ಬಡವರ ಹಣ ದೋಚಿದ ಕೇಂದ್ರ ಸಚಿವ ಭಗವಂತ ಖೂಬಾ: ಈಶ್ವರ ಖಂಡ್ರೆ ಆರೋಪ
ಬ್ರಿಮ್ಸ್ ಆಸ್ಪತ್ರೆಯ ಕಡು ಬಡವರಾದ ನೈರ್ಮಲ್ಯ ಕಾರ್ಯಕರ್ತರ ಸಂಬಳ, ಪಿಎಫ್, ಇಎಸ್‌ಐ ಹಣವನ್ನೇ ದೋಚಿರುವಂಥ ಕುಟುಂಬದವರಾದ ಕೇಂದ್ರ ಸಚಿವ ಭಗವಂತ ಖೂಬಾ ವಿಮಾ ಕಂಪನಿಗಳ ಜೊತೆ ಸೇರಿ ರೈತರ ನೂರಾರು ಕೋಟಿ ರು. ಕಬಳಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.
ಬೀದರ್ (ಮಾ.12): ಬ್ರಿಮ್ಸ್ ಆಸ್ಪತ್ರೆಯ ಕಡು ಬಡವರಾದ ನೈರ್ಮಲ್ಯ ಕಾರ್ಯಕರ್ತರ ಸಂಬಳ, ಪಿಎಫ್, ಇಎಸ್‌ಐ ಹಣವನ್ನೇ ದೋಚಿರುವಂಥ ಕುಟುಂಬದವರಾದ ಕೇಂದ್ರ ಸಚಿವ ಭಗವಂತ ಖೂಬಾ ವಿಮಾ ಕಂಪನಿಗಳ ಜೊತೆ ಸೇರಿ ರೈತರ ನೂರಾರು ಕೋಟಿ ರು. ಕಬಳಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು. ಅವರು ಇತ್ತೀಚೆಗೆ ಬೀದರ್ ರಿಂಗ್‌ರೋಡ್ ಕುರಿತಂತೆ ಕೇಂದ್ರ ಸಚಿವ ಭಗವಂತ ಖೂಬಾ ಮಾಡಿದ ಆರೋಪಗಳಿಗೆ ಪ್ರಕಟಣೆ ಹೊರಡಿಸಿ ಪ್ರತ್ಯುತ್ತರ ನೀಡುತ್ತ, ಚಿಕ್ಕಪೇಟ್‌ನಿಂದ ಅಲಿಯಾಬಾದ್ ವರೆಗಿನ ವರ್ತುಲ ರಸ್ತೆ ಕಾಮಗಾರಿ ನೆನೆಗುದಿಗೆ ಬೀಳಲು ನನ್ನನ್ನು ಕಾರಣೀಕರ್ತನನ್ನಾಗಿ ಆರೋಪಿಸಿದ ಖೂಬಾ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ದೂರಿದರು.
ನೌಬಾದ್ ಭಾಲ್ಕಿ ಕಮಲನಗರ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಕಳಪೆ ಕಾಮಗಾರಿಯಿಂದ ಕಿತ್ತು ಹೋಗಿದ್ದು 300 ಕೋಟಿ ರು. ಅಕ್ರಮ ನಡೆದಿದೆ. ಇಡೀ ರಸ್ತೆ ಧೂಳುಮಯವಾಗಿದ್ದು, ಜನರು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್ ಹೊಡೆಯುವ ಬಿಜೆಪಿ ನಾಯಕರು ಸರ್ಕಾರದ ದೇಶದ ಬಗ್ಗೆ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗಿದೆ ಎಂದು ಖಂಡ್ರೆ ವ್ಯಂಗ್ಯವಾಡಿದರು.
ಆಲಮಟ್ಟಿಜಂಗಮರ ಕಥೆಯಂಥಾದ ಕಾಂಗ್ರೆಸ್, ಜೆಡಿಎಸ್ ಕನಸು: ಸಚಿವ ಗೋವಿಂದ ಕಾರಜೋಳ
2016-17ನೇ ಸಾಲಿನಲ್ಲಿ ಬಿದ್ದಿದ್ದ ಅಕಾಲಿಕ ಮಳೆ, ಪ್ರವಾಹದಿಂದ ರಸ್ತೆಗಳು ಕೊಚ್ಚಿ ಹೋಗಿದ್ದ ಸಂದರ್ಭದಲ್ಲಿ ಜನದಟ್ಟಣೆ ಇಲ್ಲದ ಈ 3.5 ಕಿ.ಮೀ. ವರ್ತುಲ ರಸ್ತೆಯ ಅನುದಾನವನ್ನು ನಗರದ ಜನನಿಬಿಡ ಪ್ರದೇಶದಲ್ಲಿನ ರಸ್ತೆಗಳ ಸುಧಾರಣೆಗೆ ಬಳಸುವ ಮೂಲಕ ಜನ ಮನ್ನಣೆಗಳಿಸಿದ್ದೆವು ಎಂದು ಅವರು ತಿಳಿಸಿದ್ದಾರೆ. ರಸ್ತೆ, ಆಸ್ಪತ್ರೆ, ಅನ್ನದಾತರ ಬೆಳೆ ವಿಮೆ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿಗಳಲ್ಲೂ ಕೋಟ್ಯಂತರ ರು. ಲೂಟಿ ಮಾಡಿರುವ ಸಚಿವ ಭಗವಂತ ಖೂಬಾ ವಿರುದ್ಧ ಮೊದಲು ಕ್ರಿಮಿನಲ್ ಮೊಕದ್ದಮೆ ಹೂಡಿ ಆಸ್ತಿ ಜಪ್ತಿ ಮಾಡಿ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು ಎಂದು ಖಂಡ್ರೆ ಆಗ್ರಹಿಸಿದರು.
ಇವರು ಒಬ್ಬ ಸಂಸದರಾಗಿ ರೈಲು, ವಿಮಾನಯಾನ, ರಾಷ್ಟ್ರೀಯ ಹೆದ್ದಾರಿ, ಶಿಕ್ಷಣಕ್ಕೆ ಐಐಟಿ, ಏಮ್ಸ್ ಮತ್ತು ಉದ್ಯೋಗ ಸೃಷ್ಟಿಸಲು ನಮ್ಮ ಭಾಗದಲ್ಲಿ ಕೇಂದ್ರ ವಲಯದ ಕಾರ್ಖಾನೆ ಸ್ಥಾಪಿಸುವಂತಹ ಯಾವುದೇ ಕೆಲಸ ಮಾಡಿಲ್ಲ. ತಮ್ಮ ಜವಾಬ್ದಾರಿ ಮರೆತು ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ಸರ್ಕಾರ ಮಂಜೂರು ಮಾಡಿರುವ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವದು ಶಿಷ್ಠಾಚಾರದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಈ ಎಲ್ಲ ಅಂಶಗಳನ್ನು ಜಿಲ್ಲೆಯ ಜನ ಗಮನಿಸುತ್ತಿದ್ದು ಶೀಘ್ರವೇ ಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನಿಶ್ಚಿತ: ಜಗದೀಶ್ ಶೆಟ್ಟರ್ ಅಭಿಮತ
ಭಾಲ್ಕಿಯಲ್ಲಿ ಧ್ರುವನಾರಾಯಣಗೆ ಶ್ರದ್ಧಾಂಜಲಿ: ಇಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆರ್.ಧ್ರುವನಾರಾಯಣ ಭಾವಚಿತ್ರಕ್ಕೆ ಶಾಸಕ ಈಶ್ವರ ಖಂಡ್ರೆ ಪುಷ್ಪನಮನ ಸಲ್ಲಿಸಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದರು. ಆದರೆ ಅವರು ದಿಢೀರ್ ಹೃದಯಘಾತದಿಂದ ನಿಧನರಾಗಿರುವುದು ಪಕ್ಷ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದರು. ಭಂತೇಜಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ಯುವ ಮುಖಂಡ ಸಾಗರ ಖಂಡ್ರೆ, ನಗರ ಅಧ್ಯಕ್ಷ ಅಬ್ದುಲ ನಸೀರ್, ಯುವ ಅಧ್ಯಕ್ಷ ಜೈಪಾಲ ಭೋರಾಳೆ, ಪುರಸಭೆ ಮಾಜಿ ಅಧ್ಯಕ್ಷ ವಿಶಾಲ ಪುರಿ, ಜಿಪಂ ಮಾಜಿ ಸದಸ್ಯ ಅಂಬಾದಾಸ ಪಾಟೀಲ್ ಪ್ರಮುಖರಾದ ಅನಿಲ ಲೋಖಂಡೆ, ಅಶೋಕ ಬಾವುಗೆ, ಓಂಕಾರ ಮೋರೆ ಸೇರಿದಂತೆ ಹಲವರು ಇದ್ದರು.