ಬೆಂಗಳೂರು(ನ.02): ನಾನು ಕಳೆದುಕೊಂಡಿರುವ ಅರಶಿನ-ಕುಂಕುಮವನ್ನು ಮತದ ರೂಪದಲ್ಲಿ ನೀಡಿ ಆಶೀರ್ವದಿಸಿ. ನನ್ನ ಉಳಿದ ಬದುಕನ್ನು ನಿಮ್ಮ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ರಾಜರಾಜೇಶ್ವರಿ ನಗರ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

"

ಅಲ್ಲದೆ, ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಆರೋಪಗಳಿಗೆ ಭಾವುಕವಾಗಿಯೇ ಪ್ರತಿಕ್ರಿಯೆ ನೀಡಿರುವ ಕುಸುಮಾ ಅವರು, ಗಂಡ ಸತ್ತವಳಿಗೇಕೆ ರಾಜಕೀಯ ಎಂದು ಹೇಳಿದ್ದೀರಲ್ಲಾ ಮುನಿರತ್ನ ಅಣ್ಣ, ನಿಮ್ಮ ಮನೆ ಮಕ್ಕಳಿಗೆ ಈ ಸ್ಥಿತಿ ಬಂದಿದ್ದರೂ ಹೀಗೇ ಹೀಯಾಳಿಸುತ್ತಿದ್ದಿರಾ? ಇಷ್ಟು ಚುಚ್ಚು ಮಾತುಗಳನ್ನಾಡಲು ನಾನು ನಿಮಗೆ ಮಾಡಿದ್ದ ದ್ರೋಹವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಹೆಸರು ಚುನಾವಣಾ ಕಣದ ಮುನ್ನೆಲೆಗೆ ಬಂದ ಕ್ಷಣದಿಂದಲೂ ನನ್ನ ಮೇಲೆ ನಿರಂತರ ವಾಗ್ದಾಳಿ, ಆರೋಪಗಳು ನಡೆಯುತ್ತಲೇ ಬಂದಿವೆ. ಗಂಡನ ಕಳೆದುಕೊಂಡವಳಿಗೆ ರಾಜಕೀಯ ಏಕೆ ಎಂದರು. ಚುನಾವಣೆಯಲ್ಲಿ ನನ್ನ ಪತಿ ಡಿ.ಕೆ.ರವಿ ಅವರ ಹೆಸರು ಬಳಸಬಾರದು, ಆ ಯೋಗ್ಯತೆ ಇಲ್ಲ ಎಂದರು. ಇದರಿಂದ ನನಗೆ ಎಷ್ಟೇ ನೋವಾದರೂ ಪ್ರಚಾರದ ವೇಳೆ ಕ್ಷೇತ್ರದಲ್ಲಿ ಜನರು ನನ್ನ ಬಗ್ಗೆ ತೋರಿದ ಪ್ರೀತಿ, ವಿಶ್ವಾಸ, ನುಡಿದ ಧೈರ್ಯದ ನುಡಿಗಳು ನನ್ನನು ಗಟ್ಟಿಗೊಳಿಸಿವೆ. ಕಳೆದ 20 ದಿನಗಳಲ್ಲಿ ನನ್ನ ಜೀವನದಲ್ಲಿ ಆಗಿರುವ ಬದಲಾವಣೆಗಳನ್ನು ನೀವೆಲ್ಲರೂ ಗಮನಿಸಿದ್ದೀರಿ.ಅರಿಶಿಣ ಕುಂಕುಮ ರೂಪದಲ್ಲಿ ಕಳೆದುಕೊಂಡ ನನ್ನ ಸೌಭಾಗ್ಯವನ್ನು ಜನ ಸೇವೆಯಲ್ಲಿ ಮರು ಸ್ಥಾಪಿಸುವ ಛಲ ಮೂಡಿದೆ ಎಂದರು.

ಮೋಸದ ವಿರುದ್ಧ ಜನ ಮತ ಹಾಕುತ್ತಾರೆ: ಡಿ.ಕೆ.ಸುರೇಶ್‌

ನಿಂದನೆ, ಅಪನಿಂದನೆಗಳಿಂದ ನೊಂದಿರುವ ನಿಮ್ಮ ಮನೆ ಮಗಳು ಕಳೆದುಕೊಂಡಿರುವ ಅರಿಶಿಣ ಕುಂಕುಮವನ್ನು ಮತದ ರೂಪದಲ್ಲಿ ನೀಡಿ ಆಶೀರ್ವದಿಸಿ. ನನ್ನ ಜೀವನವನ್ನು ನಿಮ್ಮ ಸೇವೆಗೆ ಮೀಸಲಿಡುವೆ ಎಂದು ಕುಸುಮಾ ಅವರು ಭಾವುಕರಾಗಿಯೇ ನುಡಿದರು.

ನಾ ಮಾಡಿದ ಅನ್ಯಾಯವೇನು ಮುನಿರತ್ನ ಅಣ್ಣ: ಇದೇ ವೇಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದ ಕುಸುಮಾ ಅವರು, ನನ್ನ ಮೇಲೆ ಸುಳ್ಳು ಎಫ್‌ಐಆರ್‌ ಹಾಕ್ತಿಸ್ತಿರಿ. ಪ್ರಚಾರಕ್ಕೆ ಅಡ್ಡಿಪಡಿಸಿದ್ದೀರಿ. ನಾನು ಪ್ರಚಾರಕ್ಕೆ ಹೋದ ಕೆಲವು ಮನೆಗಳಲ್ಲಿ, ನೀವು ನನ್ನ ಬಗ್ಗೆ ಆಡಿರುವ ಮಾತುಗಳು, ಬಳಸಿರುವ ಭಾಷೆ ಯಾವುದೇ ಹೆಣ್ಣು ಕೇಳುವಂಥದ್ದಲ್ಲ. ಅಂಥ ಚುಚ್ಚು ಮಾತುಗಳನ್ನು ಆಡಿದ್ದೀರಿ. ನಾನು ನಿಮಗೇನು ಅನ್ಯಾಯ ಮಾಡಿದ್ದೇ ಮುನಿರತ್ನ ಅಣ್ಣನವರೇ? ಎಂದು ಪ್ರಶ್ನಿಸಿದರು.

ಗಂಡ ಸತ್ತವಳಿಗೇಕೆ ರಾಜಕೀಯ ಅಂತಾ ಕೇಳಿದ್ದೀರಿ. ಗಂಡನನ್ನು ತಿಂದವಳಿಗೆ ಯಾಕೆ ರಾಜಕೀಯ ಅಂತಾ ಹೇಳಿದ್ದೀರಿ. ಇದು ನಿಮಗೆ ಶೋಭೆ ತರುತ್ತದೆಯೇ? ಮಾಧ್ಯಮಗಳ ಮೂಲಕ ಮುನಿರತ್ನ ಅಣ್ಣನನ್ನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಮರೆಯಬೇಡಿ. ನನಗೆ ಬಂದ ಪರಿಸ್ಥಿತಿ ನಿಮ್ಮ ಮಕ್ಕಳಿಗೆ ಬಂದಿದ್ದರೂ ಹೀಗೇ ನಿಂದಿಸುತ್ತಿದ್ದಿರಾ? ಯಾರ ಮನೆಯ ಮಗಳಾಗಲಿ ಹೆಣ್ಣು ಹೆಣ್ಣಲ್ಲವೇ? ನಾನು ಯಾವ ತಪ್ಪು ಮಾಡಿದ್ದೇನೆ? ಗಂಡ ಸತ್ತ ನಂತರ ಯಾವ ಹೆಣ್ಣು ಬದುಕಬಾರದಾ? ರಾಜಕೀಯಕ್ಕೆ ಬರಬಾರದಾ? ಜನರ ನೋವಿಗೆ ಸ್ಪಂದಿಸಬಾರದಾ? ಸಮಾಜದಲ್ಲಿ ಒಬ್ಬ ಸುಶಿಕ್ಷಿತ ಹೆಣ್ಣಿಗೆ ಇಷ್ಟುಕೆಟ್ಟಪದ ಬಳಸುತ್ತೀರಿ ಎಂದರೆ ಬೇರೆ ಹೆಣ್ಣುಗಳ ಕಥೆ ಏನು? ಅವರನ್ನು ನೀವು ಹೇಗೆ ನಡೆಸಿಕೊಂಡಿರಬೇಡಾ? ಎಂದು ತಮ್ಮ ನೋವಿನ ನುಡಿಗಳನ್ನು ಹೊರಹಾಕಿದರು.

ಕಾಂಗ್ರೆಸ್‌ ಪಕ್ಷದಿಂದ ಒಡೆದು ಆಳುವ ಕೆಲಸ: ಮುನಿರತ್ನ

ನನ್ನ ತಂದೆ, ತಾಯಿಗೆ ಹೊರೆಯಾಗದೆ ನನ್ನ ಕಾಲಿನ ಮೇಲೆ ನಾನೇ ನಿಂತುಕೊಂಡು ಜೀವಿಸುತ್ತಿದ್ದೇನೆ. ಆಗಬಾರದ ವಯಸ್ಸನಲ್ಲೇ ನನಗಾದ ಆಘಾತದಿಂದ ಹೊರಬರಲು ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದು, ಇಲ್ಲಿ ಮಕ್ಕಳಿಗೆ ಪಾಠ ಹೇಳಿ ಬದುಕುತ್ತಿದ್ದೇನೆ. ನನ್ನದೇ ಗುರುತು ಹೊಂದಲು ಹೊರಟಿದ್ದೇನೆ. ನನ್ನ ಅನುಭವ ಏನು ಅಂತಾ ಜನರಿಗೆ ಗೊತ್ತಿದೆ. ನಿಮ್ಮ ಅನುಭವ ಏನು ಎಂದು ಹೇಳಿ ಎಂದು ಕುಸುಮಾ ಸವಾಲು ಹಾಕಿದರು.

ನಾನು ಐದು ವರ್ಷಗಳ ಹಿಂದೆ ಕಳೆದುಕೊಂಡ ಅರಿಶಿನ, ಕುಂಕುಮವನ್ನು ನನ್ನ ಜನ ಉಡಿ ತುಂಬಿ ಕೊಡುತ್ತಾರೆ. ಹೂವು ಮುಡಿಸುತ್ತಾರೆ. ಈ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸುತ್ತಾರೆ. ನನ್ನ ಕ್ಷೇತ್ರ ಹಾಗೂ ಜನರ ಅಭಿವೃದ್ಧಿಗೆ ನಾನು ಅಂದುಕೊಂಡಿರುವುದನ್ನು ಮಾಡೇ ಮಾಡುತ್ತೇನೆ. ನನ್ನ ಜೀವನ ರಾಜಕೀಯ ಹಾಗೂ ಜನರ ಸೇವೆಗೆ ಮುಡಿಪಾಗಿ ಇಡುತ್ತೇನೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಡಿ.ಕೆ ಸುರೇಶ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್‌, ಮಾಜಿ ಸಚಿವ ಹೆಚ್‌.ಎಂ ರೇವಣ್ಣ ಇದ್ದರು.