*  ಶಿಕ್ಷಕರಾದವರು ಕೃಷಿ ಮಾಡಬಾರದಂತೆ ಕಾನೂನು ಇದೆಯಾ?*  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನೆ*  ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಕೊರತೆ ಕಾಡುತ್ತದೆ 

ಬೀದರ್‌(ಜೂ.19): ಕೇಂದ್ರ ಸಚಿವ ಭಗವಂತ ಖೂಬಾ ರಸಗೊಬ್ಬರ ಕೇಳಿದ ರೈತರಿಗೆ ಅಪಮಾನ ಮಾಡುವ ಮೂಲಕ ಜಿಲ್ಲೆಯ ಮಾನ ಹರಾಜು ಹಾಕಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ದೂರಿದರು. ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಕೊರತೆ ಕಾಡುತ್ತದೆ. ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಜೂ. 2ಕ್ಕೆ ಟ್ವೀಟ್‌ ಮಾಡಿದ್ದೆ. ಇದಕ್ಕೆ ಉತ್ತರವಾಗಿ ಅವರು ಸುದ್ದಿಗೋಷ್ಠಿ ನಡೆಸಿ ಜಿಲ್ಲೆಯಲ್ಲಿ ಗೊಬ್ಬರದ ಕೊರತೆ ಇಲ್ಲ ದಾಸ್ತಾನು ಇದೆ ಎಂದು ಹೇಳಿದ್ದರು.

ಒಂದು ಅಂಕಿ ಅಂಶದ ಪ್ರಕಾರ ಜೂ.17ರವರೆಗೆ ಜಿಲ್ಲೆಗೆ 25 ಸಾವಿರ ಮೆಟ್ರಿಕ್‌ ಟನ್‌ ಗೊಬ್ಬರದ ಬೇಡಿಕೆ ಇತ್ತು. ಆದರೆ ಬಂದಿದ್ದು ಕೇವಲ 12 ಸಾವಿರ ಮೆಟ್ರಿಕ್‌ ಟನ್‌. ಹೀಗೆ ಸರಿಸುಮಾರು ಶೇ. 60ರಷ್ಟು ಗೊಬ್ಬರ ಇನ್ನೂ ಬರಬೇಕಾಗಿದೆ. ಆದರೆ ದಾಸ್ತಾನು ಇದೆ ಎಂದು ಇವರು ಸುಳ್ಳು ಹೇಳಿದ್ದಾರೆ. ಭಾಲ್ಕಿ ತಾಲೂಕಿನಲ್ಲಿ 2 ಸಾವಿರ ಟನ್‌ ಗೊಬ್ಬರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು, ಇದುವರೆಗೆ 1500 ಟನ್‌ ಬಂದಿದೆ. ಇನ್ನು 500 ಟನ್‌ ಗೊಬ್ಬರ ಬರಬೇಕಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸಚಿವ ಖೂಬಾ ವಿರುದ್ಧ ಪಿತೂರಿ: ಗುರುನಾಥ ಕೊಳ್ಳುರ್‌

ಶಿಕ್ಷಕರಾದವರು ಕೃಷಿ ಮಾಡಬಾರದಾ?:

ರಸಗೊಬ್ಬರ ಇಲಾಖೆ ಸಚಿವರಿಗೆ ಗೊಬ್ಬರ ಕುರಿತು ಪ್ರಶ್ನೆ ಮಾಡಿದ ರೈತನಿಗೆ ಹಿಯಾಳಿಸಿ ಅಪಮಾನ ಮಾಡಿದ್ದಾರೆ. ಈ ಅಪಮಾನ ಜಿಲ್ಲೆ, ರಾಜ್ಯ ಅಲ್ಲದೇ ಇಡೀ ದೇಶದ ರೈತರಿಗೆ ಮಾಡಿದಂತಾಗಿದೆ. ಈ ಕುರಿತು ಕೂಡಲೇ ಅವರು ರೈತರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಒಬ್ಬ ಶಿಕ್ಷಕ ಕೃಷಿ ಮಾಡಬಾರದು ಎಂದು ಕಾನೂನು ಇದೇಯಾ ಎಂದು ಖಂಡ್ರೆ ಪ್ರಶ್ನಿಸಿದರು. ಒಬ್ಬ ರೈತನನ್ನು ಅಪಮಾನ ಮಾಡಿ ಬೀದರ್‌ ಜಿಲ್ಲೆಯ ಮಾನ ಹರಾಜು ಹಾಕಿದ್ದಾರೆ. ಜಾಲತಾಣದ ಮೂಲಕ ರೈತನಿಲ್ಲ ಇವನೊಬ್ಬ ಶಿಕ್ಷಕನಾಗಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಇವರು ಶ್ರೀಲಂಕಾದಂತಹ ಸ್ಥಿತಿ ದೇಶದಲ್ಲಿಯೂ ಬರಬೇಕೆಂಬ ಸಂಚು ಹಾಕಿದಂತೆ ಭಾಸವಾಗುತ್ತಿದೆ ಎಂದರು.

ಮಳೆರಾಯ ಬರುವಲ್ಲಿ ವಿಳಂಬವಾಗಿದೆ ಹೀಗಾಗಿ ರೈತರು ಇನ್ನು ಶಾಂತಿಯಿಂದ ಇದ್ದಾರೆ. ಒಂದು ವೇಳೆ ಸಮಯಕ್ಕೆ ಮಳೆ ಬಂದಿದ್ದರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ರಸಗೊಬ್ಬರಕ್ಕಾಗಿ ದಂಗೆಗಳಾಗುತ್ತಿದ್ದವು ಎಂದರು.

ಮುಸ್ಲಿಂ ಸಮುದಾಯ ಅನುಭವ ಮಂಟಪವನ್ನು ವಾಪಸ್ ಕೊಡಬೇಕು: ಆಂದೋಲ ಶ್ರೀ

2022ರಲ್ಲಿ ದೇಶದ ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದವರು ಕೋಟ್ಯಂತರ ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಬಿತ್ತನೆಯ ಸೋಯಾಬಿನ್‌ ಬೀಜ ಪ್ರತಿ ಕ್ವಿಂಟಲ್‌ಗೆ 2000 ರು. ಹೆಚ್ಚಳ ಮಾಡಿದ್ದಾರೆ, ಬೆಂಬಲ ಬೆಲೆಯಲ್ಲಿ ಕ್ವಿಂಟಲ್‌ಗೆ 300 ಹೆಚ್ಚಿಸಿದ್ದಾರೆ, ಇದೇನಾ ಆದಾಯ ಹೆಚ್ಚಳ ಮಾಡುವುದು ಎಂದು ಪ್ರಶ್ನಿಸಿದರು.

ಮಾತೆತ್ತಿದ್ದರೆ ಫಸಲ್‌ ಭೀಮಾ ಯೋಜನೆಯ ಬಗ್ಗೆ ಮಾತಾಡುತ್ತಾರೆ. 2016ರಿಂದ ಇಲ್ಲಿಯವರೆಗೆ ಯಾವುದೇ ನಯಾ ಪೈಸೆ ಖರ್ಚು ಮಾಡದೇ 5 ಖಾಸಗಿ ವಿಮಾ ಕಂಪನಿಗಳು 440 ಕೋಟಿ ಜಿಲ್ಲೆಯ ರೈತರ ಹಣ ಲೂಟಿ ಮಾಡಿವೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಾಜಶೇಖರ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಪಕ್ಷದ ಜಿಲ್ಲಾ ಮಹಿಳಾ ಅಧ್ಯಕ್ಷೆ ಮಿನಾಕ್ಷಿ ಸಂಗ್ರಾಮ, ಹಣಮಂತರಾವ ಚವ್ಹಾಣ ಇದ್ದರು.