ಭಯೋತ್ಪಾದಕರ ಮುಖ್ಯ ಉದ್ದೇಶ ನಮ್ಮ ಒಗ್ಗಟ್ಟನ್ನು ಮುರಿದು ದೇಶವನ್ನು ದುರ್ಬಲಗೊಳಿಸುವುದೇ ಆಗಿದೆ. ಅದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು.

ಮಂಗಳೂರು (ಏ.28): ಪಹಲ್ಗಾಂನಲ್ಲಿನ ಉಗ್ರರ ದಾಳಿ ಕುರಿತು ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಭಯೋತ್ಪಾದಕರ ಮುಖ್ಯ ಉದ್ದೇಶ ನಮ್ಮ ಒಗ್ಗಟ್ಟನ್ನು ಮುರಿದು ದೇಶವನ್ನು ದುರ್ಬಲಗೊಳಿಸುವುದೇ ಆಗಿದೆ. ಅದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು, ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಒಗ್ಗಟ್ಟಾಗಿದ್ದುಕೊಂಡು ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಬೇಕು. ಇದರ ಜತೆಗೆ ಭಯೋತ್ಪಾದಕರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಯುದ್ಧದ ಸನ್ನಿವೇಶ ಸೃಷ್ಟಿಯಾದರೆ ಸರ್ವಪಕ್ಷ ಸಭೆ ನಡೆಯುತ್ತದೆ. ಅಗತ್ಯಕ್ಕೆ ತಕ್ಕಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮೃತ ಮಂಜುನಾಥ್ ರಾವ್‌ ನಿವಾಸಕ್ಕೆ ಯುಟಿ ಖಾದರ್ ಭೇಟಿ: ಕಾಶ್ಮೀರದಲ್ಲಿ ನಡೆದ ಉಗ್ರರರ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್‌ ಅವರ ನಿವಾಸಕ್ಕೆ ಶುಕ್ರವಾರ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಜುನಾಥ್ ರಾವ್‌ ಪತ್ನಿ ಪಲ್ಲವಿ, ತಾಯಿ ಸುಮತಿ, ಪುತ್ರ ಅಭಿಜಯ್ ಜೊತೆ ಮಾತನಾಡಿದ್ದೇನೆ. ಸಹೋದರಿ ಪಲ್ಲವಿ ಆ ಸಂದರ್ಭದಲ್ಲಿ ಧೈರ್ಯ ತೆಗೆದುಕೊಂಡಿದ್ದಾರೆ. ಪರಿಹಾರಕ್ಕೂ ಮೊದಲು ಕುಟುಂಬಸ್ಥರಿಗೆ ಸಾಂತ್ವನದ ಮೂಲಕ ಮಾನಸಿಕ ಧೈರ್ಯ ತುಂಬಬೇಕಿದೆ ಎಂದರು.

ಸರ್ಕಾರ ನೀಡಿರುವ ಪರಿಹಾರ ಕಡಿಮೆಯಾದ ಬಗ್ಗೆ ನಂತರ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು. ಇಂಥಹ ಘಟನೆಗಳು ನಡೆಯಬಾರದೆಂದು ಕುಟುಂಬಸ್ಥರು ಹೇಳಿದ್ದಾರೆ. ಏನಾಗಬೇಕಿದೆ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಸ್ಥಳೀಯರು ಪ್ರವಾಸಿಗಳಿಗೆ ಕಠಿಣ ಪರಿಸ್ಥಿತಿಯಲ್ಲೂ ಸಹಾಯ ಮಾಡಿದ್ದಾರೆ ಅದು ಮಾನವೀಯತೆ ಮತ್ತು ಮನುಷ್ಯತ್ವದ ಧರ್ಮ ಎಂದರು.

ಖಾಸಗಿ ಶಾಲೆಗಳಿಗೂ ಈಗ ಅಕ್ರಮ- ಸಕ್ರಮ: ಇಂದಿನಿಂದ ಅರ್ಜಿ ಸಲ್ಲಿಕೆ

ಇಡೀ ದೇಶ ಮತ್ತು ಜನರು ಕೇಂದ್ರ ಸರ್ಕಾರದ ಜೊತೆ ಇದ್ದೇವೆ. ಇದು ಇಡೀ ದೇಶದ ಪ್ರಶ್ನೆ ರಾಜಕೀಯ ಬದಿಗಿಟ್ಟು ಕೇಂದ್ರದ ಜೊತೆ ಇರಬೇಕು. ಕೃತ್ಯ ಮಾಡಿದವರಿಗೆ ಮಾತ್ರವಲ್ಲ ಅವರನ್ನು ಬೆಂಬಲಿಸಿದವರಿಗೂ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯೆ ಬಲ್ಕೀಶ್‌ ಭಾನು, ನಿಕೇತ್‌ ರಾಜ್‌ ಮೌರ್ಯ, ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಯೋಗೇಶ್‌ ಮತ್ತಿತರರು ಇದ್ದರು.