ವಿಜಯೇಂದ್ರರಿಂದ 150 ಕೋಟಿ ಆಮಿಷ, ಮಾಣಿಪ್ಪಾಡಿ ಆರೋಪದ ಸತ್ಯಾಸತ್ಯತೆ ಹೊರಬರಲಿ: ನಸೀರ್ ಅಹ್ಮದ್
ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ನನ್ನ ಮನೆಗೆ ಬಂದು ಆಮಿಷವೊಡ್ಡಿದ್ದರು ಅಂತ ಮಾಣಿಪ್ಪಾಡಿ ನೇರವಾಗಿ ಹೇಳಿದ್ದಾರೆ. ಅದನ್ನು ನಿರಾಕರಿಸಿ ಜೋರು ಮಾಡಿದಾಗ ವಿಜಯೇಂದ್ರ ಓಡಿ ಹೋದ್ರು ಅಂತಾನೂ ಹೇಳಿದ್ದಾರೆ ಇದರ ಬಗ್ಗೆ ಬಿಜೆಪಿ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ನಸೀರ್ ಅಹ್ಮದ್
ಬೆಂಗಳೂರು(ಡಿ.14): ವಕ್ಫ್ ಆಸ್ತಿ ಕಬಳಿಕೆ ವಿಚಾರದಲ್ಲಿ ಮೌನ ವಹಿಸುವಂತೆ ವಿಜಯೇಂದ್ರ 150 ಕೋಟಿ ಆಫರ್ ಮಾಡಿದ್ದರು ಅಂತ ಬಿಜೆಪಿ ವಕ್ತಾರ ಮತ್ತು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಬಹಿರಂಗವಾಗಿ ಹೇಳಿದ್ದಾರೆ. ಈ ಕುರಿತು ಜನರಿಗೆ ಸತ್ಯಾಸತ್ಯತೆ ತಿಳಿಸುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಆಗ್ರಹಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ನನ್ನ ಮನೆಗೆ ಬಂದು ಆಮಿಷವೊಡ್ಡಿದ್ದರು ಅಂತ ಮಾಣಿಪ್ಪಾಡಿ ನೇರವಾಗಿ ಹೇಳಿದ್ದಾರೆ. ಅದನ್ನು ನಿರಾಕರಿಸಿ ಜೋರು ಮಾಡಿದಾಗ ವಿಜಯೇಂದ್ರ ಓಡಿ ಹೋದ್ರು ಅಂತಾನೂ ಹೇಳಿದ್ದಾರೆ ಇದರ ಬಗ್ಗೆ ಬಿಜೆಪಿ ಏಕೆ ಮಾತನಾಡುತ್ತಿಲ್ಲ ಎಂದು ನಸೀರ್ ಅಹ್ಮದ್ ಪ್ರಶ್ನಿಸಿದ್ದಾರೆ.
2021 ರಲ್ಲಿ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ವಕ್ಫ್ ಆಸ್ತಿ ಲೂಟಿಯಲ್ಲಿ ಶಾಮೀಲಾಗಿದ್ದು, ಸಿಬಿಐ ತನಿಖೆ ಮಾಡಿ ಅಂತ, ಅನ್ವರ್ ಮಾಣಿಪ್ಪಾಡಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಕೂಡ ಬರೆದಿದ್ದರು. ಅದನ್ನು ಮಾಧ್ಯಮಗಳಿಗೆ ಮಾಣಿಪ್ಪಾಡಿಯವರೇ ಬಿಡುಗಡೆ ಮಾಡಿದ್ದರು. ಹಾಗಿದ್ದರೂ ಮೋದಿ ಮತ್ತು ನಡ್ಡಾ ಅವರು ಮೌನವಾಗಿರುವುದರ ಅರ್ಥವೇನು? ಏನೂ ಕ್ರಮ ಕೈಗೊಂಡಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.
ಈ ಆರೋಪದ ಬಗ್ಗೆ ಯಾಕೆ ವಿಜಯೇಂದ್ರ ಬಾಯಿಬಿಟ್ಟಿಲ್ಲ?. ಯಡಿಯೂರಪ್ಪ ಕೂಡ ಸುಮ್ಮನಿದ್ದಾರಲ್ಲ ಯಾಕೆ? ವಿಜಯೇಂದ್ರ ಅವರು ಮಣಿಪ್ಪಾಡಿಯವರಿಗೆ 150 ಕೋಟಿ ಆಮಿಷ ಒಡ್ಡಿದ್ದು ಯಾಕೆ? ಯಾರನ್ನು ರಕ್ಷಿಸಲು ಎಂದು ಜನರಿಗೆ ಉತ್ತರಿಸಬೇಕಿದೆ. ವಿಜಯೇಂದ್ರ ಮತ್ತು ವಕ್ಫ್ ಅಕ್ರಮಕ್ಕೂ ಏನು ಸಂಬಂಧ ಎಂದು ತಿಳಿಸಬೇಕಿದೆ ಎಂದರು.
ಬಿಜೆಪಿಯವರು ಒಂದು ಕಡೆ ವಕ್ಫ್ ವಿರುದ್ಧ ಹೋರಾಟದ ನಾಟಕವಾಡುತ್ತಾರೆ. ಇನ್ನೊಂದು ಕಡೆ ತಮ್ಮದೇ ವಕ್ಫ್ ಅಕ್ರಮ ಮುಚ್ಚಿ ಹಾಕಲು ಆಮಿಷವೊಡ್ಡುತ್ತಾರೆ. ಇದರ ಮರ್ಮ ಅಂತ ಜನರೆದುರು ಬಯಲಾಗಲಿ. 150 ಕೋಟಿ ಆಮಿಷವೊಡ್ಡಿದ ಆರೋಪದ ಬಗ್ಗೆ ಮೋದಿ, ನಡ್ಡಾ ಯಾಕೆ ಕ್ರಮ ಕೈಗೊಂಡಿಲ್ಲ? ಒಂದು ವೇಳೆ ಮಾಣಿಪ್ಪಾಡಿ ಅವರ ಆರೋಪ ಸುಳ್ಳಾಗಿದ್ದರೆ ಅದನ್ನು ಯಾಕೆ ಯಾರೂ ನಿರಾಕರಿಸಿಲ್ಲ ಅಥವಾ ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ನಸೀರ್ ಅಹ್ಮದ್ ಪ್ರಶ್ನಿಸಿದರು.
ಬಿಜೆಪಿಯವರು ಇದಕ್ಕೆಲ್ಲ ಉತ್ತರಿಸಬೇಕು. ಸದನದಲ್ಲಿ ಅಥವಾ ಹೊರಗಡೆ ಮಾಡಿದ ವಕ್ಫ್ ಹೊರಾಟ ಕಪಟ ನಾಟಕ ಅಂತ ಒಪ್ಪಿಕೊಂಡು, ರಾಜ್ಯದ ಜನರ ಹಾದಿ ತಪ್ಪಿಸಿದ್ದಕ್ಕೆ ರಾಜ್ಯದ ಕ್ಷಮೆ ಕೇಳಬೇಕು ಮತ್ತು ಅನಗತ್ಯ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.