ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.
ಬೆಂಗಳೂರು (ಮೇ.15): ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಹಂಚಿಕೆ ತಲೆ ನೋವಾಗಿ ಪರಿಣಿಸಿದ್ದು, ಇಬ್ಬರೂ ನಾಯಕರು ತಮ್ಮನ್ನೇಕೆ ಮುಖ್ಯಮಂತ್ರಿ ಮಾಡಬೇಕು ಎಂಬ ವಾದಗಳನ್ನು ಮುಂದಿಟ್ಟಿದ್ದಾರೆ.
ಸಿದ್ದರಾಮಯ್ಯ ಬೇಡಿಕೆಯೇನು?: ನೂತನ ಶಾಸಕರು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ಆ ನಾಯಕನನ್ನೇ ಮುಖ್ಯಮಂತ್ರಿಯಾಗಿ ಐದು ವರ್ಷ ಪರಿಪೂರ್ಣ ಅಧಿಕಾರಾವಧಿ ನೀಡಬೇಕು.
ಸಿದ್ದರಾಮಯ್ಯ ಅವರ ವಾದವೇನು?
- ನೂತನ ಶಾಸಕರ ಬೆಂಬಲ ತಮಗಿದೆ. ಹೀಗಾಗಿ, ಶಾಸಕಾಂಗ ಪಕ್ಷದ ನಾಯಕನನ್ನು ಶಾಸಕರು ಆಯ್ಕೆ ಮಾಡಬೇಕು.
ಮೋದಿ ಮುಖ ನೋಡಿ ಜನಕ್ಕೆ ಬೇಸರ: ಮಲ್ಲಿಕಾರ್ಜುನ ಖರ್ಗೆ
- ಹೀಗೆ ಆಯ್ಕೆಯಾದವರನ್ನೇ ಮುಖ್ಯಮಂತ್ರಿ ಹುದ್ದೆ ಪರಿಪೂರ್ಣ ಅವಧಿಗೆ ನೀಡಬೇಕು.
- ಇದು ನನ್ನ ಕಡೆಯ ಚುನಾವಣೆ ಎಂದು ಘೋಷಿಸಿದ್ದೆ. ಹೀಗಾಗಿ ಜನರು ಅಭೂತಪೂರ್ವ ಬೆಂಬಲ ನೀಡಿದ್ದಾರೆ.
- ಮುಂದಿನ ಸಿಎಂ ಯಾರಾಗಬೇಕು ಎಂಬ ಸರ್ವೇಯಲ್ಲಿ ನನ್ನ ಪರವಾಗಿಯೇ ಅತಿ ಹೆಚ್ಚು ಜನ ಬೆಂಬಲ ವ್ಯಕ್ತವಾಗಿದೆ.
- ಅಹಿಂದ ವರ್ಗ ವಿಶೇಷವಾಗಿ ಕುರುಬರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜಾತಿಗಳು ಕಾಂಗ್ರೆಸ್ ಪರ ನಿಲ್ಲಲು ನನ್ನ ವರ್ಚಸ್ಸು ಕಾರಣ.
- ರಾಜ್ಯಾದ್ಯಂತ ಜನಪ್ರಿಯತೆ ಹೊಂದಿರುವ ಜನ ನಾಯಕ ನಾನು. ಬೀದರ್‌ನಿಂದ ಚಾಮರಾಜನಗರವರೆಗೂ ನನ್ನ ಪ್ರಭಾವವಿದೆ.
- ನಾನು ಮುಖ್ಯಮಂತ್ರಿಯಾಗಿದ್ದಾಗ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 9 ಸ್ಥಾನ ಗೆದ್ದಿತ್ತು.
- ಬಳಿಕ 2019ರ ಫಲಿತಾಂಶವನ್ನೂ ನೋಡಿದ್ದೀರಿ. ಲೋಕಸಭೆ ಚುನಾವಣೆ ದೇಶದಲ್ಲಿ ಪಕ್ಷಕ್ಕೆ ಮುಖ್ಯ. ಇಲ್ಲಿ ಉತ್ತಮ ಸಾಧನೆ ತೋರಲು ನಾನು ಸಿಎಂ ಆದರೆ ಅನುಕೂಲ.
- ಆಡಳಿತಾರೂಢ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ರೂಪಿಸಲು ತಮ್ಮ ಕೊಡುಗೆ ದೊಡ್ಡದು.
- ಬಿಜೆಪಿ ಸರ್ಕಾರದ ಆಡಳಿತವನ್ನು ತಮ್ಮ ಅವಧಿಯ ಆಡಳಿತಕ್ಕೆ ಜನ ಹೋಲಿಕೆ ಮಾಡಿದ್ದರು. ತಮ್ಮ ಅವಧಿಯ ಆಡಳಿತ ಉತ್ತಮವಿದ್ದರಿಂದಲೇ ಬಿಜೆಪಿ ವಿರುದ್ಧ ಮತ ಹಾಕಿದ್ದಾರೆ.
- ಒಂದು ವೇಳೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಮಾಡಿದರೇ ನನ್ನ ಹಿರಿತನಕ್ಕೆ ಯೋಗ್ಯ ಸ್ಥಾನ ನೀಡುವ ಹುದ್ದೆಗಳು ಯಾವುದು ಇರುವುದಿಲ್ಲ.
- ಪಕ್ಷದ ಸೂಚನೆಯಂತೆ ಪುತ್ರ ಯತೀಂದ್ರನ ಕ್ಷೇತ್ರದಲ್ಲಿ ನಿಂತು ಗೆದ್ದಿದ್ದೇನೆ. ಈ ತ್ಯಾಗಕ್ಕೆ ಮನ್ನಣೆ ಬೇಕು.
- ಹಿರಿತನ, ಆಡಳಿತ ಅನುಭವ ಹಾಗೂ ಜನಾಭಿಪ್ರಾಯ ನನ್ನ ಪರವೇ ಇದೆ.
ಕಾಂಪ್ರಮೈಸ್ ಫಾರ್ಮುಲಾ: ಐದು ವರ್ಷಗಳ ಮುಖ್ಯಮಂತ್ರಿ ಹುದ್ದೆ ಪಟ್ಟು ಹಿಡಿದಿದ್ದರೂ ಅನಿವಾರ್ಯ ಸಂದರ್ಭ ಬಂದಲ್ಲಿ ಮೊದಲ ಮೂರು ವರ್ಷಗಳ ಅವಧಿಗೆ ತಮ್ಮನ್ನು ಮುಖ್ಯಮಂತ್ರಿ ಮಾಡಿದರೆ, ಹೊಂದಾಣಿಕೆ ಫಾರ್ಮುಲಾಗೆ ಒಪ್ಪುವ ಸಾಧ್ಯತೆ ಇದೆ. ಇದರ ಹೊರತಾಗಿ ಬೇರಾರಯವ ಹೊಂದಾಣಿಕೆಗೂ ಸಿದ್ದರಾಮಯ್ಯ ಒಪ್ಪುವ ಸಾಧ್ಯತೆಯಿಲ್ಲ.
ಡಿ.ಕೆ. ಶಿವಕುಮಾರ್ ಬೇಡಿಕೆಯೇನು?: ಸಿದ್ದರಾಮಯ್ಯ ಅವರು ಈಗಾಗಲೇ ಮುಖ್ಯಮಂತ್ರಿಯಾಗಿದ್ದವರು. ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ನನ್ನ ಪಾತ್ರ ದೊಡ್ಡದಿರುವ ಕಾರಣ ಮೊದಲು ಮುಖ್ಯಮಂತ್ರಿ ಹುದ್ದೆಯನ್ನು ನನಗೆ ನೀಡಬೇಕು.
ಡಿ.ಕೆ. ಶಿವಕುಮಾರ್ ವಾದವೇನು?
- ಕೆಪಿಸಿಸಿ ಅಧ್ಯಕ್ಷ ನೇತೃತ್ವದಲ್ಲಿ ಚುನಾವಣೆ ಎದುರಿಸಿರುವುದರಿಂದ ಸಂಪ್ರದಾಯದಂತೆ ನನಗೆ ಮುಖ್ಯಮಂತ್ರಿ ಹುದ್ದೆ ನನಗೆ ನೀಡಬೇಕು.
- 1999ರಲ್ಲಿ ಎಸ್.ಎಂ. ಕೃಷ್ಣ ಅಧ್ಯಕ್ಷರಾಗಿದ್ದಾಗ ಗೆದ್ದಿದ್ದರಿಂದ ಅವರೇ ಮುಖ್ಯಮಂತ್ರಿ ಆಗಿದ್ದರು.
- ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಾಗ ಪಕ್ಷ ಗೆದ್ದಿಲ್ಲ, 2013ರಲ್ಲಿ ಡಾ.ಜಿ. ಪರಮೇಶ್ವರ್ ಅಧ್ಯಕ್ಷರಾಗಿದ್ದಾಗ ಪಕ್ಷ ಗೆದ್ದಿದ್ದರೂ ಅವರು ಗೆದ್ದಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿಯಾಗಲಿಲ್ಲ.
- ಈ ಬಾರಿ ನನ್ನ ಅಧ್ಯಕ್ಷತೆಯಲ್ಲೇ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ.
- ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ಕಾರಣಕ್ಕೆ ಒಕ್ಕಲಿಗ ಮತಗಳು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವರ್ಗವಾಗಿವೆ.
- ದಕ್ಷಿಣ ಕರ್ನಾಟಕ ಭಾಗದಲ್ಲಿ 33 ಸ್ಥಾನ ಗೆಲ್ಲುವ ಮೂಲಕ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ.
- ಜೆಡಿಎಸ್‌ಗೆ ಶೇ. 5ರಷ್ಟು ಮತಗಳು ನಷ್ಟವಾಗಿದ್ದು, ಅದು ಕಾಂಗ್ರೆಸ್‌ಗೆ ಬಂದಿರುವುದೇ ಒಕ್ಕಲಿಗ ಸಮುದಾಯ ನನಗೆ ಬೆಂಬಲ ನೀಡಿದೆ ಎಂಬುದಕ್ಕೆ ಸಾಕ್ಷಿ.
- ಕಳೆದ ಬಾರಿಯ ಸೋಲಿನಿಂದ ಸಿದ್ದರಾಮಯ್ಯ ಹಾಗೂ ಹಿಂದಿನ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಸಂಕಷ್ಟಸಂದರ್ಭದಲ್ಲಿ ಪಕ್ಷವನ್ನು ಮುನ್ನೆಡೆಸಿದೆ.
- ದೇಶದಲ್ಲೇ ಕಾಂಗ್ರೆಸ್ ಸಂಕಷ್ಟದಲ್ಲಿರುವಾಗ ರಾಜ್ಯದಲ್ಲಿ ಪಕ್ಷವನ್ನು ಅತ್ಯುತ್ತಮವಾಗಿ ಸಂಘಟಿಸಿ ಅಧಿಕಾರಕ್ಕೆ ತಂದಿದ್ದೇನೆ.
- ಪಕ್ಷ ಸಂಘಟನೆಗೆ ಬೇಕಾದ ಸಂಪನ್ಮೂಲ ಸಂಗ್ರಹ. ಪಕ್ಷದ ಕಚೇರಿ ನಿರ್ಮಾಣ. ಎಲ್ಲ ಜಿಲ್ಲೆಗಳಲ್ಲಿ ಪಕ್ಷಕ್ಕೆ ಕಚೇರಿ ನಿರ್ಮಾಣ ಮಾಡಿದ್ದೇನೆ.
- ನನ್ನ ಅವಧಿಯಲ್ಲೇ ಪಕ್ಷಕ್ಕೆ ಅತಿ ದೊಡ್ಡ ಸಂಖ್ಯೆಯಲ್ಲಿ ಹೊಸಬರ ನೋಂದಣಿಯಾಗಿದೆ.
- ಮುಖ್ಯಮಂತ್ರಿ ಹುದ್ದೆ ನೀಡದಿದ್ದರೆ ಒಕ್ಕಲಿಗ ಸಮುದಾಯ ಪಕ್ಷದ ವಿರುದ್ಧ ಮುನಿಸಿಕೊಳ್ಳಬಹುದು.
- ಇದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಬಹುದು.
ಸಿದ್ದು VS ಡಿಕೆಶಿ: ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ಅಂಗಳಕ್ಕೆ
ಕಾಂಪ್ರಮೈಸ್ ಫಾರ್ಮುಲಾ: ಪರಿಪೂರ್ಣ ಅವಧಿಗೆ ಸಿಎಂ ಹುದ್ದೆ ನೀಡಿದ್ದರೆ ಹೊಂದಾಣಿಕೆ ಫಾರ್ಮುಲಾಗೆ ಸಿದ್ಧ. ಆದರೆ, ಮೊದಲ ಅವಧಿಗೆ ನಾನೇ ಮುಖ್ಯಮಂತ್ರಿಯಾಗಬೇಕು. ಏಕೆಂದರೆ, ಸಿದ್ದರಾಮಯ್ಯ ಸಿಎಂ ಆದರೆ ಅನಂತರ ಹುದ್ದೆ ಬಿಟ್ಟುಕೊಡುವ ಖಾತರಿ ನನಗಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರೇ ಮೊದಲು ಮುಖ್ಯಮಂತ್ರಿಯಾದರೆ ಅಧಿಕಾರಾವಧಿ ಎರಡು ವರ್ಷಕ್ಕೆ ಸೀಮಿತ ಮಾಡಿ, ನಂತರದ ಮೂರು ವರ್ಷ ನನಗೆ ನೀಡಬೇಕು. ಎರಡು ವರ್ಷದ ನಂತರ ಅಧಿಕಾರ ಬಿಟ್ಟುಕೊಡುವುದಾಗಿ ರಾಹುಲ್ ಗಾಂಧಿ ಸಮ್ಮುಖದಲ್ಲೇ ಸಿದ್ದರಾಮಯ್ಯ ಪ್ರಮಾಣ ಮಾಡಬೇಕು.
