ನಾಯಕತ್ವ ಬದಲು, ಹೊಸ ಮುಖಕ್ಕೆ ಮಣೆ: ಸಂತೋಷ್ ಹೇಳಿಕೆ ಸಂಚಲನ
* ಗುಜರಾತ್ ಸಿಎಂನೇ ಬದಲಿಸಿದ್ದೇವೆ
* ಪಾಲಿಕೆಗಳಲ್ಲಿ ಹೊಸಬರನ್ನು ಗೆಲ್ಲಿಸಿದ್ದೇವೆ: ಬಿಜೆಪಿಗ
* ಇದು ರಾಜ್ಯದಲ್ಲಿ ಸಿಎಂ ಬದಲಾವಣೆ ಸಂದೇಶ: ಸಿದ್ದು
* ಅಪಾರ್ಥ ಕಲ್ಪಿಸಬೇಡಿ: ಸಿ.ಟಿ.ರವಿ
* ಬೊಮ್ಮಾಯಿ ಬದಲಿಸಲು ಆರೆಸ್ಸೆಸ್‌ನಿಂದ ಯತ್ನ
ಮೈಸೂರು(ಮೇ.02): ‘ಗುಜರಾತ್‌ನಲ್ಲಿ ಮುಖ್ಯಮಂತ್ರಿ ಸೇರಿ ಇಡೀ ಸಂಪುಟವನ್ನೇ ಪುನಾರಚನೆ ಮಾಡಿದ್ದೇವೆ. ಗುಜರಾತ್, ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ್ದರಿಂದ ಗೆದ್ದಿದ್ದೇವೆ. ಬಿಜೆಪಿಯಲ್ಲಿ ಇಂತಹ ಪ್ರಯೋಗಗಳು ಯಶಸ್ವಿಯಾಗಿವೆ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ನೀಡಿದ ಹೇಳಿಕೆ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷವಷ್ಟೇ ಇದೆ ಎನ್ನುವಾಗ ಪಕ್ಷದ ರಾಷ್ಟ್ರೀಯ ಮುಖಂಡರೊಬ್ಬರು ನೀಡಿದ ಈ ಹೇಳಿಕೆಯನ್ನು ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಸಂದೇಶ ಎಂದು ಪ್ರತಿಪಕ್ಷ ಕಾಂಗ್ರೆಸ್ ವಿಶ್ಲೇಷಿಸಿದರೆ, ರಾಜ್ಯ ಬಿಜೆಪಿ ಮುಖಂಡರು ಮಾತ್ರ ಆ ರೀತಿಯ ಸಾಧ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಂತೋಷ್ ಹೇಳಿಕೆಯನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಅವರು ಹೇಳಿದ್ದು ಸರಿಯಾಗಿಯೇ ಇದೆ. ಪಾಲಿಕೆ ಚುನಾವಣೆ ಕೇಂದ್ರಿತವಾಗಿ ಆ ಹೇಳಿಕೆ ನೀಡಿದ್ದಾರೆ’ ಎಂದು ಸ್ಪಷ್ಟನೆ ನೀಡಿದರೆ, ಇದು ಸಾರ್ವತ್ರಿಕ ಹೇಳಿಕೆ, ಯಾರೂ ಅಪಾರ್ಥ ಕಲ್ಪಿಸೋದು ಬೇಡ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆರೆಸ್ಸೆಸ್ನವರು ಬದಲಾಯಿಸಲು ಹೊರಟಿದ್ದಾರೆ ಎಂದು ಸಂತೋಷ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ಲೇಷಣೆ ಮಾಡಿದ್ದಾರೆ.
ಸಂತೋಷ್ ಹೇಳಿದ್ದೇನು?:
ಮೈಸೂರಿನ ರಿಯೋ ಮೆರೀಡಿಯನ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ಮುಖಂಡರ ಸಭೆಯಲ್ಲಿ ಮಾತನಾಡಿದ ಬಿ.ಎಲ್. ಸಂತೋಷ್ ಅವರು, ದೆಹಲಿ, ಗುಜರಾತ್ ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ಎದುರಿಸಿದ್ದೇವೆ. ಹೊಸ ಮುಖಗಳಿಗೆ ಮಣೆ ಹಾಕಿದ್ದೇ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೇ ಟಿಕೆಟ್ ನೀಡಲಿಲ್ಲ. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನೂ ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂಥ ಪ್ರಯೋಗಗಳು ನಡೆಯುತ್ತವೆ ಎಂದು ಹೇಳಿದ್ದರು. ಅಲ್ಲದೆ, ಗುಜರಾತ್‌ನಲ್ಲಿ ಮುಖ್ಯಮಂತ್ರಿ ಸೇರಿ ಇಡೀ ಕ್ಯಾಬಿನೆಟ್ ಅನ್ನೇ ಪುನರ್ ರಚಿಸಿದ್ದೆವು ಎಂದು ತಿಳಿಸಿದ್ದರು.
ಸಾರ್ವತ್ರಿಕವಾಗಿ ಹೇಳಿದ್ದಾರೆ-ಸಿ.ಟಿ.ರವಿ:
ಬಿ.ಎಲ್. ಸಂತೋಷ್ ಅವರ ಹೇಳಿಕೆ ಬಗ್ಗೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ. ಅವರು ನಿರ್ದಿಷ್ಟವಾದ ಕ್ಷೇತ್ರವನ್ನು ಉದ್ದೇಶಿಸಿ ಹೇಳಿಲ್ಲ, ಸಾರ್ವತ್ರಿಕವಾಗಿ ಹೇಳಿದ್ದಾರೆ ಎಂದಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ನಮ್ಮ ಪಕ್ಷ ನಿಂತ ನೀರಲ್ಲ, ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಇರುತ್ತೇವೆ ಎಂದೂ ತಿಳಿಸಿದ್ದಾರೆ.
ನಾವು ಪ್ರಯೋಗಶೀಲತೆಗೆ ಹೆಚ್ಚಿನ ಒತ್ತು ನೀಡುತ್ತೇವೆ, ಯಾವ ಕ್ಷೇತ್ರದಲ್ಲಿ ಹಳಬರು ಗೆಲ್ಲುವ ಸಾಧ್ಯತೆ ಕಡಿಮೆ ಇರುತ್ತದೆಯೋ ಅಲ್ಲಿ ಬದಲಾವಣೆ ಆಗಲಿದೆ. ಹಾಗಂತ ಎಲ್ಲರನ್ನು ಬದಲಾಯಿಸಿ ಬಿಡುತ್ತೇವೆ ಎಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂತೋಷ್ ಅವರ ಹೇಳಿಕೆಯಿಂದ ಪಕ್ಷದಲ್ಲಿ ಲಾಬಿ ಮಾಡುವ ಅನೇಕರಿಗೆ ಆತಂಕ ಶುರುವಾಗಿದೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದರೆ, ಕುಟುಂಬ ರಾಜಕಾರಣ ಇಲ್ಲ. ಸಂತೋಷ್ ಅವರು ಹೇಳಿದಂತೆ ರಾಜ್ಯದಲ್ಲಿ ಈಗಾಗಲೇ ನಾಯಕತ್ವ ಬದಲಾವಣೆ ಮಾಡಲಾಗಿದೆ ಎಂದು ಸಂಸದ ಸಿದ್ದೇಶ್ವರ್ ತಿಳಿಸಿದ್ದಾರೆ.
ಸಿಎಂ ಬದಲಾವಣೆ-ಸಿದ್ದು:
ಸಂತೋಷ್ ಅವರ ಹೇಳಿಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿರುವ ಸಂದೇಶ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಆರ್‌ಎಸ್‌ಎಸ್‌ನವರÜಲ್ಲ, ಜನತಾ ಪರಿವಾರದಿಂದ ಬಂದವರು. ಹೀಗಾಗಿ, ಆರೆಸ್ಸೆಸ್ನವರು ಅವರನ್ನು ಬದಲಾಯಿಸಲು ಹೊರಟಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಜತೆಗಿದ್ದರೂ ಬೊಮ್ಮಾಯಿ ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ ಎಂದು ತಿಳಿಸಿದ್ದಾರೆ.