ಧಮ್ ಇದ್ದರೆ ಕಮಿಷನ್ ಬಗ್ಗೆ ತನಿಖೆ ಮಾಡಿ: ಸಿದ್ದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧಮ್ ಇದ್ದರೆ ಸರ್ಕಾರದ ಮೇಲಿನ ಕಮಿಷನ್ ಆರೋಪದ ಮೇಲೆ ತನಿಖೆ ಮಾಡಲಿ ಎಂದು ಸವಾಲು ಹಾಕಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ.
ಹಾವೇರಿ(ಜ.20): ಬಿಜೆಪಿ ಸರ್ಕಾರ ಗುತ್ತಿಗೆದಾರರಿಗೆ 25 ಸಾವಿರ ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧಮ್ ಇದ್ದರೆ ಸರ್ಕಾರದ ಮೇಲಿನ ಕಮಿಷನ್ ಆರೋಪದ ಮೇಲೆ ತನಿಖೆ ಮಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವಾಗಿದೆ’ ಎಂದು ಹೇಳಿದರೆ, ಸಿದ್ದರಾಮಯ್ಯನವರ ಕಾಲದಲ್ಲಿ ನಡೀಲಿಲ್ವಾ ಅಂತ ಬಿಜೆಪಿಗರು ಹೇಳುತ್ತಾರೆ. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿಯವರ ಬಾಯಲ್ಲಿ ಕಡುಬು ಸಿಕ್ಕಿಹಾಕಿಕೊಂಡಿತ್ತಾ? ಎಂದು ಕಿಡಿಕಾರಿದ ಅವರು, ನಮ್ಮ ಸರ್ಕಾರ ತನ್ನಿ, ಅದೆಷ್ಟೇ ಕಷ್ಟವಾದರೂ ಪ್ರತಿ ಮನೆಯೊಡತಿಗೆ ವರ್ಷಕ್ಕೆ 24 ಸಾವಿರ ರು. ಕೊಟ್ಟೇ ಕೊಡುತ್ತೇವೆ ಎಂದು ಭರವಸೆಯಿತ್ತರು.
ಹಾವೇರಿ: 21ರಿಂದ ಬಿಜೆಪಿಯಿಂದ ವಿಜಯ ಸಂಕಲ್ಪ ಅಭಿಯಾನ
ಈಗ ಪ್ರಧಾನಿ ಮೋದಿಯವರು ವಾರಕ್ಕೊಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ. ಲಂಬಾಣಿ ಜನರಿಗೆ ಹಕ್ಕುಪತ್ರ ಕೊಡಲು ಕಲಬುರಗಿಗೆ ಮೋದಿ ಬಂದಿದ್ದಾರೆ. ಇದಕ್ಕೆ ಕಾನೂನು ಮಾಡಿದ್ದು ನಾವು. ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ವಾಸಿಸುವವನೇ ಮನೆಯ ಒಡೆಯ ಎಂಬ ಕಾಯ್ದೆ ಮಾಡಿದ್ದು ನಾವು. ಸೇವಾಲಾಲ್ ಜಯಂತಿ ಮಾಡಿದ್ದು ನಮ್ಮ ಸರ್ಕಾರ. ಈಗ ಮೋದಿ ಲಂಬಾಣಿಗಳ ಮತ ಪಡೆಯಲು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಎಚ್.ಕೆ.ಪಾಟೀಲ, ಎಚ್.ಎಂ. ರೇವಣ್ಣ, ಪುಷ್ಪಾ ಅಮರನಾಥ ಇತರರು ಇದ್ದರು.