Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರ ಕೊರತೆ: ಈಶ್ವರಪ್ಪ

ಇಡಿ ವಿಚಾರಣೆಗೆ ಕರೆದರೆ ಟೈಂ ಇಲ್ಲ ಎನ್ನುವ ಡಿಕೆಶಿ, ಇವರ ಸಮಯ ನೋಡಿ ಕೋರ್ಟ್‌ ದಿನಾಂಕ ನಿಗದಿಪಡಿಸಬೇಕೇ? ಎಂದ ಈಶ್ವರಪ್ಪ

Lack of Capable Leaders in Congress Says KS Eshwarappa grg
Author
First Published Oct 9, 2022, 3:00 AM IST | Last Updated Oct 9, 2022, 3:00 AM IST

ಶಿವಮೊಗ್ಗ(ಅ.09):  ಹಿಂದೆಲ್ಲ ಕಾಂಗೆಸ್‌ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ನಾಯಕರು ಕರೆ ನೀಡಿದರೆ ಸಾಕಿತ್ತು, ಲಕ್ಷಾಂತರ ಜನ ಸೇರುತ್ತಿದ್ದರು. ಆದರೆ, ಇವತ್ತು ಕೇವಲ ಐದು ಸಾವಿರ ಜನ ಸೇರಿಸಲು ಮಾಜಿ ಸಚಿವರಿಗೆ ನೋಟಿಸ್‌ ನೀಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್‌ಟ್ರಸ್ಟ್‌ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆಲ್ಲ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷದಿಂದ ‘ಬಿ’ ಫಾರಂ ಸಿಕ್ಕರೇ ಮುಗಿಯಿತು, ಅವರು ಚುನಾವಣೆಯಲ್ಲಿ ಗೆದ್ದಂತೆ ಎಂಬಂತಿತ್ತು. ಇನ್ನು ಕಾಂಗ್ರೆಸ್‌ ಎಂದರೇ ಸಾಕು ಲಕ್ಷಾಂತರ ಜನ ಸೇರುತ್ತಿದ್ದ ಜಾಗದಲ್ಲಿ ಈಗ ಜನರನ್ನು ಸೇರಿಸಲು ಬಿರಿಯಾನಿ, ಹಣ, ಮದ್ಯವನ್ನು ಹಂಚಿ ಒಟ್ಟಿನಲ್ಲಿ ಜನ ಸೇರಿಸಿ ಎಂದು ಆಜ್ಞೆ ಮಾಡುತ್ತಿರುವುದು ನೋಡಿದರೆ ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರ ಕೊರತೆ ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.

BHARAT JODO YATRA: 'ಕಾಂಗ್ರೆಸ್‌ಗೆ ದೊರೆತ ಜನಬೆಂಬಲ ಬಿಜೆಪಿ ಸಹಿಸುತ್ತಿಲ್ಲ'

ಇಡೀ ದೇಶದಲ್ಲಿ ಕಾಂಗ್ರೆಸ್‌ ನೆಲ ಕಚ್ಚುತ್ತಿದೆ. ಆದರೂ, ಈ ಕಾಂಗ್ರೆಸಿಗರು ತಮ್ಮನ್ನು ತಿದ್ದಿಕೊಳ್ಳುತ್ತಿಲ್ಲ. ಇಡಿ ವಿಚಾರಣೆಗೆ ಕರೆದರೆ ಡಿ.ಕೆ.ಶಿವಕುಮಾರ್‌ ಸಮಯವಿಲ್ಲ ಎನ್ನುತ್ತಾರೆ. ಈ ನೆಲದ ಕಾನೂನಿಗೆ ಇಂತಹವರು ಹೇಗೆ ಗೌರವ ಕೊಡುತ್ತಾರೆ? ನ್ಯಾಯಾಲಯಗಳು ಇವರ ಸಮಯವನ್ನು ನೋಡಿ ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕೇ ಎಂದು ಕುಟುಕಿದರು.

ಡಿಕೆಶಿ ತಿಹಾರ್‌ ಜೈಲಿಗೆ ಹೋಗಿ ಬಂದಿದ್ದಾರೆ. ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರು ಪರಪ್ಪನ ಅಗ್ರಹಾರದಲ್ಲಿ ಇದ್ದು ಬಂದಿದ್ದಾರೆ. ಇಂತಹವರು ಇಂದು ಕಾಂಗ್ರೆಸ್‌ ನಾಯಕರು. ಡಿಕೆಶಿ ಮನೆಗೆ ದಾಳಿ ಮಾಡಿದಾಗ ನೋಟಿನ ಕಂತೆ ಸಿಕ್ಕಿದೆ. ದಾಖಲೆಗಳು ಸಿಕ್ಕಿವೆ. ಕಳ್ಳನನ್ನು ಕಳ್ಳ ಎನ್ನದೆ ಇನ್ನೇನು ಅನ್ನಬೇಕು? ದಾಖಲೆ ಸಿಕ್ಕ ಬಳಿಕವೂ ರೇಡ್‌ ಮಾಡದೆ ಇನ್ನೇನು ಮಾಡಬೇಕು? ಅಕ್ರಮ ಚಟುವಟಿಕೆಗಳನ್ನು ನೋಡಿಕೊಂಡು ಸುಮ್ಮನೆ ಇರಬೇಕಾ? ಸುಮ್ಮನಿದ್ದರೆ ತಪ್ಪು ಸಂದೇಶ ರವಾನೆ ಆಗುವುದಿಲ್ಲವೇ ಎಂದರು.

ಗೂಂಡಾಗಳನ್ನು ಗೂಂಡಾಗಳು ಎನ್ನದೇ ಇನ್ನೇನೂ ಎನ್ನಬೇಕು?:

ಜಗತ್ತಿನಲ್ಲಿ ಇಂದು ಧರ್ಮ ಸೇರಿದಂತೆ ಸಣ್ಣ ಸಣ್ಣ ವಿಚಾರಕ್ಕೆ ದೊಂಬಿ, ಕೊಲೆ, ಅತ್ಯಾಚಾರ ನಡೆಯುತ್ತಿರುವುದು ತುಂಬಾ ನೋವು ತರುತ್ತಿದೆ. ಪ್ರಪಂಚದ ಆಗುಹೋಗುಗಳನ್ನು ಗಮನಿಸಿದಾಗ ಭಾರತ ಬಿಟ್ಟರೆ ನೈತಿಕತೆಗೆ ಬೇರೆಲ್ಲೂ ಬೆಲೆ ಇಲ್ಲವೇನೋ ಎನಿಸುತ್ತಿದೆ. ಒಂದೊಂದು ದೇಶದಲ್ಲಿ ಒಂದೊಂದು ಧರ್ಮವಿರುತ್ತದೆ. ಧರ್ಮದ ಕಾರಣಕ್ಕೆ ಅಶಾಂತಿ ಸೃಷ್ಟಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಎಲ್ಲ ಮುಸ್ಲಿಂರನ್ನು ನಾನು ಗೂಂಡಾಗಳು ಎನ್ನುವುದಿಲ್ಲ. ಆದರೆ, ರಸ್ತೆಯಲ್ಲಿ ಹಿಂದೂ ಯುವಕರನ್ನು ಕಗ್ಗೊಲೆ ಮಾಡುತ್ತಿದ್ದಾರಲ್ಲ, ಅವರನ್ನು ಗೂಂಡಾಗಳು ಎನ್ನದೇ ಇನ್ನೇನು ಎನ್ನಬೇಕು ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ 22 ಹಿಂದು ಯುವಕರನ್ನು ಮುಸ್ಲಿಂ ಗೂಂಡು ಕೊಲೆ ಮಾಡಿದ್ದಾರೆ. ಆದರೆ, ಕ್ರಿಯೆಗೆ ಪ್ರತಿಕ್ರಿಯೆಯಾಗಿ ನಡೆದ ಘಟನೆಯನ್ನು ಹೊರತುಪಡಿಸಿ ಧರ್ಮದ ಕಾರಣಕ್ಕೆ ಹಿಂದೂ ಯುವಕರು ಯಾವ ಮುಸ್ಲಿಂ ಯುವಕರನ್ನು ಕೊಂದಿಲ್ಲ. ಹೀಗಾಗಿ ಹಿಂದೂಗಳಲ್ಲಿ ಗೂಂಡಾಗಳೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುಲಶಾಸ್ತ್ರ ಆಧಾರ ಮೇಲೆ ಮೀಸಲಾತಿ:

ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಅದೇ ರೀತಿ ಇತರೆ ಜಾತಿಯವರು ಕೂಡ ನಮಗೆ ಮೀಸಲು ಬೇಕೆಂದು ಕೇಳುತ್ತಿದ್ದಾರೆ. ಯಾರು ಮೀಸಲು ಬೇಕು ಎನ್ನುತ್ತಾರೋ ಅವರ ಜಾತಿಯನ್ನು ಕುಲಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ. ಅದರ ವರದಿ ಬಂದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.

ಸ್ಮಾರ್ಟ್‌ಸಿಟಿ ಕಾಮಗಾರಿ ಲೋಪ ವಿರುದ್ಧ ಕ್ರಮ:

ನಗರದಲ್ಲಿ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡ ಪ್ರದೇಶದಲ್ಲಿ ಯಾವುದಾದರೂ ಸಮಸ್ಯೆ ಇಲ್ಲ. ಒಂದು ಪಕ್ಷ ಇದ್ದರೆ ಗಮನಕ್ಕೆ ತನ್ನಿ, ಗುತ್ತಿಗೆದಾರರಿಂದ ಸರಿಪಡಿಸಲಾಗುವುದು. ಯಾರಿಗೂ ಇನ್ನು ಪೂರ್ಣ ಹಣ ನೀಡಿಲ್ಲ. ಆದರೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕೆಲ ಸಮಸ್ಯೆ ಇದೆ. ಇದರ ಬಗ್ಗೆ ಗಮನ ಹರಿಸಲಾಗಿದೆ ಎಂದು ಹೇಳಿದರು. ಸಂವಾದದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌ ಮಾತನಾಡಿದರು. ಕಾರ್ಯದರ್ಶಿ ಗೋ.ವ. ಮೋಹನ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವಾಧ್ಯಕ್ಷ ಎಸ್‌. ಚಂದ್ರಕಾಂತ್‌, ಟ್ರಸ್ಟ್‌ ಕಾರ್ಯದರ್ಶಿ ನಾಗರಾಜ್‌ ನೇರಿಗೆ ಇದ್ದರು.

ಸಚಿವ ಸ್ಥಾನ ವರಿಷ್ಠರಿಂದ ತೀರ್ಮಾನ: ಶಾಸಕ

ನನಗೆ ಸಚಿವ ಸ್ಥಾನ ನೀಡುವ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ನಾನು ನನ್ನ ಮೇಲಿದ್ದ ಆರೋಪದಿಂದ ಮುಕ್ತನಾಗಿರುವಾಗ ಸಹಜವಾಗಿಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಇನ್ನೂ ಸಿಕ್ಕಿಲ್ಲ ಎಂಬ ಬಗ್ಗೆ ಬೇಸರ ಇರುವುದು ಸಹಜವಾದರೂ, ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ನಾನು ಪಕ್ಷದ ಶಿಸ್ತನ ಸಿಪಾಯಿ ಎಂದು ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಹೇಳಿದರು.

ಈ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಜಾಜ್‌ರ್‍ ಅವರು ಗೃಹ ಸಚಿವರಾಗಿದ್ದ ಸಂದರ್ಭ ಪೊಲೀಸ್‌ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಆಗ ಅವರು ರಾಜಿನಾಮೆ ನೀಡಬೇಕು ಎಂದು ನಾನೇ ಆಗ್ರಹಿಸಿದ್ದೆ, ಅದರಂತೆ ಅವರು ರಾಜೀನಾಮೆ ನೀಡಿದ್ದರು. ನಂತರ ಪ್ರಕರಣದಲ್ಲಿ ಅವರು ನಿರ್ದೋಷಿಯಾದಾಗ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಯಿತು. ನಾನೂ ಸಚಿವನಾಗಿದ್ದಾಗ ಆರೋಪ ಕೇಳಿ ಬಂದಾಗ ತಕ್ಷಣ ನಾನೂ ರಾಜಿನಾಮೆ ನೀಡಿದೆ. ಈಗ ನನಗೂ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಕ್ಲೀನ್‌ಚೀಟ್‌ ಸಿಕ್ಕಿದೆ. ನನಗೆ ಮತ್ತೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಆದರೆ, ನನಗೆ ಸಚಿವ ಸ್ಥಾನ ನೀಡುವುದು ಬಿಡುವುದು ಪಕ್ಷದ ಹಿರಿಯರಿಗೆ ಬಿಟ್ಟಿದು. ನಾನೂ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಯಾವುದೇ ಇಲಾಖೆ ನೀಡಿದರೂ ನಾನು ನಿಭಾಯಿಸಲು ಸಿದ್ದ ಎಂದು ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

‘ಕಾಂತಾರ’ ಸಿನಿಮಾ ಪೋಸ್ಟರ್‌ ಮೇಲೆ ಅವಹೇಳನ ಬರಹ: ಜನರ ಆಕ್ರೋಶ

ಮಂತ್ರಿಮಂಡಲದಲ್ಲಿ ಸಚಿವ ಸ್ಥಾನಗಳನ್ನು ಖಾಲಿ ಮಾಡುವುದು ಸರಿಯಲ್ಲ. ಚುನಾವಣೆ ಹತ್ತಿರದಲ್ಲಿದೆ. ಹೀಗಾಗಿ ಇದನ್ನು ಭರ್ತಿ ಮಾಡುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ಆದರೆ ಈ ಬಗ್ಗೆ ಮುಖ್ಯಮಂತ್ರಿಗಳು, ಪಕ್ಷದ ವರಿಷ್ಟರು ತೀರ್ಮಾನಿಸಬೇಕು ಎಂದರು.

ಭಾರತ ಹಿಂದೂ ಪ್ರಧಾನ ರಾಷ್ಟ್ರವಾಗಿದ್ದು, ಇಲ್ಲಿ, ಜಾತಿ, ವರ್ಣಬೇಧ ಬರಬಾರದು ಎನ್ನುವುದು ಆರ್‌ಎಸ್‌ಎಸ್‌ನ ಮೂಲ ಉದ್ದೇಶವೂ ಆಗಿದೆ. ಹಿಂದೂಗಳ ರಕ್ಷಣೆ, ಭಾರತೀಯ ಸಂಸ್ಕಾರ ಉಳಿಸಲು ಆರ್‌ಎಸ್‌ಎಸ್‌ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. 380 ಕ್ಷೇತ್ರದಲ್ಲಿ ಆರ್‌ಎಸ್‌ಎಸ್‌ ಕೆಲಸ ಮಾಡುತ್ತಿದೆ ಅಂತ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios