Asianet Suvarna News Asianet Suvarna News

ಶ್ರೀಗಳ ಸಿನಿಮಾ ಆಕ್ಟಿಂಗ್‌ ಬಗ್ಗೆ ಮಾತನಾಡಿದ ಕುಮಾರಸ್ವಾಮಿ: ಕ್ಷಮೆಯಾಚಿಸಬೇಕು ಎಂದ ಚಲುವರಾಯಸ್ವಾಮಿ

ಆದಿಚುಂಚನಗಿರಿ ಶ್ರೀಗಳಿಂದ ಹೆಚ್ಚು ಅನುಕೂಲ ಪಡೆದುಕೊಂಡಿರುವ  ಎಚ್.ಡಿ. ಕುಮಾರಸ್ವಾಮಿ ಶ್ರೀಗಳ ಬಗ್ಗೆ ತುಂಬಾ ಲಘುವಾಗಿ ಮಾತನಾಡಿದ್ದಾರೆ. ತಮ್ಮ ಹೇಳಿಕೆ ವಾಪಸ್‌ ಪಡೆದುಕೊಂಡು ಕ್ಷಮೆಯಾಚಿಸಬೇಕು.

Kumaraswamy talked about Swamiji movie acting Chaluvarayaswamy said that he should apologize sat
Author
First Published Mar 22, 2023, 7:39 PM IST

ಬೆಂಗಳೂರು (ಮಾ.22): ರಾಜ್ಯದಲ್ಲಿ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಹೆಚ್ಚು ಅನುಕೂಲ ಪಡೆದುಕೊಂಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಶ್ರೀಗಳ ಬಗ್ಗೆ ತುಂಬಾ ಲಘುವಾಗಿ ಮಾತನಾಡಿದ್ದಾರೆ. ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದುಕೊಂಡು ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉರಿಗೌಡ, ನಂಜೇಗೌಡ ವಿಚಾರವಾಗಿ ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಶ್ರೀಗಳ ಬಗ್ಗೆ ತುಂಬಾ ಲಘುವಾಗಿ ಮಾತನಾಡಿದ್ದಾರೆ. ಅತ್ಯಂತ ಕೆಟ್ಟ ಪದ ಉಪಯೋಗಿಸಿ ಮಾತನಾಡಿದ್ದಾರೆ. ನಿರ್ಮಲಾನಂದನಾಥರು ನಮ್ಮ ಸಮುದಾಯದ ಶ್ರೀಗಳು. ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಆದಿಚುಂಚನಗಿರಿ ಮಠದಿಂದ ಹೆಚ್ಚು ಅನುಕೂಲ ಪಡೆದಿದ್ರೆ ಅದು ಕುಮಾರಸ್ವಾಮಿ ಎಂದು ಹೇಳಿದರು.

ಆದಿಚುಂಚನಗರಿ ಶ್ರೀಗಳಿಂದ ಬಿಜೆಪಿ ಒಕ್ಕಲಿಗ ಸಚಿವರಿಗೆ ತರಾಟೆ: ಉರಿಗೌಡ, ನಂಜೇಗೌಡರ ಬಗ್ಗೆ ಚರ್ಚಿಸದಂತೆ ಎಚ್ಚರಿಕೆ

ಶ್ರೀಗಳನ್ನು ಆಕ್ಟಿಂಗ್‌ಗೆ ಕರೆದುಕೊಂಡು ಹೋಗಲಿ: ಉರಿಗೌಡ, ನಂಜೇಗೌಡ ಸಿನಿಮಾ ವಿಚಾರವಾಗಿ ಮುನಿರತ್ನ ವಿರುದ್ದ ಹೇಳಿಕೆ ಕೊಡಬೇಕಿತ್ತು. ಆದರೆ, ಅದನ್ನು ಬಿಟ್ಟು ಆದಿಚುಂಚನಗಿರಿ ಶ್ರೀಗಳನ್ನು ಸಿನಿಮಾ ಮುಹೂರ್ತಕ್ಕಾದರೂ ಕರೆದುಕೊಂಡು ಹೋಗಲಿ, ಆಕ್ಟಿಂಗ್‌ಗೆ ಆದರೂ ಕರೆದುಕೊಂಡು ಹೋಗಲಿ ಎಂದು ಹೇಳಿಕೆ ನೀಡಿರುವುದು ಸರಿಯೇ? ಕುಮಾರಸ್ವಾಮಿ ಕೂಡಲೇ ತಮ್ಮ ಹೇಳಿಕೆ ವಾಪಾಸ್ ಪಡೆಯಬೇಕು. ಜೊತೆಗೆ, ತಮ್ಮ ಹೇಳಿಕೆ ಕುರಿತಂತೆ ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಸಿದ್ದರಾಮಯ್ಯ ಅವರ ನಿವಾಸದಲ್ಲಿ ಆಗ್ರಹಿಸಿದರು.

ದೇಜಗೌ ಪುಸ್ತಕದ ರೆಫೆರೆನ್ಸ್‌ ನೋಡಿಲ್ಲ: ಮಂಡ್ಯದ ಸಾಹಿತಿ ದೇಜಗೌ ಅವರು ಯಾವುದೇ ಪುಸ್ತಕ ಬಿಡುಗಡೆಗೂ ಮುನ್ನ ಮುನ್ನುಡಿ ಬರೆಸಿಕೊಳ್ಳುತ್ತಾರೆ. ನಾನು ಆ ಪುಸ್ತಕದ ರೆಫೆರೆನ್ಸ್ ನೋಡಿಲ್ಲ, ಯಾವ ರೀತಿ ಬರೆದಿದ್ದಾರೋ ಗೊತ್ತಿಲ್ಲ. ಬಿಜೆಪಿಗೆ ನಾಯಕತ್ವದ ಕೊರತೆಯಿಂದ ಈ ರೀತಿ ಆಗುತ್ತಿದೆ. ಏನಾದರೂ ಒಂದು ಕಿತಾಪತಿ ಮಾಡೋದು ಬಿಟ್ರೆ ಬೇರೆ ಏನಿಲ್ಲ. ಯಾವುದೇ ವಿಚಾರ ಚರ್ಚೆ ಮಾಡುವಾಗ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ತಿಳಿದುಕೊಂಡಿರಬೇಕು. ನಮ್ಮದು ಒಕ್ಕಲಿಗ ದೊಡ್ಡ ಸಮಾಜ, ಈ ಬಗ್ಗೆ ಅವರೇ ಫೇಸ್ ಮಾಡಲಿ ನೋಡೋಣ ಎಂದು ಹೇಳಿದರು.

ನಾಳೆ ಅಥವಾ ನಾಡಿದ್ದು ಕಾಂಗ್ರೆಸ್ ಪಟ್ಟಿ ಬಿಡುಗಡೆ: ನಂತರ ಮಾಧ್ಯಮಗಳೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾಳೆ ಅಥವಾ ನಾಡಿದ್ದು ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡುತ್ತೇವೆ. ದೆಹಲಿಗೆ ಹೋಗಿ ಹೈ ಕಮಾಂಡ್ ಭೇಟಿ ಮಾಡುತ್ತಿಲ್ಲ. ಒಂದು ವೇಳೆ ನಾನು ದೆಹಲಿಗೆ ಹೋಗುವುದಾದರೆ ಖಂಡಿತವಾಗಿಯೂ ಹೇಳುತ್ತೇನೆ ಎಂದು ತಿಳಿಸಿದರು.

ಟಿಕೆಟ್ ಘೋಷಣೆಗೂ ಮುನ್ನ ಕಾಲಭೈರವೇಶ್ವರನ ಮೊರೆ ಹೋದ ಡಿಕೆ ಶಿವಕುಮಾರ

ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದ ಸಿ.ಟಿ ರವಿ:  ಉರಿಗೌಡ ನಂಜೇಗೌಡ ಸಿನಿಮಾ ಮಾಡದಂತೆ ಮುನಿರತ್ನ ಅವರಿಗೆ ಆದಿಚುಂಚನಗಿರಿ ಶ್ರೀಗಳು ಸೂಚನೆ ನೀಡಿದ್ದರು. ಆದರೆ, ಈ ಕುರಿತು ಎಚ್.ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ಮಾತನಾಡುವಾಗ ಸಿನಿಮಾದ ಮುಹೂರ್ತಕ್ಕಾದರೂ ಅಥವಾ ಆಕ್ಟಿಂಗ್‌ಗೆ ಆದರೂ ಶ್ರೀಗಳನ್ನು ಕರೆದುಕೊಂಡು ಹೋಗಲಿ ಎನ್ನುವ ಮಾತು ಹೇಳಿದ್ದರು. ಈ ಹೇಳಿಕೆ ಸಂಬಂಧಿಸದಂತೆ ಕುಮಾರಸ್ವಾಮಿ ಕೂಡಲೇ ಶ್ರೀಗಳನ್ನು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದ್ದರು.

ಕೂಲಿ ಆಳಾಗಿ ಸೇರಿಕೊಂಡು ಅಧಿಕಾರ ಕಬಳಿಸಿದರು: ಸ್ವಾಮೀಜಿ ಅವರನ್ನ ಅಪಮಾನ ಮಾಡಿರೋದು, ಅಗೌರವವಾಗಿ ನಡೆದುಕೊಂಡಿರೋದು ಕುಮಾರಸ್ವಾಮಿ ಆಗಿದ್ದು, ಕೂಡಲೇ ಕ್ಷಮೆ ಯಾಚಿಸಬೇಕು. ವಾಸ್ತವವಾಗಿ ಟಿಪ್ಪು ಸುಲ್ತಾನ್ ಸ್ವಾತಂತ್ರ ಹೋರಾಟಗಾರ ಅಲ್ಲ. ಮೈಸೂರು ಸಂಸ್ಥಾನಕ್ಕೆ ಮೋಸ ಮಾಡಿದವನು ಅಂತ ಬಿಂಬಿಸಬೇಕಿತ್ತು. ವ್ಯಾಪಾರದ ನೆಪದಲ್ಲಿ ಬಂದಿದ್ದು ಅಂತ ಬ್ರಿಟಿಷರನ್ನ ಚಿತ್ರೀಕರಿಸಿದ್ದೆವು. ಕೂಲಿ ಹಾಗೆ ಬಂದವನು ಮೋಸದಿಂದ ಮೈಸೂರು ಸಂಸ್ಥಾನವನ್ನೆ ಕಬಳಿಸಿದ ಅಂತ ನಾವು ಎಲ್ಲಿ ಹೇಳಿದ್ದೀವಿ. ಹೈದರಾಲಿ,‌ ಮೈಸೂರಿಗೆ ಕೂಲಿ ಆಳಾಗಿ ಸೆರ್ಕೊಂಡ, ಮಹಾರಾಜರಿಗೆ ನಿಷ್ಠವಾದರನ್ನ ಮೋಸದಿಂದ ಕೊಂದ‌. ಮಹಾರಾಣಿ ಲಕ್ಷ್ಮಮ್ಮಣ್ಣಿ ಸೆರೆಮನೆಯಲ್ಲಿಟ್ಟ, ಮೋಸದಿಂದ ಅಧಿಕಾರವನ್ನು ಕಬಳಿಸಿದನು. ಅವರನ್ನು ಕೊಂದ ಉರಿಗೌಡ, ನಂಜೇಗೌಡರ ಬಗ್ಗೆ ವಾಸ್ತವಿಕ ಸತ್ಯವನ್ನು ಸ್ವಾಮೀಜಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಸಿಟಿ ರವಿ ಹೇಳಿದ್ದರು.

Follow Us:
Download App:
  • android
  • ios