ಈಶ್ವರಪ್ಪ ರಾಜಕೀಯ ಬಿಟ್ಟು ಭವಿಷ್ಯ ಹೇಳಲಿ, ಗಿಳಿ ಪಂಚಾಂಗ ಗಿಫ್ಟ್ ಕೋಡಿಸುತ್ತೇನೆ: ಕೈ ನಾಯಕಿ ನಾಗವೇಣಿ ಪಾಟೀಲ್
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯ ಒಬ್ಬ ಮಿಮಿಕ್ರಿ ಕಲಾವಿದ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ರಾಯಚೂರು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾಗವೇಣಿ ಪಾಟೀಲ್ ಅವರು ಈಶ್ವರಪ್ಪನವರು ರಾಜಕೀಯ ಬಿಟ್ಟು ಭವಿಷ್ಯ ಹೇಳಲು ಮುಂದಾಗಲಿ, ಅವರಿಗೆ ಗಿಳಿ ಪಂಚಾಂಗ ಗಿಫ್ಟ್ ನೀಡುತ್ತೇನೆ ಎಂದಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಫೆ.20): ರಾಯಚೂರಿನಲ್ಲಿ ನಿನ್ನೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ರು. ಈ ವೇಳೆ ಅಂದ್ರೆ 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಯಾವುದೇ ಕಡೆಯಲ್ಲಿ ನಿಂತರೂ ಸೋಲಿಸುತ್ತಾರೆ. ದಲಿತರು, ಹಿಂದುಳಿದವರೇ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆ. ಕರ್ನಾಟಕದಲ್ಲಿ ಎಲ್ಲೇ ನಿಂತರೂ ಸಿದ್ದರಾಮಯ್ಯ ಸೋಲ್ತಾರೆ, ಇದಕ್ಕಾಗಿ ಕಾಂಗ್ರೆಸ್ ನ ಜಿ. ಪರಮೇಶ್ವರ ಕಾದು ಕೂತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಶ್ರೀನಿವಾಸ್ ಪ್ರಸಾದ್ ಇನ್ನಿತರ ನಾಯಕರೇ ಇವರನ್ನು ಸೋಲಿಸುತ್ತಾರೆ. ಸಿದ್ದರಾಮಯ್ಯ ಒಬ್ಬ ಮಿಮಿಕ್ರಿ ಕಲಾವಿದ ಹೀಗೆ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನ ಗಂಭೀರವಾಗಿ ಪರಿಗಣಿಸಿದ ರಾಯಚೂರಿನ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನಾಗವೇಣಿ ಪಾಟೀಲ್, ಸದ್ಯ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಸಚಿವ ಸ್ಥಾನದಿಂದ ಬಿಜೆಪಿ ಕೈಬಿಟ್ಟಿದೆ. ಹೀಗಾಗಿ ಕೆ.ಎಸ್. ಈಶ್ವರಪ್ಪನವರು ರಾಜಕೀಯ ಬಿಟ್ಟು ಭವಿಷ್ಯ ಹೇಳಲು ಮುಂದಾಗಲಿ, ಅವರಿಗೆ ಬೇಕಾದ ಗಿಳಿ ಪಂಚಾಂಗ ಗಿಫ್ಟ್ ಕೋಡಿಸುತ್ತೇನೆ ಎಂದು ಸಿದ್ದರಾಮಯ್ಯ ಬಗ್ಗೆ ಈಶ್ವರಪ್ಪ ಹೇಳಿದ ಹೇಳಿಕೆಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
ಇನ್ನೂ ರಾಜ್ಯದಲ್ಲಿ ಬಿಜೆಪಿ ಕೆಟ್ಟ ಸರ್ಕಾರದಿಂದ ಕರ್ನಾಟಕ ರಾಜ್ಯ ಅಧೋಗತಿ ತಲುಪಿದೆ. ಅಭಿವೃದ್ಧಿಯಿಲ್ಲ ಹಿಂದೂ ಎಂಬ ಮಂತ್ರ ಹಿಡಿದು ಶೇ. 40%ರಷ್ಟು ಕಮಿಷನ್ ದಂಧೆಯಲ್ಲಿ ಮುಳುಗಿ ರಾಜ್ಯದ ಫಲಾನುಭವಿಗಳಿಗೆ ಯಾವೊಂದು ಯೋಜನೆಗಳು ಸಿಗುತ್ತಿಲ್ಲ. ಬಡವರು ಸಂಕಷ್ಟವನ್ನ ಎದುರಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿಯೂ ತಾವೂ ಕಮಿಷನ್ ದಂಧೆಯಲ್ಲಿ ಸಿಲುಕಿ ಮಂತ್ರಿ ಸ್ಥಾನ ಕಳೆದುಕೊಂಡವರು. ನೀವೂ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಯಾವ ನೈತಿಕತೆ ನಿಮಗೆ ಇದೆ. ಸಿದ್ದರಾಮಯ್ಯನವರ ಬಗ್ಗೆ ಇಲ್ಲ-ಸಲ್ಲದ ಹೇಳಿಕೆ ನೀಡುತ್ತಿರುವುದು ನಿಮಗೆ ಶೋಭೆತರಲ್ಲ.
ಇನ್ನೂ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಗಳಾಗಿ 5 ವರ್ಷ ಪೂರೈಸಿದರು. ಒಂದೇ ಒಂದು ಕಪ್ಪು ಚುಕ್ಕೆ ಕಾಂಗ್ರೆಸ್ ಸರಕಾರಕ್ಕೆ ಬರಲಿಲ್ಲ. ರೈತರ ಸಾಲಮನ್ನಾ ಹಸಿದ ಹೊಟ್ಟೆಗೆ ಅನ್ನಭಾಗ್ಯ ಯೋಜನೆ ತಂದು ಬಡವರ ಹೊಟ್ಟೆ ತುಂಬಿಸಿದ ಧೀಮಂತ ನಾಯಕರು. ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಬಡ ಮುಸ್ಲಿಮರಿಗೆ ಶಾದಿಭಾಗ್ಯ ಕೊಟ್ಟ ಭಾಗ್ಯಗಳ ಸರ್ದಾರ ನಮ್ಮ ಸಿದ್ದರಾಮಯ್ಯ. ಇಂತಹ ಜನಪರ ನಾಯಕರ ಬಗ್ಗೆ ಮಾತನಾಡುವಾಗ ತಾವೂ ಎಚ್ಚರದಿಂದ ಮಾತನಾಡಬೇಕಾಗಿದೆ.
ಚಿಕ್ಕಮಗಳೂರು: ಸಚಿವ ಅಶ್ವಥ್ ನಾರಾಯಣರನ್ನ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಆಗ್ರಹ
ಅದು ಬಿಟ್ಟು ಅವರು ಅಲ್ಲಿ ಗೆಲ್ಲಲ್ಲ, ಇಲ್ಲಿ ಗೆಲ್ಲಲ್ಲ ಎಂದು ಭವಿಷ್ಯ ಹೇಳಬೇಕಾದರೆ ತಾವು ಮೊದಲು ರಾಜಕೀಯ ಬಿಟ್ಟು ಭವಿಷ್ಯ ಹೇಳಲು ರೆಡಿ ಆಗಿ ನಾನು ನಿಮಗೆ ಭವಿಷ್ಯ ಹೇಳಲು ಬೇಕಾದ ಗಿಳಿ, ಪಂಚಾಂಗ ಗಿಫ್ಟ್ ನೀಡುತ್ತೇನೆ. ಅದನ್ನು ತೆಗೆದುಕೊಂಡು ಭವಿಷ್ಯ ಹೇಳುತ್ತಾ ಹೋಗಿ. ಸಿದ್ದರಾಮಯ್ಯ ಇಡೀ ರಾಜ್ಯದಲ್ಲಿ ಜನಪರ ಕಾರ್ಯಗಳನ್ನು ರೂಪಿಸುವ ಮಹಾನ್ ನಾಯಕ. ಅವರ ಬಗ್ಗೆ ಕೆ.ಎಸ್. ಈಶ್ವರಪ್ಪ ಅವರು ಪದೇ ಪದೇ ಸೋಲುತ್ತಾರೆ ಎಂಬ ಹೇಳಿಕೆ ನೀಡುವುದು ಸರಿಯಲ್ಲ.
ಮುಂಬರುವ ಚುನಾವಣೆಯಲ್ಲಿ ಅಹಿಂದ್ ವರ್ಗ ನಿಮಗೆ ತಕ್ಕ ಪಾಠ ಕಲಿಸುತ್ತದೆ. ಸಿದ್ದರಾಮಯ್ಯ ರಾಜ್ಯದ ಯಾವ ಮೂಲೆಯಲ್ಲಿ ನಿಂತರು ಅವರನ್ನು ಮತದಾರರು ಗೆಲ್ಲಿಸುತ್ತಾರೆ ಆದರೆ ಸೋಲಿಸುತ್ತಾರೆ ಎಂಬ ಹೇಳಿಕೆ ನೀಡುತ್ತಿರುವ ಈಶ್ವರಪ್ಪ ಅವರನ್ನು ಈ ಭಾರಿ ಚುನಾವಣೆಯಲ್ಲಿ ಜನವೇ ನಿಮಗೆ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.