Asianet Suvarna News Asianet Suvarna News

ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರಲಿದೆ, ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ: ಸಚಿವ ಎಂ.ಬಿ.ಪಾಟೀಲ್

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರವೇನೂ ಇಲ್ಲ. ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರುತ್ತದೆ. ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ಅವರ ಮೇಲೆ ಸುಳ್ಳು ಮೊಕದ್ದಮೆ ಹಾಕಿರುವ ಬಿಜೆಪಿಯವರು ಹಣೆ ಹಣೆ ಬಡಿದುಕೊಳ್ಳಬೇಕಾಗುತ್ತದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು. 
 

BJP will repent Siddaramaiah will get justice Says Minister MB Patil gvd
Author
First Published Aug 31, 2024, 9:19 AM IST | Last Updated Aug 31, 2024, 9:19 AM IST

ಬೆಳಗಾವಿ (ಆ.31): ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರವೇನೂ ಇಲ್ಲ. ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರುತ್ತದೆ. ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ಅವರ ಮೇಲೆ ಸುಳ್ಳು ಮೊಕದ್ದಮೆ ಹಾಕಿರುವ ಬಿಜೆಪಿಯವರು ಹಣೆ ಹಣೆ ಬಡಿದುಕೊಳ್ಳಬೇಕಾಗುತ್ತದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು. ಬೆಳಗಾವಿ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಇದ್ದಾರೆ. ಅದೇ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಸಿಎಂ ಸ್ಥಾನಕ್ಕೆ ಯಾರೂ ಟವೆಲ್‌ ಹಾಕುವ ಪರಿಸ್ಥಿತಿ ನಮ್ಮಲ್ಲಿ ಬಂದಿಲ್ಲ. 

ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಮುಡಾ ಪ್ರಕರಣದಿಂದ ಖುಲಾಸೆಯಾದ ಬಳಿಕ ಸಿದ್ದರಾಮಯ್ಯ ಮತ್ತಷ್ಟು ಬಲಿಷ್ಠರಾಗುತ್ತಾರೆ. ಐದು ವರ್ಷಗಳ ಅವಧಿಯವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ನನಗೂ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ, ದುರಾಸೆ ಇಲ್ಲ. ಈ ಸಂಬಂಧ ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡಬೇಕಾಗುತ್ತದೆ. ಕಾಂಗ್ರೆಸ್‌ನ ಎಲ್ಲ ಶಾಸಕರು, ಸಚಿವರು ಸಿದ್ದರಾಮಯ್ಯ ಪರವಾಗಿದ್ದಾರೆ. ಪಕ್ಷವೂ ಅವರ ಪರವಾಗಿದೆ ಎಂದು ಹೇಳಿದರು.

ಛಲವಾದಿ, ದಲಿತರಲ್ಲಿ ಸಚಿವ ಎಂ.ಬಿ.ಪಾಟೀಲ್ ಕ್ಷಮೆ ಯಾಚಿಸಲಿ: ವಿಜಯೇಂದ್ರ

ಬಿಜೆಪಿಯಿಂದ ದಲಿತರ ಅಪಮಾನ: ಖರ್ಗೆ ಕುಟುಂಬಕ್ಕೆ ಭೂಮಿ ನೀಡಿರುವ ವಿಷಯದ ಬಗ್ಗೆ ನಿನ್ನೆ ಎರಡು ಗಂಟೆಗಳ ಕಾಲ ಸುದೀರ್ಘ ಉತ್ತರ ಕೊಟ್ಟಿದ್ದೇನೆ. ಬಿಜೆಪಿ ನಾಯಕರಿಗೆ ಸಿಎ ಸೈಟ್ ಅಂದರೆ ಏನು ಎಂಬುದು ಗೊತ್ತಿಲ್ಲ. ಖರ್ಗೆ ಮಗ ಕಂಪ್ಯೂಟರ್ ‌ಸೈನ್ಸ್ ಎಂಜಿನಿಯರ್. ಆರು ಅರ್ಜಿ ನೋಡಿ ಮೆರಿಟ್ ಆಧಾರದ ಮೇಲೆ ಸೈಟ್ ಹಂಚಿಕೆ ಮಾಡಿದ್ದೇವೆ. 2021ರ ಬಿಜೆಪಿ ಸರ್ಕಾರ ನಿವೇಶನ ಹಂಚಿಕೆ ಮಾಡಿದೆ. ಯಾವ ಸೈಟ್ ಕೊಡಬೇಕು ಎಂಬುದು 1991ರಲ್ಲಿ ನಿರ್ಣಯ ಆಗಿದೆ ಎಂದು ಹೇಳಿದರು. ಛಲವಾದಿ ನಾರಾಯಣಸ್ವಾಮಿ ನನ್ನ ಆತ್ಮೀಯ ಮಿತ್ರ. ಒಬ್ಬ ದಲಿತರನ್ನು ಉಪಯೋಗಿಸಿ ಎಐಸಿಸಿ ಅಧ್ಯಕ್ಷರನ್ನು ಟಾರ್ಗೆಟ್ ಮಾಡಿದ್ದಾರೆ. 

ದಲಿತ ನಾಯಕ ಖರ್ಗೆಗೆ ಬಿಜೆಪಿ ಅಪಮಾನ ಮಾಡಿಲ್ವಾ? ನಾರಾಯಣಸ್ವಾಮಿ 2006ರಲ್ಲಿ ಭೂಮಿ ತೆಗೆದುಕೊಂಡಿದ್ದಾರೆ. ಯಾವುದೇ ಕೆಲಸ ಮಾಡಿಲ್ಲ. ಕೋರ್ಟ್‌ಗೆ ಹೋಗಿ ಬದಲಾವಣೆ ಮಾಡಿಕೊಂಡು ಬಂದಿದ್ದಾರೆ. ಒಂದು ಶೆಡ್ ನಿರ್ಮಾಣ ಮಾಡಿ ಸಂಪೂರ್ಣ ಸೇಲ್ ಡೀಡ್ ಕೇಳಿದ್ದಾರೆ ಎಂದು ಮಾಹಿತಿ ನೀಡಿದರು. ವಿಜಯೇಂದ್ರನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿಯಲ್ಲಿ ವಿಜಯೇಂದ್ರ ನಾಯಕತ್ವಕ್ಕೆ ಯಾರೂ ಒಪ್ಪುತ್ತಿಲ್ಲ. ವಿಜಯೇಂದ್ರನ ಗಾಡಿ ಬಹಳ ದಿನ ಹೋಗುವುದಿಲ್ಲ. ಯಡಿಯೂರಪ್ಪ ಅವಧಿಯಲ್ಲಿ ಲಿಂಗಾಯತ ವಿರುದ್ಧ ಲಿಂಗಾಯತರನ್ನೇ ಎತ್ತಿ ಕಟ್ಟಲಾಯಿತು. ಎಲ್ಲರನ್ನೂ ಒಡೆದಾಳುವುದು ಆರ್‌ಎಸ್‌ಎಸ್‌ ನೀತಿಯಾಗಿದೆ ಎಂದು ದೂರಿದರು.

ಬೆಳಗಾವಿ-ಹುಬ್ಬಳ್ಳಿ ಮಧ್ಯೆ ಸ್ಟಾರ್ಟ್ ಅಪ್ ಪಾರ್ಕ್: ಬೆಳಗಾವಿ ‌ಹಾಗೂ ಹುಬ್ಬಳ್ಳಿ ಮಧ್ಯೆ ನೂರು ಎಕರೆ ಪ್ರದೇಶದಲ್ಲಿ ಸ್ಟಾರ್ಟ್ ಅಪ್ ಪಾರ್ಕ್ ಮಾಡುತ್ತೇವೆ. ಬೆಳಗಾವಿ ಗೋವಾ ಹೈವೇ ಮೇಲೆ ಫೌಂಡ್ರಿ ಪಾರ್ಕ್ ಮಾಡುತ್ತೇವೆ. ಕಿತ್ತೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕಿತ್ತು. ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿದ್ದರಿಂದ ಇದು ಸಾಧ್ಯವಾಗಿಲ್ಲ. ಬೆಳಗಾವಿ-ಹುಬ್ಬಳ್ಳಿ ನಡುವೆ ಇಂಡಸ್ಟ್ರಿಯಲ್ ಕಾರಿಡಾರ್ ಮಾಡಲು ಪ್ರಯತ್ನ ಮಾಡುವೆ ಎಂದರು. ಹುಬ್ಬಳ್ಳಿ ಹಾಗೂ ಬೆಳಗಾವಿ ನೇರ ರೈಲು ಮಾರ್ಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಲೈನ್‌ಮೆಂಟ್ ಸಮಸ್ಯೆ ಇವೆ. 

ಟ್ರಕ್ ಟರ್ಮಿನಲ್ ಕೇಸಲ್ಲಿ ಬಿಜೆಪಿಯ ಮಾಜಿ ಶಾಸಕ ಡಿ.ಎಸ್.ವೀರಯ್ಯ ಆಕ್ರಮ ಸಾಬೀತು: ಸಿಐಡಿ ಚಾರ್ಜ್‌ಶೀಟ್‌

ನಾಲ್ಕೈದು ದಿನಗಳ ಹಿಂದೆ ಸಭೆ ಮಾಡಿದ್ದೇನೆ‌. ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಈ ಯೋಜನೆ ಜಾರಿಯಾದರೆ ಬೆಳಗಾವಿ ಹಾಗೂ ಬೆಂಗಳೂರಿನ ರೈಲು ಪ್ರಯಾಣದ ಅಂತರ ಐದು ಗಂಟೆ ಕಡಿಮೆಯಾಗಲಿದೆ. ಸಂಬಂಧಿಸಿದ ಶಾಸಕರು, ಸಚಿವರ ಜೊತೆಗೆ ಮಾತನಾಡಿದ್ದೇನೆ. ಅಲೈನ್‌ಮೆಂಟ್ ಬದಲಾವಣೆಗೆ ರೈಲು ಇಲಾಖೆ ಒಪ್ಪಲ್ಲ ಎಂದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ಖಾನೆಯ ಕೆಲವು ನಿಯಮ ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅದನ್ನು ಬಂದ್ ಮಾಡಲಾಗಿದೆ. ಅಧಿಕಾರಿಗಳು ಸಹ ತಪಾಸಣೆ ನಡೆಸಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ರಾಜಾ ಸಲೀಂ, ರಾಜೇಂದ್ರ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios