ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ: ಶ್ರೀರಾಮುಲು
- ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದ ಸಚಿವ ಶ್ರೀರಾಮುಲು!
- ಒಳ ಒಪ್ಪಂದದ ಗುಟ್ಟು ಬಿಚ್ಚಿಟ್ಟಸಚಿವ
- ನಾವಿಬ್ಬರೂ ಒಳಗೊಳಗೇ ಏನೋ ಮಾಡಿಕೊಂಡು ಚುನಾವಣೆ ಗೆಲ್ತೇವೆ!
ಬಳ್ಳಾರಿ (ಆ.17) : ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗೂ ಇದೆ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಅಲ್ಲದೆ, ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ನಮ್ಮ ನಡುವಿನ ಒಳ ಒಪ್ಪಂದದಿಂದ ಎಂಬ ಗುಟ್ಟನ್ನೂ ಅವರು ಬಹಿರಂಗಪಡಿಸಿದ್ದಾರೆ.
ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು: ಶ್ರೀರಾಮುಲು ಹೀಗೆ ಹೇಳಿದ್ಯಾಕೆ?
ನಗರದ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಕುರುಬ ಸಮುದಾಯದ ವಿರೋಧಿಯಲ್ಲ. ನನ್ನನ್ನು ತಪ್ಪಾಗಿ ತಿಳಿದುಕೊಳ್ಳಬೇಡಿ. ಹಿಂದುಳಿದ ಸಮುದಾಯವನ್ನು ನಾನೆಂದೂ ಬಿಟ್ಟುಕೊಡುವುದಿಲ್ಲ. ನಾವೆಲ್ಲರೂ ಒಂದೇ. ರಾಜಕೀಯಕ್ಕಾಗಿ ವಿರೋಧ ಮಾಡುತ್ತೇವೆಯೇ ಹೊರತು, ನಾವಿಬ್ಬರೂ (ಸಿದ್ದರಾಮಯ್ಯ-ಶ್ರೀರಾಮುಲು) ದೋಸ್ತಿಗಳು ಎಂದು ಹೇಳಿದರು.
ಕಾಂಗ್ರೆಸ್(Congress)ನಿಂದ ಅವಕಾಶ ಸಿಕ್ಕರೆ ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿಯಾಗಲಿ. ಬಿಜೆಪಿಯಲ್ಲಿ ಹಿಂದುಳಿದ ಸಮುದಾಯಕ್ಕೆ ಅವಕಾಶ ಸಿಕ್ಕರೆ ನಾನು ಮುಖ್ಯಮಂತ್ರಿಯಾಗುವೆ. ಇದನ್ನು ಸಿದ್ದರಾಮಯ್ಯ ಅವರೂ ಒಪ್ಪುತ್ತಾರೆ. ಜಾತಿ ವ್ಯವಸ್ಥೆಯಲ್ಲಿ ಇಂತಹುದನ್ನೆಲ್ಲಾ ಮಾಡಬೇಕಾಗುತ್ತದೆ. ಇವು ರಾಜಕಾರಣದ ತಂತ್ರಗಾರಿಕೆ. ಹಿಂದುಳಿದ ಸಮುದಾಯ ಒಗ್ಗಟ್ಟಾದರೆ ಕ್ರಾಂತಿಯಾಗುತ್ತದೆ. ನಾನು ಹಾಗೂ ಸಿದ್ದರಾಮಯ್ಯ ಸೇರಿ ಹಿಂದುಳಿದ ಜಾತಿಗಳನ್ನು ಒಂದು ಮಾಡುವ ಕೆಲಸ ಮಾಡುತ್ತಿದ್ದೇವೆ. ಹಿಂದುಳಿದವರ ವಿಚಾರ ಬಂದಾಗ ನಾವಿಬ್ಬರೂ ಒಂದೇ. ಹಿಂದುಳಿದ ಸಮಾಜವನ್ನು ಬಿಟ್ಟು ಕೊಡಲು ನಾವಿಬ್ಬರೂ ಸಿದ್ಧರಿಲ್ಲ ಎಂದು ಹೇಳಿದರು.
ಶ್ರೀರಾಮುಲು ಹಂಗಿನಲ್ಲಿ ನಾನಿಲ್ಲ, ಅವರಿಗೆ ಸಂಸ್ಕಾರ ಇಲ್ಲ: ನಾಗೇಂದ್ರ
ನಾವು ಒಳಗೊಳಗೆ ಏನೋ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲುತ್ತೇವೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದದ್ದು ಹೇಗೆ ಎಂಬುದನ್ನು ಅವರನ್ನು ಕೇಳಿ ನೋಡಿ, ನಿಮ್ಮ ಕಿವಿಯಲ್ಲಿ ಅವರು ಸತ್ಯ ಹೇಳುತ್ತಾರೆ. ಯಾವುದೇ ವಿಚಾರ ಹೇಳಲು ನನಗೆ ಯಾರ ಭಯವೂ ಇಲ್ಲ. ನಾನು ಯಾರಿಗೂ ಗುಲಾಮನಲ್ಲ. ನಾನು ಯಾರ ಅಡಿಯಲ್ಲೂ ಕೆಲಸ ಮಾಡುತ್ತಿಲ್ಲ ಎನ್ನುವ ಮೂಲಕ ಚುನಾವಣೆಯಲ್ಲಿನ ಒಳ ಒಪ್ಪಂದದ ಗುಟ್ಟನ್ನು ಅವರು ಬಿಚ್ಚಿಟ್ಟರು.