ಛಲವಾದಿ ನಾರಾಯಣಸ್ವಾಮಿಗೆ ಶೆಡ್ ಗಿರಾಕಿ ಎಂದ ಎಂ.ಬಿ.ಪಾಟೀಲ ಕ್ಷಮೆ ಕೇಳಲಿ: ಮೀಸಿ
ಸರ್ಕಾರದಲ್ಲಿ ಎಂ.ಬಿ.ಪಾಟೀಲ್ ಒಬ್ಬ ಪ್ರಭಾವಿ ಸಚಿವರಾಗಿ ನಾರಾಯಣಸ್ವಾಮಿ ಅವರಿಗೆ ನಾಲಾಯಕ, ಶೆಡ್ ಗಿರಾಕಿ ಎನ್ನುವುದು ಶೋಭೆ ತರುವಂತದ್ದಲ್ಲ. ದಲಿತನೊಬ್ಬ ನಾಯಕನಾಗಿದ್ದು ಸಹಿಸಿಕೊಳ್ಳಲು ಆಗದೆ ಅವರು ಹೀಗೆ ಮಾತನಾಡಿದ್ದಾರೆ ಎಂದು ಆಪಾದಿಸಿದ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸಿ
ವಿಜಯಪುರ(ಸೆ.01): ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಶೆಡ್ ಗಿರಾಕಿ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ದಲಿತರಿಗೆ ಅಪಮಾನ ಮಾಡಿದ್ದಾರೆ. ತಕ್ಷಣವೇ ಸಚಿವ ಎಂ.ಬಿ.ಪಾಟೀಲ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಜತೆಗೆ ದಲಿತ ಸಮುದಾಯದ ಕ್ಷಮೆ ಕೇಳಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸಿ ಆಗ್ರಹಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಎಂ.ಬಿ.ಪಾಟೀಲ್ ಒಬ್ಬ ಪ್ರಭಾವಿ ಸಚಿವರಾಗಿ ನಾರಾಯಣಸ್ವಾಮಿ ಅವರಿಗೆ ನಾಲಾಯಕ, ಶೆಡ್ ಗಿರಾಕಿ ಎನ್ನುವುದು ಶೋಭೆ ತರುವಂತದ್ದಲ್ಲ. ದಲಿತನೊಬ್ಬ ನಾಯಕನಾಗಿದ್ದು ಸಹಿಸಿಕೊಳ್ಳಲು ಆಗದೆ ಅವರು ಹೀಗೆ ಮಾತನಾಡಿದ್ದಾರೆ ಎಂದು ಆಪಾದಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ಅವರು, ಕೆಐಎಡಿಬಿಯ ಅಕ್ರಮದ ಬಗ್ಗೆ ಹಾಗೂ ಸರ್ಕಾರದಲ್ಲಿನ ಲೋಪದೋಷಗಳನ್ನು ಹೇಳಿದ್ದರಿಂದಲೇ ಎಂ.ಬಿ.ಪಾಟೀಲ್ ಅಪಮಾನ ಮಾಡಿದ್ದಾರೆ. ದಲಿತರಿಗೆ ಅಪಮಾನ ಮಾಡಿದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ದಲಿತರ ಪರವಾಗಿದ್ದೇವೆ ಎನ್ನುವ ಎಂ.ಬಿ.ಪಾಟೀಲರು ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಹಣವನ್ನು ಕಾಂಗ್ರೆಸ್ ಬೇರೆ ಬೇರೆ ಯೋಜನೆಗಳಿಗೆ ಬಳಸಿದೆ. ಆ ಹಣವನ್ನು ವಾಪಸ್ ತಂದು ತೋರಿಸಲಿ ಎಂದು ಸವಾಲೆಸೆದರು.
ದಲಿತರ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿ ಇದ್ದಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಮಾಡಬೇಕಿತ್ತು. ಕಾಂಗ್ರೆಸ್‌ನವರು ದಲಿತರನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ತನ್ನ ಇತಿಹಾಸದಲ್ಲೇ ದಲಿತರನ್ನು ಮೇಲೆ ಬೆಳೆಯಲು ಬಿಟ್ಟಿಲ್ಲ. ಕಾಂಗ್ರೆಸ್‌ನವರು ಹಾಗೂ ಎಂ.ಬಿ.ಪಾಟೀಲರಿಗೆ ದಲಿತರ ಮೇಲೆ ಎಷ್ಟು ಕಾಳಜಿ ಇದೆ, ಅವರು ದಲಿತರಿಗೆ ಎಷ್ಟು ಗೌರವ ಕೊಡುತ್ತಾರೆ ಎಂಬುದು ಅವರ ಮಾತಿನಲ್ಲೇ ಗೊತ್ತಾಗುತ್ತದೆ ಎಂದರು.
ಅನಾದಿ ಕಾಲದಿಂದಲೂ ಡಾ.ಅಂಬೇಡ್ಕರ್, ಬಾಬು ಜಗಜೀವನ ರಾಮ್ ಅವರನ್ನು ಕಾಂಗ್ರೆಸ್ ಅಪಮಾನ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ಗೆ ದಲಿತರ ಹಿತ ಮುಖ್ಯವಲ್ಲ. ಅಧಿಕಾರ ಮುಖ್ಯವಾಗಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಿಗೆ ಕೊಡಬೇಕಾದ ಪ್ರೊಟೋಕಾಲ್ ಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರಲಿದೆ, ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ: ಸಚಿವ ಎಂ.ಬಿ.ಪಾಟೀಲ್
ಎಸ್ಸಿ ಮೋರ್ಚಾ ಪ್ರಮುಖ ಚಿದಾನಂದ ಚಲವಾದಿ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಕೇವಲವಾಗಿ ಮಾತನಾಡಿದ್ದಾರೆ. ಅವರು ಹೇಳಿದಂತೆ ದಲಿತರಾದ ನಾವು ಶೆಡ್ ಹಾಗೂ ಗುಡಿಸಲಿನಲ್ಲೇ ಹುಟ್ಟಿ ಬೆಳೆದವರು. ತಮ್ಮನ್ನು ತುಳಿಯಲು ಯತ್ನಿಸುವವರ ಮಧ್ಯ ಬೆಳೆದು ನಾಯಕರಾದವರು ಛಲವಾದಿ ನಾರಾಯಣಸ್ವಾಮಿ ಅವರು. ಅವರು ಉನ್ನತ ಮಟ್ಟಕ್ಕೆ ಬೆಳೆದಿರುವುದನ್ನು ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸರ್ಕಾರ ಎಡವಿದಾಗ, ತಪ್ಪು ಮಾಡಿದಾಗ ಅದನ್ನು ಹೊರಹಾಕಲೆಂದೇ ವಿರೋಧ ಪಕ್ಷದ ನಾಯಕರಿದ್ದಾರೆ. ಅವರ ತಪ್ಪನ್ನು ಹೇಳಿದ್ದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ನಲ್ಲೇ ಇದ್ದವರು. ಆ ವೇಳೆ ಅವರಿಗೆ ಉನ್ನತ ಹುದ್ದೆ ಕೊಟ್ಟಿಲ್ಲ. ಅವರನ್ನು ಬೆಳೆಸುವ ಕೆಲಸ ಮಾಡಿಲ್ಲ. ಆದರೆ ಬಿಜೆಪಿಗೆ ಬಂದಮೇಲೆ ಬಿಜೆಪಿಯವರು ಅವರನ್ನು ಗುರುತಿಸಿ ಒಳ್ಳೆಯ ಸ್ಥಾನಮಾನ ಕೊಟ್ಟಿದೆ. ಕಾಂಗ್ರೆಸ್‌ಗೆ ದಲಿತರು ಓಟು ಹಾಕಿದ್ದಾಗಲೇ ನೀವು ಅಧಿಕಾರಕ್ಕೆ ಬಂದಿದ್ದೀರಿ ಎಂಬುದನ್ನು ಅರಿತುಕೊಳ್ಳಬೇಕು. ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಬೇರೆ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದೀರಿ. ದಲಿತ ನಾಯಕನಿಗೆ ಶೆಡ್ ಗಿರಾಕಿ ಎಂದು ಮಾತನಾಡುವುದು ಖಂಡನೀಯ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಭೀಮಣ್ಣ ಮೇಲಿನಮನಿ, ಕಾರ್ಯದರ್ಶಿ ಸಿದ್ದಲಿಂಗಪ್ಪ ಮಖಣಾಪುರ, ಪುನೀತ ಕಾಂಬಳೆ ಉಪಸ್ಥಿತರಿದ್ದರು.