ಇಡೀ ದೇಶದ ಜನರು ಶ್ರೀರಾಮ ಮಂದಿರದ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಯುತ್ತಿರುವಾಗ, ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್‌ ತನ್ನ ದುರ್ಬುದ್ಧಿ ಹಾಗೂ ಕುತಂತ್ರ ರಾಜಕಾರಣ ತೋರಿದೆ ಎಂದು ಆಕ್ರೋಶ ಹೊರಹಾಕಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್ 

ಬೆಂಗಳೂರು(ಜ.11): ಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ ಹೋಗದಿರುವುದು ದುರ್ಬುದ್ಧಿ ಹಾಗೂ ಕುತಂತ್ರ ರಾಜಕಾರಣ. ಇವರಿಗೆ ಆ ಶ್ರೀರಾಮನೇ ಬುದ್ಧಿ ಕಲಿಸುತ್ತಾನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದ ಜನರು ಶ್ರೀರಾಮ ಮಂದಿರದ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಯುತ್ತಿರುವಾಗ, ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್‌ ತನ್ನ ದುರ್ಬುದ್ಧಿ ಹಾಗೂ ಕುತಂತ್ರ ರಾಜಕಾರಣ ತೋರಿದೆ ಎಂದು ಆಕ್ರೋಶ ಹೊರಹಾಕಿದರು.

ಮುಸ್ಲಿಮರ ಓಲೈಕೆಗಾಗಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅವರಾದರೂ ನಮ್ಮ ಕೈ ಹಿಡಿಯಲಿ ಎಂಬ ಕಾರಣಕ್ಕೆ ಕಾಂಗ್ರೆಸ್‌ ನಾಯಕರು ಇಂತಹ ತೀರ್ಮಾನಕ್ಕೆ ಬಂದಿದ್ದಾರೆ. ಇದು ಕಾಂಗ್ರೆಸ್‌ಗೆ ಹಿಂದಿನಿಂದಲೇ ಬೆಳೆದು ಬಂದ ಚಾಳಿ ಎಂದು ಹರಿಹಾಯ್ದರು.

News Hour: ಆರ್‌.ಅಶೋಕ್‌ಗೆ ವಿಪಕ್ಷ ನಾಯಕನ ಪಟ್ಟ, ಬಿಜೆಪಿಯಲ್ಲಿ ಬಂಡಾಯ ಸ್ಫೋಟ!

ಹಿಂದೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುವಾಗ ರಾಮ ಹುಟ್ಟಿರುವುದಕ್ಕೆ ಜನ್ಮ ಪ್ರಮಾಣ ಪತ್ರ ಇದೆಯೇ ಎಂದು ಕಾಂಗ್ರೆಸ್‌ ಕೇಳಿತ್ತು. ರಾಮಜನ್ಮಭೂಮಿಯ ಕುರುಹುಗಳ ಬಗ್ಗೆ ಸಂದೇಹವನ್ನೂ ವ್ಯಕ್ತಪಡಿಸಿದ್ದರು. ರಾಮಾಯಾಣ ಕಾಲ್ಪನಿಕ, ಅದು ನಡೆದೇ ಇಲ್ಲ ಎಂದು ಅವರು ವಾದಿಸಿದ್ದರು. ಹಿಂದೂಗಳನ್ನು ಕಂಡರೆ ಕಾಂಗ್ರೆಸ್‌ಗೆ ಮೊದಲಿಂದಲೂ ಅಲರ್ಜಿ. ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಈ ರೀತಿ ತೀರ್ಮಾನ ಕೈಗೊಂಡಿರುವುದರಿಂದ ಹಿಂದೂಗಳನ್ನು ಕಡೆಗಣಿಸಿದಂತಾಗಿದೆ ಎಂದರು.