ಶ್ರೀರಾಮುಲು ಹಂಗಿನಲ್ಲಿ ನಾನಿಲ್ಲ, ಅವರಿಗೆ ಸಂಸ್ಕಾರ ಇಲ್ಲ: ನಾಗೇಂದ್ರ
ನನಗೆ ಮನೆಯಲ್ಲಿ ಸಂಸ್ಕಾರ ನೀಡಿದ್ದಾರೆ. ಈಗಲೂ ನಾನು ಅವರನ್ನು ಅಣ್ಣನ ಸಮಾನ ಎಂದು ತಿಳಿದುಕೊಂಡಿದ್ದೇನೆ. ಅಣ್ಣಾ ಎಂದೇ ಕರೆಯುತ್ತಿದ್ದೇನೆ: ಶಾಸಕ ಬಿ.ನಾಗೇಂದ್ರ
ಬಳ್ಳಾರಿ(ಆ.16): ಸಾರಿಗೆ ಸಚಿವ ಬಿ.ಶ್ರೀರಾಮುಲು ವಿರುದ್ಧ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶ್ರೀರಾಮುಲು ಅವರ ಯಾವುದೇ ಹಂಗಿನಲ್ಲಿ ನಾನಿಲ್ಲ. ಅವರು ಹೇಳಿದಂತೆ ನಾನು ಬೀದಿ ಬದಿಯ ರಾಜಕೀಯ ಮಾಡುವ ಗೂಂಡಾ ಅಲ್ಲ. ನಾನೊಬ್ಬ ಬಿಕಾಂ ಪದವೀಧರ ಎಂದು ತಿರುಗೇಟು ನೀಡಿದರು. ಸಚಿವ ಶ್ರೀರಾಮುಲು ಅವರು ಈಚೆಗೆ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಮ್ಮ ವಿರುದ್ಧ ಏಕವಚನ ಪ್ರಯೋಗ ಮಾಡಿರುವ ಕುರಿತು ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ನಾಗೇಂದ್ರ, ಅವರ ವಿರುದ್ಧ ನಾನು ಎಂದೂ ಮಾತನಾಡಿರಲಿಲ್ಲ. ನನಗೆ ಮನೆಯಲ್ಲಿ ಸಂಸ್ಕಾರ ನೀಡಿದ್ದಾರೆ. ಈಗಲೂ ನಾನು ಅವರನ್ನು ಅಣ್ಣನ ಸಮಾನ ಎಂದು ತಿಳಿದುಕೊಂಡಿದ್ದೇನೆ. ಅಣ್ಣಾ ಎಂದೇ ಕರೆಯುತ್ತಿದ್ದೇನೆ ಎಂದು ತಿಳಿಸಿದರು.
ಆದರೆ, ಕೆಲ ದಿನಗಳ ಹಿಂದೆ ಮಾಧ್ಯಮವೊಂದರಲ್ಲಿ ನನ್ನ ವಿರುದ್ಧ ‘ಅವನು’ ಎಂದು ಏಕವಚನ ಬಳಸಿದ್ದಾರೆ. ಶಾಸಕನಾಗುವ ಮೊದಲು ನಾನು ಬೀದಿ ರಾಜಕೀಯ ಮಾಡುತ್ತಿದ್ದೆ ಎಂದಿದ್ದಾರೆ. ಅಂದರೆ, ನಾನು ಬೀದಿ ಬದಿಯ ಗೂಂಡಾ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅವರ ಮಾತುಗಳೇ ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಎದುರೇಟು ನೀಡಿದರು.
ಮಿಂಚೇರಿ ಬೆಟ್ಟ ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ: ಸಚಿವ ಬಿ. ಶ್ರೀರಾಮುಲು
ನನ್ನ ತಂದೆ 1967ರಲ್ಲೇ ಗೆಜೆಟೆಡ್ ಅಧಿಕಾರಿಯಾಗಿ ನಿವೃತ್ತಿಯಾಗಿದ್ದಾರೆ. ನನ್ನ ಅಕ್ಕ ಪದವೀಧರೆ. ನನ್ನ ಅಣ್ಣ ಎಂಜಿನಿಯರ್. ನನ್ನ ತಂಗಿ ಕಂಪನಿಯೊಂದಕ್ಕೆ ಎಂಡಿ ಆಗಿದ್ದಾರೆ. ಇದು ನನ್ನ ಕುಟುಂಬದ ಹಿನ್ನೆಲೆ. 2008ರಲ್ಲಿ ನಾನು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಬೇಕಿತ್ತು. ಆದರೆ, ಆಗ ಗಾಲಿ ಜನಾರ್ದನ ರೆಡ್ಡಿ ಸೇರಿ ಎಲ್ಲರೂ ಸೇರಿ ಕೂಡ್ಲಿಗಿಗೆ ಕಳುಹಿಸಿಕೊಟ್ಟರು. ಎಲ್ಲರೂ ಸ್ನೇಹಿತರಂತಿದ್ದೇವೆ ಎಂದು ನಾನು ಕೂಡ್ಲಿಗಿಗೆ ಹೋದೆ. 2008ರಲ್ಲಿ ಬಿಜೆಪಿಯಿಂದ, 2013ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ವಂತ ಶಕ್ತಿ ಮೇಲೆ ಗೆದ್ದು ಬಂದೆ. ನಾನು ಯಾರದ್ದೇ ಹಂಗಿನಲ್ಲಿಲ್ಲ. ಸ್ನೇಹಿತರಾಗಿದ್ದಾಗ ಒಬ್ಬರಿಗೊಬ್ಬರು ಸಹಕಾರ ಮಾಡಿರಬಹುದು. ಆದರೆ, ಶ್ರೀರಾಮುಲು ‘ನಾನು ಬೆಳೆಸಿದ ಹುಡುಗ’ ಎಂದು ಹೇಳುತ್ತಿರುವುದು ಎಷ್ಟುಸರಿ? ಎಂದು ಪ್ರಶ್ನಿಸಿದರು.
ನನಗೆ ಮನೆಯಲ್ಲಿ ಸಂಸ್ಕಾರ ನೀಡಿದ್ದಾರೆ. ಈಗಲೂ ನಾನು ಅವರನ್ನು ಅಣ್ಣನ ಸಮಾನ ಎಂದು ತಿಳಿದುಕೊಂಡಿದ್ದೇನೆ. ಅಣ್ಣಾ ಎಂದೇ ಕರೆಯುತ್ತಿದ್ದೇನೆ ಎಂದು ತಿಳಿಸಿದರು.