Davanagere: ಯಡಿಯೂರಪ್ಪ ಸೈಡ್‌ಲೈನ್ ಪ್ರಶ್ನೆ ಇಲ್ಲ: ಸಚಿವ ಮಾಧುಸ್ವಾಮಿ
ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಸೈಡ್‌ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ಸಂಘಟನೆ ವಿಚಾರದಲ್ಲಿ ಯಡಿಯೂರಪ್ಪನವರನ್ನು ಮೀರಿಸೋಕೂ ಆಗುವುದಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ದಾವಣಗೆರೆ (ಜು.31): ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಸೈಡ್‌ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ಸಂಘಟನೆ ವಿಚಾರದಲ್ಲಿ ಯಡಿಯೂರಪ್ಪನವರನ್ನು ಮೀರಿಸೋಕೂ ಆಗುವುದಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ನಗರ ಸಕ್ರ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟನೆ ವಿಚಾರದಲ್ಲಿ ಯಡಿಯೂರಪ್ಪನವರನ್ನು ಮೀರಿಸೋಕೆ ಆಗಲ್ಲ.
ಪಕ್ಷದಲ್ಲಿ ಇಂತಹ ನಾಯಕನನ್ನು ಯಾರೂ ಸೈಡ್ ಲೈನ್ ಮಾಡುವುದಕ್ಕೂ ಆಗುವುದಿಲ್ಲ. ಅಂತಹ ಪ್ರಶ್ನೆಯೂ ಇಲ್ಲ. ಜನೋತ್ಸವ ಕಾರ್ಯಕ್ರಮ ನಡೆಸಲು ಸಲಹೆ ಕೊಟ್ಟಿದ್ದೇ ಯಡಿಯೂರಪ್ಪ. ರಾಜ್ಯದ 4 ಕಡೆ ಇಂತಹ ಕಾರ್ಯಕ್ರಮ ಮಾಡುವ ಆಸೆ ಇತ್ತು. ಕಡೆಗೆ ಒಂದೇ ಕಡೆ ಮಾಡಿದರೆ ಸಾಕೆಂಬ ತೀರ್ಮಾನ ಕೈಗೊಳ್ಳಲಾಯಿತು. ಈ ಮಧ್ಯೆ ಕರಾವಳಿ ಭಾಗದ ಬಿಜೆಪಿ ಯುವ ಮುಖಂಡ ಪ್ರವೀಣ ನೆಟ್ಟಾರು ಹತ್ಯೆಯಾಗಿದ್ದರಿಂದ ಜನೋತ್ಸವ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ರಾಜೀನಾಮೆ ವಿಚಾರವಾಗಿ ವಿಷಾದ ವ್ಯಕ್ತಪಡಿಸಿದ ಸಂಸದ ಸಿದ್ದೇಶ್ವರ
ಆತಂಕದ ಸಂಗತಿ: ಪ್ರವೀಣ ನೆಟ್ಟಾರು ಹತ್ಯೆ ತುಂಬಾ ಕೆಟ್ಟದಾಗಿ ನಡೆದಿದೆ. ರಾಜಕೀಯ ಪ್ರೇರಿತ ಹತ್ಯೆಗಳು ಹೆಚ್ಚುತ್ತಿರುವುದು ಆತಂಕದ ಸಂಗತಿ. ಇದನ್ನು ಯಾರು ಮಾಡುತ್ತಿದ್ದಾರೆ ಅನ್ನೋದು ಪತ್ತೆ ಮಾಡಲು ಸಮಯ ಹಿಡಿಯುತ್ತದೆ. ಬಂಧಿತರ ಪೈಕಿ ಓರ್ವನ ತಂದೆ ಅದೇ ಪ್ರವೀಣ ನೆಟ್ಟಾರು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು. ಇಬ್ಬರ ಮಧ್ಯೆ ಉತ್ತಮ ಸಂಬಂಧ ಇತ್ತು ಎನ್ನುತ್ತಾರೆ. ಯಾಕೆ ಹೀಗೆ ಆಗ್ತಾ ಇದೆಯೋ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಯಾರಾದರೂ ಚೇಷ್ಟೆ ಮಾಡುತ್ತಿದ್ದಾರಾ ಅಂತಲೂ ಗೊತ್ತಿಲ್ಲ. ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇನ್ನು ಮುಂದೆ ಯಾರೂ ಸಹ ಹುಡುಗಾಟ ಆಡುವುದಕ್ಕೆ ಸಾಧ್ಯವೂ ಇಲ್ಲ. ಪ್ರವೀಣ ಹತ್ಯೆ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಯುವಕರು ಹತಾಶರಾಗಬಾರದು.
ಅಲ್ಪಸಂಖ್ಯಾತ ಗೂಂಡಗಳನ್ನು ಎನ್‌ಕೌಂಟರ್ ಮಾಡಬೇಕು: ಶಾಸಕ ರೇಣುಕಾಚಾರ್ಯ
ಅವರ ಭಾವನೆಗಳು ಹೇಗೆ ಇದ್ದಾವೆಯೋ ಅಷ್ಟೇ ಗಂಭೀರವಾಗಿಯೂ ವಿಚಾರ ಇದೆ. ನಾವು ರಾಜ್ಯ ಸರ್ಕಾರ ನಡೆಸುವವರು. ನಾವೆಲ್ಲಾ ಹಾಗೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಆಗುವುದಿಲ್ಲ. ನಮಗೂ ಸಹ ಭಾವನೆ ಇಲ್ಲ ಅಂತಾ ಯಾರೂ ಅಂದುಕೊಳ್ಳಬಾರದು. ಸರ್ಕಾರದ ಅಂಗವಾಗಿ ನಾವು ತೀವ್ರವಾಗಿ ಭಾವನೆ ತೋರಿಸಿಕೊಳ್ಳಲು ಆಗಲ್ಲ. ಯಾರೇ ಹತ್ಯೆ ಮಾಡಿದ್ದರೂ ಅಂತಹವರನ್ನು ಶಿಕ್ಷೆಗೆ ಒಳಪಡಿಸುತ್ತೇನೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.