Karnataka eleection 2023: ಪಕ್ಷಾಂತರಿಗಳ ಕಾಟ; ಮುಖಂಡರಿಗೆ ತಲೆಬೇನೆ!
ವಿಧಾನಸಭಾ ಕ್ಷೇತ್ರಗಳ ಚುನಾವಣೆ ಬಿಸಿ ನಿಧಾನವಾಗಿ ಏರುತ್ತಿದ್ದು, ಈ ನಡುವೆ ‘ಆಯಾರಾಮ್ ಗಯಾರಾಮ್’ ಎಂಬಂತೆ ಈ ಪಕ್ಷದವರು ಆ ಪಕ್ಷಕ್ಕೆ, ಆ ಪಕ್ಷದವರು ಈ ಪಕ್ಷಕ್ಕೆ ಪಕ್ಷಾಂತರಗೊಳ್ಳುವ ಕಾರ್ಯ ಭರದಿಂದ ನಡೆಯುತ್ತಿದೆ.
ಶಿವಮೊಗ್ಗ (ಏ.28) : ವಿಧಾನಸಭಾ ಕ್ಷೇತ್ರಗಳ ಚುನಾವಣೆ ಬಿಸಿ ನಿಧಾನವಾಗಿ ಏರುತ್ತಿದ್ದು, ಈ ನಡುವೆ ‘ಆಯಾರಾಮ್ ಗಯಾರಾಮ್’ ಎಂಬಂತೆ ಈ ಪಕ್ಷದವರು ಆ ಪಕ್ಷಕ್ಕೆ, ಆ ಪಕ್ಷದವರು ಈ ಪಕ್ಷಕ್ಕೆ ಪಕ್ಷಾಂತರಗೊಳ್ಳುವ ಕಾರ್ಯ ಭರದಿಂದ ನಡೆಯುತ್ತಿದೆ.
ಟಿಕೆಟ್ ಪಡೆಯುವ ಹೊತ್ತಿನಲ್ಲಿ ಟಿಕೆಟ್ ಆಕಾಂಕ್ಷಿ ನಾಯಕರ ಪಕ್ಷಾಂತರ ಪರ್ವ ಭಾರಿ ಸದ್ದು ಮಾಡುತ್ತಿದ್ದರೆ, ಚುನಾವಣಾ ಕಣ ರಂಗೇರುತ್ತಿರುವ ಹೊತ್ತಿನಲ್ಲಿ ಈಗ ಪಕ್ಷಾಂತರ ನಡೆಗಳು ಸದ್ದಿಲ್ಲದೇ ಬಿರುಸುಗೊಂಡಿವೆ.
ಈ ಸಂದರ್ಭದಲ್ಲಿ ನಡೆಯುತ್ತಿರುವ ಈ ಪಕ್ಷಾಂತರ ಮೂರನೇ ಹಂತದ ನಾಯಕರು ಮತ್ತು ತಳಹಂತದ ಕಾರ್ಯಕರ್ತರ ಮಟ್ಟದಲ್ಲಿ ಜೋರಾಗಿ ನಡೆಯುತ್ತಿದೆ. ನಿತ್ಯ ಪಕ್ಷದ ಕಚೇರಿಗಳಲ್ಲಿ, ಪ್ರಚಾರ ಕಾರ್ಯಗಳ ನಡುವಿನ ಸಭೆಯಲ್ಲಿ ಈ ಪಕ್ಷಾಂತರ ಕಾರ್ಯ ನಡೆಯುತ್ತಿದೆ. ಒಂದು ಪಕ್ಷದ ಶಾಲು ಎಸೆದು, ಇನ್ನೊಂದು ಪಕ್ಷದ ಶಾಲನ್ನು ಹೊದ್ದು ಹೊಸ ಹುರುಪಿನೊಂದಿಗೆ ನಾಯಕರ ಹಿಂದೆ ಓಡಾಡಲಾರಂಭಿಸಿದ್ದಾರೆ. ಕೊಟ್ಟಮಾತು, ಪಡೆದ ಲಾಭ ಇಲ್ಲಿ ಯಾರಿಗೂ ನೆನಪಾಗುತ್ತಿಲ್ಲ. ಈ ಕ್ಷಣದ ಲಾಭ-ನಷ್ಟಗಳ ಲೆಕ್ಕಾಚಾರವೇ ಮುಖ್ಯವಾಗುತ್ತಿದೆ.
ಶಿವಮೊಗ್ಗ: ಬಿಜೆಪಿಗೆ ಮತ ನೀಡದಿರಲು ರೈತ ಸಂಘ ನಿರ್ಧಾರ
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಇದು ಜೋರಾಗಿದ್ದರೆ, ಆಮ್ ಆದ್ಮಿ ಪಾರ್ಟಿ ಕೂಡ ಇದಕ್ಕೆ ಪೂರ್ಣ ಹೊರತಾಗಿಲ್ಲ. ಕಾರ್ಯಕರ್ತರ ಕೊರತೆ ಎದುರಿಸುತ್ತಿರುವ ಈ ಪಕ್ಷದಲ್ಲಿ ಕೂಡ ಇರುವ ಕಾರ್ಯಕರ್ತರು ಇದ್ದಕ್ಕಿದ್ದಂತೆ ಮಾಯವಾಗುತ್ತಿದ್ದಾರೆ. ಮಾರನೇ ದಿನ ಇನ್ನೆಲ್ಲೋ ಪ್ರತ್ಯಕ್ಷವಾಗುತ್ತಿದ್ದಾರೆ. ‘ಕೊಟ್ಟಕರಪತ್ರವನ್ನಾದರೂ ವಾಪಸ್ ಕೊಟ್ಟು ಹೋಗ್ರೋ’ ಎಂಬ ಮಾತು ವಿಷಾದದ ಛಾಯೆ ಉಕ್ಕಿಸುತ್ತಿದೆ.
ತಮ್ಮ ನಾಯಕರು ಹೋದ ಪಕ್ಷಕ್ಕೆ ನಾವು ಹೋಗಬೇಕು ಎಂದು ಕೆಲವರು ತೂಗಿ ಅಳೆದು ನಿರ್ಧರಿಸಿ ತೀರ್ಮಾನ ಕೈಗೊಳ್ಳುತ್ತಿದ್ದರೆ, ಇನ್ನು ಕೆಲವರು ಇರುವ ಪಕ್ಷದಲ್ಲಿ ತಮ್ಮನ್ನು ಸರಿಯಾಗಿ ಮಾತನಾಡಿಸುತ್ತಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಪಕ್ಷಾಂತರ ಪರ್ವದಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಕುರುಡು ಕಾಂಚಾಣದ ಬೆನ್ನುಹತ್ತಿ ಹೊರಟವರು ಕೂಡ ಸಾಕಷ್ಟುಮಂದಿಯಿದ್ದಾರೆ.
ಮತದಾರರ ಉತ್ಸಾಹ ಕಂಡು ನಮಗೆ ಮತ್ತಷ್ಟುಹುಮ್ಮಸ್ಸು: ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್
‘ಈ ಕಾರ್ಯಕರ್ತರೆಲ್ಲ ಅವರವರ ವಾಹನದಲ್ಲಿಯೇ ಬಂದು ನಮ್ಮ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ನಾವು ವಾಹನದ ಖರ್ಚನ್ನು ಕೂಡ ಕೊಡುತ್ತಿಲ್ಲ’ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದರೆ, ಅತ್ತ ಇವರನ್ನೆಲ್ಲಾ ಕರೆದುಕೊಂಡು ಬಂದ ಸ್ಥಳೀಯರು ನಾಯಕರು ಪಟ್ಟಿಯೊಂದನ್ನು ಜೇಬಿನಿಂದ ಮರೆಯಲ್ಲಿ ತೆಗೆದು ಖರ್ಚಿನ ಲೆಕ್ಕಾಚಾರ ಮಾಡಿಸಿಕೊಳ್ಳುತ್ತಿರುವುದು ಎಲ್ಲರಿಗೂ ಕಾಣಿಸುತ್ತಲೇ ಇದೆ. ಇಲ್ಲಿ ಯಾವ ಸಿದ್ಧಾಂತ, ನೈತಿಕತೆ, ಪಕ್ಷನಿಷ್ಠೆ ಯಾವುದೂ ಇಲ್ಲ. ಆಯಾ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಿರುವ ಅನುಕೂಲ ಸಿಂಧು ರಾಜಕಾರಣ ಮಾತ್ರ ಮೆರೆಯುತ್ತಿದೆ ಅನ್ನೋದು ಸತ್ಯ.