ಸೋಲಿನ ಕಾರಣ ಗುರುತಿಸಿ ಮುಂದೆ ಸಾಗೋಣ, ಇದು ಮೋದಿ ಸೋಲು ಅಲ್ಲ: ಬೊಮ್ಮಾಯಿ
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲನ್ನು ವಿನಯದಿಂದ ಸ್ವೀಕರಿಸಿ ಸೋಲಿಕೆ ಕಾರಣಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಂಡು ಮುಂದೆ ಹೋಗುತ್ತೇವೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಮೇ.15): ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲನ್ನು ವಿನಯದಿಂದ ಸ್ವೀಕರಿಸಿ ಸೋಲಿಕೆ ಕಾರಣಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿಕೊಂಡು ಮುಂದೆ ಹೋಗುತ್ತೇವೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿ ಕಚೇರಿ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮುಂದೆ ಹಲವು ಉದಾಹರಣೆಗಳಿವೆ. 2013ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 40 ಸ್ಥಾನ ಗೆದ್ದಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ 19 ಸ್ಥಾನ ಗೆದ್ದಿದ್ದೆವು. ಈಗ ಪಕ್ಷ ಅದಕ್ಕಿಂತಲೂ ಶಕ್ತಿಶಾಲಿಯಾಗಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ಪ್ರಾರಂಭಿಸುತ್ತೇವೆ ಎಂದರು.
ಇದು ಮೋದಿ ಸೋಲಲ್ಲ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬೊಮ್ಮಾಯಿ, ‘ಇದು ಪ್ರಧಾನಿ ಮೋದಿ ಅವರ ಸೋಲಾ ಎಂಬ ಪ್ರಶ್ನೆಗೆ, ಇದು ಮೋದಿ ಸೋಲಾಗಲು ಸಾಧ್ಯವಿಲ್ಲ. ಮೋದಿ ಕರ್ನಾಟಕಕ್ಕೆ ಸೀಮಿತ ನಾಯಕ ಅಲ್ಲ. ಇಡೀ ದೇಶಕ್ಕೆ ಅವರು ನಾಯಕ. ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ರಾಜ್ಯಕ್ಕೆ ಬಂದಿದ್ದರು. ಹಾಗಾದರೆ, ಕಾಂಗ್ರೆಸ್ ನಾಯಕತ್ವ ಇಡೀ ದೇಶದಲ್ಲಿ ಸೋತಿದೆ. ಹಾಗಂತಾ ಈಗ ಒಂದು ರಾಜ್ಯ ಗೆದ್ದಾಕ್ಷಣ ಇಡೀ ನಾಯಕತ್ವ ಗೆದ್ದಿದೆ ಎಂದು ಹೇಳಲು ಸಾಧ್ಯವೇ?’ ಎನ್ನುವ ಮೂಲಕ ಮೋದಿಗೆ ಸೋಲಿನ ಹೊಣೆ ಹೊರಿಸಲು ನಿರಾಕರಿಸಿದರು.
ಸಿಎಂ ಹುದ್ದೆ: ಡಿಕೆಶಿ ಪರ ಒಕ್ಕಲಿಗರು, ಸಿದ್ದು ಪರ ಕುರುಬರ ಲಾಬಿ
ಸೋಲಿಗೆ ಬಿಜೆಪಿಯ ಅತಿಯಾದ ಹಿಂದುತ್ವದ ಪ್ರತಿಪಾದನೆಯೇ ಕಾರಣವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಅದೇನೂ ಅಲ್ಲ. ವಿಶ್ಲೇಷಣೆಗೆ ಹಲವು ವಿಚಾರಗಳು ಇರುತ್ತವೆ. ಕೆಲ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಹಾಗಾಗಿಯೇ ಕ್ಷೇತ್ರವಾರು ಮತಗಳಿಗೆ ವಿಶ್ಲೇಷಣೆ ಮಾಡಿದರೆ ಕಾರಣ ತಿಳಿಯಲಿದೆ’ ಎಂದರು.
ಬೊಮ್ಮಾಯಿ ನಿವಾಸ ಜನರಿಲ್ಲದೆ ಭಣ ಭಣ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿ ಅಧಿಕಾರದಿಂದ ಕೆಳಗಿಳಿದ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್.ಟಿ.ನಗರ ನಿವಾಸದ ಬಳಿ ಫಲಿತಾಂಶದ ಮರುದಿನವಾದ ಭಾನುವಾರ ಜನರು ಇಲ್ಲದೆ ಭಣಗುಡುತ್ತಿತ್ತು.
ಸಿಎಂ ಹುದ್ದೆ: ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ವಾದವೇನು?
ಪಕ್ಷದ ಸೋಲಿನ ಹೊಣೆ ಹೊತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ಪ್ರತಿ ದಿನ ಮುಖ್ಯಮಂತ್ರಿಗಳ ಭೇಟಿಗೆ ಆರ್.ಟಿ.ನಗರ ನಿವಾಸಕ್ಕೆ ನೂರಾರು ಸಂಖ್ಯೆಯಲ್ಲಿ ಸಾರ್ವನಿಕರು ಬರುತ್ತಿದ್ದರು. ನಿವಾಸದ ಹೊರ ಆವರಣ ಜನಜಂಗುಳಿಯಿಂದ ಗಿಜುಗುಡುತ್ತಿತ್ತು. ಇದೀಗ ಬೊಮ್ಮಾಯಿ ಅಧಿಕಾರದಿಂದ ಕೆಳಗಿಳಿದ ಬೆನ್ನಲ್ಲೇ ನಿವಾಸ ಬಳಿ ಸಾರ್ವಜನಿಕರು ಸುಳಿಯುತ್ತಿಲ್ಲ. ಎಂದಿನಂತೆ ಭದ್ರತಾ ಸಿಬ್ಬಂದಿ ನಿವಾಸದ ಬಳಿ ಕಾರ್ಯ ನಿರ್ವಹಿಸುತ್ತಿದ್ದರು. ಹೊಸ ಸರ್ಕಾರ ರಚನೆಯಾಗುವವರೆಗೂ ಬಸವರಾಜ ಬೊಮ್ಮಾಯಿ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.