Asianet Suvarna News Asianet Suvarna News

ಮಾತು ತಪ್ಪದೆ ಮೋದಿ ರಾಜಕೀಯ ಬಿಡಲಿ: ಖರ್ಗೆ ಟಾಂಗ್‌

ನಾವು ಮೋದಿಯನ್ನು ದ್ವೇಷಿಸುವುದಿಲ್ಲ. ಆದರೆ ಅವರ ಸಿದ್ಧಾಂತವನ್ನು ದ್ವೇಷಿಸುತ್ತೇವೆ. ಅವರು ದಲಿತರು ಹಾಗೂ ಹಿಂದುಳಿದವರು ಮೇಲೆ ಬರಲು ಬಿಡುತ್ತಿಲ್ಲ. ಅಂತಹ ಪ್ರಯತ್ನಗಳನ್ನು ನಿಲ್ಲಿಸಬೇಕು. ಕಾಂಗ್ರೆಸಿಗರು ಮುಸ್ಲಿಮರ ಓಲೈಕೆ ಮಾಡುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ ಅನ್ಯಾಯ ತಡೆಯುವುದು ಓಲೈಕೆಯಲ್ಲ. ಬಿಜೆಪಿಯೇ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಖರ್ಗೆ 

Let PM Narendra Modi Leave Politics says AICC President Mallikarjun Kharge grg
Author
First Published May 22, 2024, 7:59 AM IST

ನವದೆಹಲಿ(ಮೇ.22):  ಹಿಂದು-ಮುಸ್ಲಿಂ ರಾಜಕೀಯ ಮಾಡಿದ ದಿನ ನಾನು ರಾಜಕೀಯದಲ್ಲಿರಲು ಯೋಗ್ಯನಲ್ಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತು ಉಳಿಸಿಕೊಂಡು ಕೂಡಲೇ ರಾಜಕೀಯ ತೊರೆಯಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.

ನರೇಂದ್ರ ಮೋದಿ ಪ್ರತಿದಿನ ಚುನಾವಣಾ ಪ್ರಚಾರ ಭಾಷಣದಲ್ಲಿ ಹಿಂದು-ಮುಸ್ಲಿಮರ ನಡುವೆ ದ್ವೇಷ ಬಿತ್ತುವ ಮಾತುಗಳನ್ನಾಡುತ್ತಿದ್ದಾರೆ. ಅವರ ಉದ್ದೇಶ ಸ್ವಚ್ಛವಾಗಿಲ್ಲ. ಕಾಂಗ್ರೆಸ್‌ ಗೆದ್ದರೆ ಶೇ.15ರಷ್ಟು ಬಜೆಟ್‌ ಹಣವನ್ನು ಮುಸ್ಲಿಮರಿಗೆ ನೀಡುತ್ತದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಅಂತಹ ಮಾತುಗಳನ್ನಾಡುವ ಮೂಲಕ ಅವರು ಸಮಾಜದಲ್ಲಿ ಒಡಕು ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಅವರು ಇತ್ತೀಚೆಗೆ ಹೇಳಿದಂತೆ ರಾಜಕೀಯ ತೊರೆಯಬೇಕು ಎಂದು ಆಗ್ರಹಿಸಿದ್ದಾರೆ.

ಇಂಡಿಯಾ ಗೆದ್ದರೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಖರ್ಗೆ, ‘ಮೋದಿ ಹಿಂದು-ಮುಸ್ಲಿಂ ಬಗ್ಗೆ ತಾವಾಡಿರುವ ಮಾತುಗಳನ್ನು ತಾವೇ ಇನ್ನೊಮ್ಮೆ ಕೇಳಿಸಿಕೊಳ್ಳಲಿ. ಆಗ ತಾನೆಷ್ಟು ಸುಳ್ಳು ಹೇಳುತ್ತಿದ್ದೇನೆ ಎಂಬುದು ತಿಳಿಯುತ್ತದೆ. ಆದರೆ ಅವರಿಗೆ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವ ಅಭ್ಯಾಸವಿಲ್ಲ. ಒಂದು ಕಡೆ ಅವರೇ ಹಿಂದು-ಮುಸ್ಲಿಂ ದ್ವೇಷದ ಮಾತುಗಳನ್ನಾಡುತ್ತಾರೆ. ಇನ್ನೊಂದು ಕಡೆ, ತಾನು ಇಂತಹ ಮಾತುಗಳನ್ನಾಡಿದರೆ ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯನಲ್ಲ ಎಂದೂ ಹೇಳುತ್ತಾರೆ. ಹೀಗಾಗಿ ಅವರು ರಾಜಕೀಯದಲ್ಲಿ ಇರಬಾರದು’ ಎಂದು ಹೇಳಿದರು.

ಹೇಳೋದೊಂದು, ಮಾಡೋದೊಂದು:

ಮೋದಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಮಾತನಾಡುತ್ತಾರೆ. ಆದರೆ ತಮ್ಮ ದ್ವೇಷ ಭಾಷಣಗಳಿಂದ ಮತಗಳನ್ನು ಒಡೆಯುತ್ತಾರೆ. ಈಗಲೂ ಅವರು ದ್ವೇಷ ಭಾಷಣ ಮುಂದುವರೆಸಿದ್ದಾರೆ. ಸಂವಿಧಾನದ ವಿರುದ್ಧ, ಮುಸ್ಲಿಮರ ವಿರುದ್ಧ ಮಾತನಾಡಿದವರನ್ನು ಅವರು ಎಂದಾದರೂ ಖಂಡಿಸಿದ್ದಾರಾ? ಮಹಿಳೆಯರನ್ನು ನಿಂದಿಸಿದವರಿಗೆ, ಬುಡಕಟ್ಟು ಜನಾಂಗದವರ ಮೇಲೆ ಮೂತ್ರ ಮಾಡಿದವರಿಗೆ ಅವರು ಛೀಮಾರಿ ಹಾಕಿದ್ದಾರಾ ಎಂದು ಖರ್ಗೆ ಪ್ರಶ್ನಿಸಿದರು.

ಚುನಾವಣಾ ಪ್ರಚಾರಕ್ಕೆ ಅವರು ಕೋಟ್ಯಂತರ ರು. ಖರ್ಚು ಮಾಡುತ್ತಿದ್ದಾರೆ. ಭಾಷಣಗಳನ್ನು ಮಾಡಿ ಹಿಂದು-ಮುಸ್ಲಿಮರ ಮಧ್ಯೆ ದ್ವೇಷ ಬಿತ್ತುತ್ತಾರೆ. ಆದ್ದರಿಂದಲೇ ನಮ್ಮ ನಾಯಕ ರಾಹುಲ್‌ ಗಾಂಧಿಯವರು ‘ಮೊಹಬ್ಬತ್‌ ಕಿ ದುಕಾನ್‌’ (ಪ್ರೀತಿಯ ಅಂಗಡಿ) ತೆರೆಯುವುದಾಗಿ ಹೇಳಿದರು. ಮೋದಿ ಕೇವಲ ಒನ್‌ ಮ್ಯಾನ್‌ ಶೋ ನಡೆಸುತ್ತಿದ್ದಾರೆ. ಒಬ್ಬನೇ ನಾಯಕ ಇಡೀ ದೇಶ ನಡೆಸಬಹುದು ಎಂದು ಅವರು ಭಾವಿಸಿದ್ದಾರೆ ಎಂದೂ ಕಿಡಿಕಾರಿದರು.

ಮೋದಿ ಬಗ್ಗೆ ನಮಗೆ ದ್ವೇಷವಿಲ್ಲ:

ನಾವು ಮೋದಿಯನ್ನು ದ್ವೇಷಿಸುವುದಿಲ್ಲ. ಆದರೆ ಅವರ ಸಿದ್ಧಾಂತವನ್ನು ದ್ವೇಷಿಸುತ್ತೇವೆ. ಅವರು ದಲಿತರು ಹಾಗೂ ಹಿಂದುಳಿದವರು ಮೇಲೆ ಬರಲು ಬಿಡುತ್ತಿಲ್ಲ. ಅಂತಹ ಪ್ರಯತ್ನಗಳನ್ನು ನಿಲ್ಲಿಸಬೇಕು. ಕಾಂಗ್ರೆಸಿಗರು ಮುಸ್ಲಿಮರ ಓಲೈಕೆ ಮಾಡುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ ಅನ್ಯಾಯ ತಡೆಯುವುದು ಓಲೈಕೆಯಲ್ಲ. ಬಿಜೆಪಿಯೇ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಖರ್ಗೆ ಆರೋಪಿಸಿದರು.

ಭ್ರಷ್ಟಾಚಾರದಿಂದ ಮೋದಿ ಇಮೇಜ್‌ಗೆ ಧಕ್ಕೆ: ಖರ್ಗೆ

ಮೋದಿ ಅಧಿಕಾರದಲ್ಲಿ ಉಳಿಯಲು ಹಾಗೂ ಬಿಜೆಪಿಯೇತರ ಸರ್ಕಾರಗಳನ್ನು ರಾಜ್ಯಗಳಲ್ಲಿ ಉರುಳಿಸಲು ಭ್ರಷ್ಟ ಮಾರ್ಗಗಳನ್ನು ಬಳಸುತ್ತಿದ್ದಾರೆ. ಅವರ ಸಂಪುಟದಲ್ಲೇ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಹಲವಾರು ನಾಯಕರಿದ್ದಾರೆ. ಅದರಿಂದಾಗಿ ಮೋದಿ ಇಮೇಜ್‌ಗೆ ಧಕ್ಕೆಯಾಗಿದೆ. ಅದನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.

ಅಧಿಕಾರದಲ್ಲಿ ಉಳಿಯಲು ಭ್ರಷ್ಟಾಚಾರಿಗಳನ್ನು ಅವರು ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಸೇರಿದ ತಕ್ಷಣ ಭ್ರಷ್ಟರು ‘ಕ್ಲೀನ್‌’ ಆಗಿಬಿಡುತ್ತಾರೆ. ಭ್ರಷ್ಟರನ್ನು ಶಾಶ್ವತವಾಗಿ ಜೈಲಿಗೆ ಅಟ್ಟುತ್ತೇನೆ ಎಂದು ಬಾಯಿಯಲ್ಲಿ ಹೇಳಿ, ನಂತರ ಅವರನ್ನೇ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಎಂಪಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನಾಗಿ ಮಾಡುತ್ತಿದ್ದಾರೆ ಎಂದು ದೂರಿದರು.

ಮೋದಿ 3ನೇ ಸಲ ಪ್ರಧಾನಿ ಆಗೋದು ಕಷ್ಟ: ಮಲ್ಲಿಕಾರ್ಜುನ ಖರ್ಗೆ ಭವಿಷ್ಯ

ಇಂಡಿಯಾ ಪರ ರಹಸ್ಯ ಅಲೆ, ಮೋದಿ ಗೆಲುವಿಗೆ ತಡೆ ನಿಶ್ಚಿತ: ಖರ್ಗೆ

ಕಾಂಗ್ರೆಸ್‌ ಹಾಗೂ ಇಂಡಿಯಾ ಮೈತ್ರಿಕೂಟದ ಪರ ಈ ಬಾರಿಯ ಚುನಾವಣೆಯಲ್ಲಿ ಪ್ರಬಲವಾದ ರಹಸ್ಯ ಅಲೆಯಿದೆ. ಅದು ಬಿಜೆಪಿಯ ಗೆಲುವನ್ನು ತಡೆಯಲಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ನ ಸಿದ್ಧಾಂತದ ವಿರುದ್ಧ ಇರುವವರು ಇಂದು ನಮ್ಮ ಪರ ಹೋರಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸಲು ಈ ಹೋರಾಟ ಅಗತ್ಯ ಎಂದು ಜನರಿಗೆ ಅನ್ನಿಸಿದೆ ಎಂದು ಖರ್ಗೆ ಹೇಳಿದರು.

ಬಿಜೆಪಿವರು ರಾಮಮಂದಿರ, ಹಿಂದು-ಮುಸ್ಲಿಂ, ಭಾರತ-ಪಾಕಿಸ್ತಾನ ಎಂದು ಪದೇಪದೇ ಮಾತನಾಡಿ ಜನರನ್ನು ಭಾವನಾತ್ಮಕವಾಗಿ ಲೂಟಿ ಮಾಡಿದರು. ಅದು ಈಗ ಜನರಿಗೆ ಅರ್ಥವಾಗಿದೆ. ಹೀಗಾಗಿ ಕಾಂಗ್ರೆಸ್‌ ಮತ್ತು ಇಂಡಿಯಾ ಕೂಟದ ಪರ ದೊಡ್ಡ ಅಲೆಯೆದ್ದಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios