ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದಂದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಅಭಿಮಾನಿಗಳು 'ಮುಂದಿನ ಸಿಎಂ' ಎಂದು ಬ್ಯಾನರ್ ಹಾಕಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಇದು ಕಾರ್ಯಕರ್ತರ ಅಭಿಮಾನ, ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಜಾಣ್ಮೆಯಿಂದ ಉತ್ತರಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಚರ್ಚೆಯ ಕುರಿತ ವಿಷಯ ಬೂದಿ ಮುಚ್ಚಿದ ಕೆಂಡದಂತಾಗಿದೆ. ಎರಡೂವರೆ ವರ್ಷಗಳ ನಂತರ ಡಿ.ಕೆ.ಶಿವಕುಮಾರ್​ ಅವರಿಗೆ ಸಿಎಂ ಖುರ್ಚಿ ಬಿಟ್ಟುಕೊಡುತ್ತೇವೆ ಎಂದಿದ್ದ ಸಿದ್ದರಾಮಯ್ಯನವರು ಈಗ ಉಲ್ಟಾ ಹೊಡೆದಿರುವುದು, ಹಾಗೂ ಆನಂತರ ಕೆಲವು ತಿಂಗಳುಗಳಿಂದ ರಾಜಕೀಯದಲ್ಲಿ ಆಗುತ್ತಿರುವ ಕೋಲಾಹಲಗಳು ತಿಳಿದ್ದದ್ದೇ. ಏನಿಲ್ಲ, ಏನಿಲ್ಲ ನಮ್ಮ ನಡುವೆ ಏನಿಲ್ಲ, ಎಲ್ಲವೂ ಚೆನ್ನಾಗಿದೆ ಎಂದು ಡಿ.ಕೆ.ಶಿವಕುಮಾರ್​ ಅವರು ಮಾಧ್ಯಮಗಳ ಮುಂದೆ ಹೇಳುತ್ತಾ ಬಂದಿದ್ದಾರೆ. ಆದರೆ ಅವರ ಅಭಿಮಾನಿಗಳು ಡಿಕೆಶಿ ಅವರು ಯಾವಾಗ ಸಿಎಂ ಆಗ್ತಾರೆ ಎಂದು ಕಾದು ಕುಳಿತಿದ್ದಾರೆ. ಆದರೆ ಈ ವಿಷ್ಯ ಬಂದಾಗೆಲಲ್ಲಾ ಕಾಂಗ್ರೆಸ್ಸಿಗರದ್ದು ಒಂದೇ ಉತ್ತರ, ಅದು ಹೈಕಮಾಂಡ್​ ಎನ್ನುವುದು!

Add Asianetnews Kannada as a Preferred SourcegooglePreferred

ಮುಂದಿನ ಸಿಎಂ ಡಿಕೆಶಿ

ಅದರ ನಡುವೆಯೇ ಇದೀಗ ಕುತೂಹಲದ ಘಟನೆಯೊಂದು ನಡೆದಿದೆ. ನಿನ್ನೆ ಅರ್ಥಾತ್​ ಮೇ 15ರಂದು ಶಿವಕುಮಾರ್​ ಅವರ ಹುಟ್ಟುಹಬ್ಬ. ಈ ದಿನದಂದು ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿರುವ ನಡುವೆಯೇ, ಒಂದು ದಿಢೀರ್​ ಬೆಳವಣಿಗೆಯೂ ನಡೆದಿದೆ. ಅದೇನೆಂದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ (Mrinal Hebbalkar) ಅವರ ಅಭಿಮಾನಿಗಳು ಬೆಳಗಾವಿಯಲ್ಲಿ ಹಾಕಿದ್ದ ಬ್ಯಾನರ್​ ಭಾರಿ ಸದ್ದು ಮಾಡುತ್ತಿದೆ. ಮೃಣಾಲ್​ ಅವರೂ ಇರುವ ಈ ಬ್ಯಾನರ್​ನಲ್ಲಿ ಮುಂದಿನ ಸಿಎಂ ಡಿ.ಕೆ.ಶಿವಕುಮಾರ್​ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆಸಲಾಗಿದೆ.

ನಾನು ತಡೆಯೋಕೆ ಆಗತ್ತಾ?

ಈ ಬಗ್ಗೆ ಪತ್ರಕರ್ತರು ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಕೇಳಿದ ಪ್ರಶ್ನೆಗೆ, ಕಾರ್ಯಕರ್ತರ ಅಭಿಮಾನ ತಡೆಯೋಕೆ ಸಾಧ್ಯವಿಲ್ಲ. ಅವರಿಗೆ ನಾವು ಹೇಳಿ ಬ್ಯಾನರ್ ಹಾಕಿಸಲು ಸಾಧ್ಯಾನಾ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಏನೇ ಇದ್ದರೂ ಅವರೇ ನೋಡಿಕೊಳ್ಳುತ್ತಾರೆ. ಆದರೆ ಬ್ಯಾನರ್​ ವಿಷ್ಯದಲ್ಲಿ ನಾನು ಏನೂ ಮಾಡಲು ಆಗುವುದಿಲ್ಲ. ಅದು ಅಭಿಮಾನಿಗಳು ಮಾಡಿದ್ದು, ಅದನ್ನು ತಡೆಯುವುದು ನಮ್ಮಿಂದ ಆಗುವುದಿಲ್ಲ ಎಂದು ಜಾಣ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಯಕರ್ತರು ಅಭಿಮಾನದಿಂದ ಬ್ಯಾನರ್‌ ಹಾಕುತ್ತಾರೆ. ಏನೇ ಇದ್ದರೂ ಕೂಡ ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್​ ಹೇಳಿದ್ದಂತೆ ಕೇಳುತ್ತೇನೆ. ಸಚಿವ ಸಂಪುಟ ಇರಲಿ, ಸಚಿವ ಸಂಪುಟದ ಪುನರ್ ರಚನೆ ಇರಲಿ ಎಲ್ಲವೂ ಹೈಕಮಾಂಡ್‍ಗೆ ಬಿಡಲಾಗಿದೆ ಎಂದರು.