ನಾನು ಕ್ರಿಕೆಟ್‌ ನೋಡಲು ಹೋಗಿದ್ದಕ್ಕೆ ಟೀಕೆ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿಯಾಗಿದ್ದಾಗ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಇದ್ದ ಕಾರಣವನ್ನು ಮೊದಲು ತಿಳಿಸಲಿ ಎಂದು  ಆಗ್ರಹಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು(ಅ.25): ಕುಣಿಯಲಾರದವರು ನೆಲಡೊಂಕು ಎಂದು ಹೇಳುವಂತೆ ತಮಗೆ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣಕ್ಕೆ ಬೇರೆಯವರ ಮೇಲೆ ಆರೋಪ ಹೊರಿಸಿರುವುದು ನಿರರ್ಥಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ನಾನು ಕ್ರಿಕೆಟ್‌ ನೋಡಲು ಹೋಗಿದ್ದಕ್ಕೆ ಟೀಕೆ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿಯಾಗಿದ್ದಾಗ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಇದ್ದ ಕಾರಣವನ್ನು ಮೊದಲು ತಿಳಿಸಲಿ ಎಂದೂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ಬರ ಇದ್ದರೂ ಸಿಎಂ, ಡಿಸಿಎಂಕ್ರಿಕೆಟ್‌ ವೀಕ್ಷಣೆ: ಎಚ್‌ಡಿಕೆ ಕಿಡಿ

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಅಂಗವಾಗಿ ನಗರದ ಟೌನ್‌ಹಾಲ್‌ ಮುಂಭಾಗದ ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಕೆಟ್ ಕೂಡ ಒಂದು ಕ್ರೀಡೆ. ಕ್ರೀಡೆಯನ್ನು ಪ್ರೋತ್ಸಾಹಿಸುವುದು, ಬೆಂಬಲಿಸುವುದು ಆಡಳಿತದ ಒಂದು ಭಾಗ. ಆ ಹಿನ್ನೆಲೆಯಲ್ಲಿ ನಾನು ಕ್ರಿಕೆಟ್‌ ನೋಡಲು ತೆರಳಿದ್ದೆ ಎಂದು ಪ್ರತಿಪಾದಿಸಿದರು.

ಕಾವೇರಿ ವಸತಿಗೃಹವನ್ನು ಅಂದು ಮುಖ್ಯಮಂತ್ರಿ ಆಗಿದ್ದವರು ಹಿಂದಿರುಗಿಸಲಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿಕೆಗೆ ಉತ್ತರಿಸುತ್ತಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೂ ಕಾವೇರಿಯಲ್ಲಿ ಕಡೆಯತನಕ ವಾಸವಿದ್ದರು. ಜಾರ್ಜ್ ಅವರಿಗೆ ಹಂಚಿಕೆಯಾಗಿದ್ದ ವಸತಿಗೃಹದಲ್ಲಿ ನಾನು ವಾಸವಿದ್ದೆ. ನಾನು ವಾಸವಿದ್ದ ವಸತಿಗೃಹ ಮೀಸಲಾದ ವಸತಿಗೃಹವಲ್ಲ. ಅದರಲ್ಲಿ ಯಾರು ಬೇಕಾದರೂ ವಾಸವಿರಬಹುದು ಎಂದರು.