ಸಿಎಂ ಸಿದ್ದರಾಮಯ್ಯ ನುಂಗಣ್ಣನಂತೆ ಎಲ್ಲವನ್ನೂ ನುಂಗುತ್ತಿದ್ದಾರೆ: ಅಶೋಕ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೊಲಗದಿದ್ದರೆ, ಮುಂದಿನ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧವನ್ನೇ ಅಡ ಇಡಲು ಹಿಂದೆ-ಮುಂದೆ ನೋಡುವುದಿಲ್ಲ. ಈಗಾಗಲೇ ಪಾಲಿಕೆ ಕಟ್ಟಡಗಳು, ವಾರ್ಡ್ ಕಚೇರಿಗಳನ್ನು ಅಡ ಇಟ್ಟು ಬ್ಯಾಂಕ್‌ನಿಂದ ಸಾಲ ಪಡೆಯಲಾಗಿದೆ. ಇದೇ ಪ್ರವೃತ್ತಿ ಮುಂದುವರೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧವನ್ನು ಸಹ ಅಡವಿಡಲು ಹಿಂಜರಿಯುವುದಿಲ್ಲ ಎಂದು ವಾಗ್ದಾಳಿ ನಡೆಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್
ಬೆಂಗಳೂರು(ಜೂ.18): ತೈಲ ದರ ಏರಿಕೆ ಮಾಡಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಜನರು ದಂಗೆ ಎದ್ದು ಸರ್ಕಾರವನ್ನು ಕಿತ್ತುಹಾಕಬೇಕಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕರೆ ನೀಡಿದ್ದಾರೆ. ಸೋಮವಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನುಂಗಣ್ಣನಂತೆ ಎಲ್ಲವನ್ನೂ ನುಂಗುತ್ತಿದ್ದಾರೆ.
ಸಿದ್ದರಾಮಯ್ಯನವರಿಗೆ ಎರಡು ನಾಲಿಗೆ ಇದೆ. ಬಿಜೆಪಿ ಸರ್ಕಾರ ಪೆಟ್ರೋಲ್ ದರ ಹೆಚ್ಚಳ ಮಾಡಿದ್ದಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನೆ ಮಾಡಿದ್ದರು. ಈಗ ಅವರೇ ತೈಲ ಬೆಲೆ ಹೆಚ್ಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೊಲಗದಿದ್ದರೆ, ಮುಂದಿನ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧವನ್ನೇ ಅಡ ಇಡಲು ಹಿಂದೆ-ಮುಂದೆ ನೋಡುವುದಿಲ್ಲ. ಈಗಾಗಲೇ ಪಾಲಿಕೆ ಕಟ್ಟಡಗಳು, ವಾರ್ಡ್ ಕಚೇರಿಗಳನ್ನು ಅಡ ಇಟ್ಟು ಬ್ಯಾಂಕ್‌ನಿಂದ ಸಾಲ ಪಡೆಯಲಾಗಿದೆ. ಇದೇ ಪ್ರವೃತ್ತಿ ಮುಂದುವರೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧವನ್ನು ಸಹ ಅಡವಿಡಲು ಹಿಂಜರಿಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಎಲ್ಲಾ ಬೆಲೆ ಜಾಸ್ತಿ ಮಾಡುವ ಮೂಲಕ ರಾಜ್ಯ ಸರ್ಕಾರ ದರೋಡೆ ಮಾಡಲು ಹೊರಟಿದೆ: ಆರ್. ಅಶೋಕ್
ತೈಲ ಬೆಲೆ ಹೆಚ್ಚಳವಾದರೆ ಸಿಮೆಂಟ್, ತರಕಾರಿ ಎಲ್ಲ ಬೆಲೆಯೂ ಏರಲಿದೆ ಎಂದಿದ್ದರು. ಈಗ ಯಾವ ಬೆಲೆಗಳು ಹೆಚ್ಚಲಿದೆ ಎಂಬುದನ್ನು ತಿಳಿಸಬೇಕು. ಗ್ಯಾರಂಟಿಗೆ 55 ಸಾವಿರ ಕೋಟಿ ರು. ಮೀಸಲಿಟ್ಟಿದ್ದೇವೆ ಎಂದಿದ್ದರು. ಬಳಿಕ ನಮ್ಮದೇ ಹಣವನ್ನು ದರೋಡೆ ಮಾಡಿ ನಮಗೆ ಮರಳಿ ನೀಡುತ್ತಿದ್ದಾರೆ. ಒಂದು ವರ್ಷವಾದರೂ ಅಭಿವೃದ್ಧಿ ಕಾರ್ಯ ನಡೆದಿಲ್ಲ, ಶಿಕ್ಷಕರಿಗೆ ವೇತನ ನೀಡಿಲ್ಲ, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಿಲ್ಲ. ಬೆಂಗಳೂರನ್ನು ಬ್ರ್ಯಾಂಡ್ ಮಾಡುತ್ತೇನೆಂದು ಹೇಳಿ ಭಾಗ ಮಾಡಲು ಮುಂದಾಗಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ದಲಿತರ 187 ಕೋಟಿ ರು. ನುಂಗಿ ಸಚಿವ ಬಿ.ನಾಗೇಂದ್ರ ಔಟ್ ಆಗಿದ್ದಾರೆ. ಇನ್ನು ಎರಡನೇ ವಿಕೆಟ್ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿದೆ. ನಾಗೇಂದ್ರ 20 ಪರ್ಸೆಂಟ್ ಭ್ರಷ್ಟಾಚಾರ ನಡೆಸಿದರೆ, 80 ಪರ್ಸೆಂಟ್ ಅನ್ನು ಸಿದ್ದರಾಮಯ್ಯ ಹೊಡೆದಿದ್ದಾರೆ. ಈ ಹಣ ತೆಲಂಗಾಣಕ್ಕೆ ಹೋಗಿ, ಬಳಿಕ ಬಾರ್‌ಗಳಿಗೆ ಹೋಗಿದೆ. ದಲಿತರ ಉದ್ಯಮಗಳಿಗೆ, ಅಂಗಡಿಗಳಿಗೆ, ಅವರ ಮಕ್ಕಳ ಶಿಷ್ಯವೇತನಕ್ಕೆ ಈ ಹಣ ಕೊಡಬೇಕಿತ್ತು. ಚೆಕ್‌ನಲ್ಲೇ ಹಗಲು ದರೋಡೆ ಮಾಡಿದ್ದಾರೆ. ಇದರಿಂದಾಗಿ ನಿಷ್ಠಾವಂತ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರು ಕಲುಷಿತ ನೀರು ಕುಡಿದು ಸಾಯುತ್ತಿದ್ದರೂ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ. ಸರ್ಕಾರಿ ಆಸ್ಪತ್ರೆಗೆ ಔಷಧಿ ಖರೀದಿಗೆ, ಶಾಲೆಗೆ ಪುಸ್ತಕ ಕೊಡಲು ಹಣವಿಲ್ಲ. ಇದಕ್ಕಾಗಿಯೇ ತೈಲ ಬೆಲೆ ಏರಿಕೆ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ಅಶೋಕ್ ಕಿಡಿಕಾರಿದರು.