ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಎಐಸಿಸಿ ವರಿಷ್ಠ ಸುರ್ಜೇವಾಲಾ ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಹೀಗಾಗಿ, ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಹುಬ್ಬಳ್ಳಿ (ಜು.13): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಮಾಧ್ಯಮದಲ್ಲಿ ಚರ್ಚೆ ಆಗುತ್ತಿದೆಯೇ ಹೊರತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಎಐಸಿಸಿ ವರಿಷ್ಠ ಸುರ್ಜೇವಾಲಾ ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಹೀಗಾಗಿ, ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರೂ ಮೊನ್ನೆ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬದಲಾವಣೆ ಮಾಡುವವರು ಹಾಗೂ ಬದಲಾವಣೆ ಆಗುವವರು ಚರ್ಚೆ ಮಾಡುತ್ತಿಲ್ಲ. ಮಾಧ್ಯಮದಲ್ಲಿ ಮಾತ್ರ ಈ ಬಗ್ಗೆ ಚರ್ಚೆ ಆಗುತ್ತಿದೆ. ಇವೆಲ್ಲ ಇದೀಗ ಅಪ್ರಸ್ತುತ ಎಂದರು.
ರಾಜ್ಯದ ನಾಯಕರು ದುರ್ಬಲರಾಗಿದ್ದಾರೆ. ಹೀಗಾಗಿ, ಸಿದ್ದು, ಡಿಕೆಶಿ ಭೇಟಿಗೆ ರಾಹುಲ್ ಗಾಂಧಿ ಅವಕಾಶ ನೀಡಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗೇನೂ ಇಲ್ಲ. ರಾಹುಲ್ ಗಾಂಧಿಯವರು ಬಿಹಾರ ಚುನಾವಣೆಯ ಸೀಟ್ ಹಂಚಿಕೆ ಮತ್ತಿತರ ಚರ್ಚೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ, ಅವರನ್ನು ಭೇಟಿ ಮಾಡಲು ಆಗಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಕುರಿತು ಯಾರೂ ದೂರು ನೀಡಿಲ್ಲ. ಈ ಖುರ್ಚಿ ಯಾವಾಗಲೂ ಕಾಯಂ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರ ಕೈಗೊಂಡಾಗ ನಾವು ಕೆಳಗಿಳಿಯುತ್ತೇವೆ ಎಂದಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ವರಿಷ್ಠರು ಹೇಳಿದಂತೆ ಎಲ್ಲರೂ ಕೇಳುತ್ತಾರೆ. ಸಮಯ ಬಂದಾಗ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ರೀ ನೇಮ್ ಸರ್ಕಾರ: ಇದೇ ವೇಳೆ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದೊಂದು ರಿನೇಮ್ ಸರ್ಕಾರವಾಗಿದೆ. ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿ ಯುಪಿಎ ಸರ್ಕಾರಗಳು ಮಾಡಿದ ಯೋಜನೆಗಳ ಹೆಸರುಗಳನ್ನು ಬದಲಾವಣೆ ಮಾಡಿ (ರಿನೇಮ್ ಮಾಡಿ) ಹೊಸ ಯೋಜನೆಗಳನ್ನು ಮೋದಿ ಅವರು ಜಾರಿಗೆ ತಂದಿದ್ದಾರೆ ಎಂದು ಫೇಸ್‌ಬುಕ್ ಮತ್ತು ವಾಟ್ಸ್ ಆ್ಯಪ್‌ಗಳ ಮೂಲಕ ಬಿಜೆಪಿಯವರು ಸುಳ್ಳು ಹೇಳುತ್ತಾರೆ. ಬಿಜೆಪಿ ಹೊಸದಾಗಿ ಏನನ್ನೂ ತಂದಿಲ್ಲ. ಅಚ್ಚೇ ದಿನ್, ಆತ್ಮನಿರ್ಭರ ಭಾರತ್, ಅಮೃತಕಾಲ, ವಿಕಸಿತ ಭಾರತ, ವಿಶ್ವಗುರು ಇಂತಹ ಘೋಷಣೆಗಳ ಮೂಲಕ ಜನರನ್ನು ಪದೇ ಪದೇ ದಾರಿ ತಪ್ಪಿಸುತ್ತಿದ್ದಾರೆ. ಪಾಕಿಸ್ತಾನದೊಂದಿಗೆ ಯುದ್ಧ ನಡೆದ ವೇಳೆ ಯಾವ ದೇಶದವರೂ ಈ ವಿಶ್ವಗುರುವಿನ ನೆರವಿಗೆ ಬರಲಿಲ್ಲ, ಒಂದೂ ಮಾತನಾಡಲಿಲ್ಲ ಎಂದು ಮೋದಿ ಅವರ ಆಡಳಿತ ವೈಖರಿಯನ್ನು ಟೀಕಿಸಿದರು.
ಮುಸ್ಲಿಂ ರಾಷ್ಟ್ರ ಸೃಷ್ಟಿಗೆ ವೀರಸಾವರ್ಕರ್ ಕಾರಣ: ಬಿಜೆಪಿಯವರಿಗೆ ನನ್ನ ಮೇಲೆ ಅತೀವ ಪ್ರೀತಿ ಇದೆ ಎಂದು ವ್ಯಂಗ್ಯವಾಡಿದ ಖರ್ಗೆ, ವೀರ ಸಾವರ್ಕರ್ ಬಿರುದನ್ನು ಅವರಿಗೆ ಅವರೇ ಕೊಟ್ಟುಕೊಂಡಿದ್ದಾರೆ. ಸಾವರ್ಕರ್ ಅವರು ಬ್ರಿಟಿಷರಿಂದ ಹಲವಾರು ವರ್ಷಗಳ ಕಾಲ 60 ರುಪಾಯಿ ಪಿಂಚಣಿ ಪಡೆದು, 6 ಬಾರಿ ಕ್ಷಮಾಪಣಾ ಪತ್ರ ಬರೆದಿದ್ದರು. ಮುಸ್ಲಿಂ ರಾಷ್ಟ್ರ ಸೃಷ್ಟಿಗೂ ಇದೇ ವೀರಸಾವರ್ಕರ್ ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. ಅಲ್ಲದೆ, ಬಿಜೆಪಿಯವರು ಸಂವಿಧಾನವನ್ನು ಸುಟ್ಟು ಹಾಕಿದ್ದಾರೆ. ಆರ್‌ಎಸ್‌ಎಸ್ 52 ವರ್ಷಗಳ ಕಾಲ ತಮ್ಮ ಕೇಂದ್ರ ಕಚೇರಿಯಲ್ಲಿ ದೇಶದ ಧ್ವಜವನ್ನು ಹಾರಿಸಿರಲಿಲ್ಲ. ಇದು ದೇಶವಿರೋಧಿಯಲ್ಲವೇ ಎಂದು ಸಚಿವ ಪ್ರಿಯಾಂಕ ಖರ್ಗೆಯವರು ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
