆ ಅಣಿಯಾಗುತ್ತಾ ಲಿಂಗಸೂಗೂರು: 

ಲಿಂಗಸೂಗೂರು ವಿಧಾನಸಭಾ ಕ್ಷೇತ್ರವೂ ಎಸ್. ಸಿ. ಮೀಸಲು ಕ್ಷೇತ್ರವಾದ ಬಳಿಕ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳೇ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದೆ. 

ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್. ಹೂಲಗೇರಿ ವಿರುದ್ಧ ಸೋಲು ಅನುಭವಿಸಿದ ಸಿದ್ದು ಬಂಡಿ ಈ ಬಾರಿ ಗೆಲುವು ಸಾಧಿಸಬೇಕು ಎಂಬ ಹಠಕ್ಕೆ ಬಿದ್ದು, ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ್ದಾರೆ. ಕ್ಷೇತ್ರದಲ್ಲಿ ಅನುಕಂಪದ ಅಲೆಯೂ ಎದ್ದು ಕಾಣುತ್ತಿದೆ. ಆದ್ರೆ ಕಳೆದ ಬಾರಿ ಬೆಂಬಲಿಸಿದ ಕೆಲ ಮುಖಂಡರು ಮತ್ತು ಕಾಣದ ಕೈಗಳು ಈ ಬಾರಿ ಸಿದ್ದು ಬಂಡಿಯಿಂದ ಅಂತರ ಕಾದುಕೊಂಡಿದ್ದು ಎದ್ದು ಕಾಣುತ್ತಿದೆ. ಆದ್ರೂ ಸಿದ್ದು ಬಂಡಿ ತನ್ನ ಬೆಂಬಲಿಗರು ಮತ್ತು ಪತ್ನಿ ಸಮೇತ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಾ ಮತಬೇಟೆ ಶುರು ಮಾಡಿದ್ದಾರೆ.

ಇನ್ನೂ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಎರಡು ಬಾರಿ ಎರಡು ಪಕ್ಷಗಳಿಂದ ಸ್ಪರ್ಧೆ ಮಾಡಿ ಈಗ ಮೂರನೇ ಬಾರಿಗೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲು ಸಕಲ ತಯಾರಿ ಮಾಡಿಕೊಂಡು ಕ್ಷೇತ್ರದಲ್ಲಿ ಓಡಾಟ ‌ನಡೆಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಮಾನಪ್ಪ ವಜ್ಜಲ್ ಸೋಲಿಗೆ ಶ್ರಮಿಸಿದ ಕೆಲ ಕಾಣದ ಕೈಗಳು ಈಗ ಮತ್ತೆ ಮಾನಪ್ಪ ವಜ್ಜಲ್ ಪರ ಮತಯಾಚನೆಗೆ ಮುಂದಾಗಿದ್ದಾರೆ. 2008ರಲ್ಲಿ ಮಾನಪ್ಪ ವಜ್ಜಲ್ ಗೆ ಗೆಲ್ಲಿಸಿದಂತೆ ಈ ಬಾರಿಯೂ ಗೆಲ್ಲಿಸೋಣ ಎಂಬ ಪಟ್ಟು ಹಿಡಿದು ಓಡಾಟ ‌ಶುರು ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಅಧಿಕೃತ ಟಿಕೆಟ್ ಘೋಷಣೆ ಆದ ಬಳಿಕ ಮತ್ತಷ್ಟು ಶಕ್ತಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಗೆ ಸಿಗುವ ಸಾಧ್ಯತೆ ಇದೆ. 

ಇತ್ತ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದೇ ಇಡೀ ಕ್ಷೇತ್ರದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತದೆ ಎಂಬ ಭರವಸೆಯಲ್ಲಿ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್‌, ಮುಖಂಡರಾದ ಎಚ್‌.ಬಿ ಮುರಾರಿ, ಪಾಮಯ್ಯ ಮುರಾರಿ ಮುಂತಾವದರು ಇದ್ದರೆ ಇತರ ಅಭ್ಯರ್ಥಿಗಳು ಯಾರೆಂದು ಘೋಷಣೆ ಮಾಡದೆ ದೆಹಲಿ ಮಾದರಿ ಆಡಳಿತ ಮಾಡುತ್ತೇವೆ, ಸಾಮಾನ್ಯರ ಅಭಿವೃದ್ಧಿಗೆ ಆಮ್‌ ಆದ್ಮಿ ಪಾರ್ಟಿ ಬೆಂಬಲಿಸಬೇಕೆಂದು ಆಪ್‌ ಕ್ಷೇತ್ರದಲ್ಲಿ ಜನರ ಸೆಳೆಯಲು ವರ್ಕೌಟ್‌ ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಶಾಸಕ ಡಿ.ಎಸ್‌ ಹೂಲಗೇರಿ, ಆರ್‌.ರುದ್ರಯ್ಯ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಮೂರಾರಿ ಸಹೋದರರು ಸೇರಿ ಹಲವರು ಆಕಾಂಕ್ಷಿಗಳು ದೆಹಲಿಯಲ್ಲಿ ಬಿಡುಬಿಟ್ಟು ಟಿಕೆಟ್ ಪಡೆಯಲು ಕಸರತ್ತು ‌ನಡೆಸಿದ್ದಾರೆ. ಇತ್ತ ಕ್ಷೇತ್ರದ ಜನರು ನಮ್ಮ ನಾಯಕರಿಗೆ ಟಿಕೆಟ್ ಸಿಗಬಹುದು ಎಂದು ಹೇಳಿಕೊಂಡು ಹೈಕಮಾಂಡ್ ‌ಕಡೆ ಮುಖ ಮಾಡುವಂತೆ ಆಗಿದೆ. 

Viral Audio: ನಮ್ಮ ಜಿಲ್ಲೆಗೆ ನಾನೇ ಮೋದಿ, ನಾನೇ ಟ್ರಂಪ್‌..' ಪ್ರಧಾನಿಯನ್ನೇ ಟೀಕಿಸಿದ ಬಿಜೆಪಿ ಶಾಸಕ?!

ಒಟ್ಟಿನಲ್ಲಿ ಈ ಬಾರಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಮೇಲೋಟಕ್ಕೆ ಕಂಡು ಬರುತ್ತಿದೆ. ಮತದಾರರ ಪ್ರಭು ಯಾರಿಗೆ ಜೈ ಎನ್ನುತ್ತಾನೆ ಎಂಬುವುದು ಮೇ.13ಕ್ಕೆ ಹೊರಬೀಳಲಿದೆ.

Latest Videos
Follow Us:
Download App:
  • android
  • ios