ಕರಾವಳಿಯಲ್ಲಿ ಹತ್ಯೆಯಾದ ಯುವಕರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಸಿಎಂ ತಾರತಮ್ಯ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಬಂದಿವೆ.
ವರದಿ- ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ
ಹಾವೇರಿ, (ಆಗಸ್ಟ್,01): ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ತಪ್ಪಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಇಡೀ ರಾಜ್ಯದ ಮುಖ್ಯಮಂತ್ರಿ. ಅವರು ಕೇವಲ ಯಾವುದೇ ಒಂದು ಸಮಾಜದ ಮುಖ್ಯಮಂತ್ರಿ ಅಲ್ಲ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿಯಲ್ಲಿ ಇಂದು(ಸೋಮವಾರ) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೆಂದು ಜನ ಬಯಸುತ್ತಿದ್ದಾರೆ. ಈ ಸರ್ಕಾರದ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸೇರಿ ಎಲ್ಲಾ ವಿಚಾರದಲ್ಲೂ ಜನ ಬೇಸತ್ತಿದ್ದಾರೆ. ಪುತ್ತೂರು ಹಾಗೂ ಸುರತ್ಕಲ್ ಘಟನೆಗಳಿಂದ ಜನ ದಿಗ್ಭ್ರಾಂತರಾಗಿದ್ದಾರೆ.ಈ ರಾಜ್ಯದಲ್ಲಿ ಸರ್ಕಾರ ಜೀವಂತ ಇದೆಯಾ? ಎಂದು ಆಕ್ರೋಶ ಹೊರ ಹಾಕಿದರು.
ಹತ್ಯೆಯಾದ ಮೂರೂ ಯುವಕರ ಮನೆಗೆ ಎಚ್‌ಡಿಕೆ ಭೇಟಿ, ಸೂಕ್ತ ತನಿಖೆಗೆ ಸರ್ಕಾರಕ್ಕೆ ಒತ್ತಾಯ
ಸಿಎಂ ಬಸವರಾಜ ಬೊಮ್ಮಾಯಿಯವರು ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದಾರೆ. ಎಲ್ಲಾ ಜನರಿಗೆ ಸಹಕಾರ, ರಕ್ಷಣೆ ಕೊಡ್ತೀನಿ ಅಂತ ಪ್ರಮಾಣ ಮಾಡಿದ್ದಾರೆ. ಆದರೆ ಒಬ್ರ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಉಳಿದ ಇಬ್ಬರು ಹತ್ಯೆಯಾದ ಯುವಕರ ಮನೆಗಳಿಗೆ ಹೋಗಿಲ್ಲ,ಪರಿಹಾರ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಪ್ರವೀಣ್ ಹತ್ಯೆ ಕೇಸ್ ಎನ್‌ಐಎಗೆ ಕೊಡ್ತೀರಿ. ನಮ್ಮ ಪೊಲೀಸರಿಗೆ ಈ ಪ್ರಕರಣ ಭೇದಿಸೋ ಶಕ್ತಿ ಇಲ್ಲವಾ? ಇದು ನರ ಸತ್ತ ಸರ್ಕಾರ ಎಂದು ಸಲೀಂ ಅಹ್ಮದ್ ಕಿಡಿಕಾರಿರು.
ಈ ಎಲ್ಲಾ ವಿಚಾರಗಳಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಲಿ.ನೀವು ಎಲ್ಲಾ ಜನರ ಮುಖ್ಯಮಂತ್ರಿ. ಒಂದೇ ಸಮಾಜದ ಮುಖ್ಯಮಂತ್ರಿ ಅಲ್ಲ.ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ, ಈ ಹೆಸರನ್ನು ಹಾಳು ಮಾಡಬೇಡಿ.ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದರು.
ಸಮಾಜ ಒಡೆಯುವ ಸಂಘಟನೆಗಳನ್ನು ಬ್ಯಾನ್ ಮಾಡಿ
ಯಾವುದೇ ಪಕ್ಷಪಾತ ಮಾಡದೇ ಸಮಾಜ ಒಡೆಯುವ ಸಂಘಟನೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತಗೋಳಿ.ಅವರ ಪಕ್ಷದ ಮುಖಂಡರೇ ಹೋಂ ಮಿನಿಸ್ಟರ್ ಮನೆ ಮುಂದೆ ಗಲಾಟೆ ಮಾಡ್ತಾರೆ ಅಂದರೆ ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ನಮ್ಮ ಎನ್ ಎಸ್ ಯು ಐ ನವರು ಪಠ್ಯ ಪುಸ್ತಕ ವಿಚಾರದಲ್ಲಿ ಹೋರಾಟ ಮಾಡಿದರೆ ಅವರನ್ನು ಜೈಲಿಗೆ ಹಾಕಿಸಿದರು.ಆದರೆ ಹೋಂ ಮಿನಿಸ್ಟರ್ ಮನೆ ಮುಂದೆ ಗಲಾಟೆ ಮಾಡಿದವರಿಗೆ ಸ್ಟೇಷನ್ ಬೇಲ್ ಕೊಡಿಸಿದ ಸರ್ಕಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.