ಬೆಂಗಳೂರು, (ಸೆ.07): ಕೇಂದ್ರದ ನರೇಂದ್ರ ಮೋದಿ ಸರ್ಕಾರ ಗ್ಯಾಸ್ ಸಬ್ಸಿಡಿಯನ್ನು ರದ್ದುಗೊಳಿಸುವ ಮೂಲಕ ಮಧ್ಯಮ ವರ್ಗದ ಜನರಿಗೆ ಮೋಸ ಮಾಡಿದೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಈಶ್ವರ್ ಖಂಡ್ರೆ,  ಕೇಂದ್ರದ ನರೇಂದ್ರ ಮೋದಿ ಸರ್ಕಾರ ಗ್ಯಾಸ್ ಸಬ್ಸಿಡಿಯನ್ನ ದಿಢೀರ್ ರದ್ದುಗೊಳಿಸಿದೆ.‌ ಮಹಿಳೆಯರ ವೋಟ್ ಪಡೆದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಈಗ ಮಹಿಳೆಯರು ಬಳಸುವ ಗ್ಯಾಸ್ ಸಿಲೆಂಡರ್ ನ ಸಬ್ಸಿಡಿಯನ್ನೇ ರದ್ದುಗೊಳಿಸಿದ್ದು ಮಧ್ಯಮ ವರ್ಗದ ಜನರಿಗೆ ಮಾಡಿದ ಮೋಸ ಎಂದು ಕಿಡಿಕಾರಿದ್ದಾರೆ.

ಎಲ್‌ಪಿಜಿ ಗ್ರಾಹಕರಿಗೆ ಸಬ್ಸಿಡಿ ಖೋತಾ! ಕಾಂಗ್ರೆಸ್ ತೀವ್ರ ಆಕ್ಷೇಪ

ಉಜ್ವಲ ಹೆಸರಲ್ಲಿ ಪ್ರಚಾರಗಿಟ್ಟಿಸುವ ಬಿಜೆಪಿ ಈಗ ಸಬ್ಸಿಡಿ ರದ್ದು ಮಾಡಿ ಮಹಿಳೆಯರು ಕೂಡಿಡುವ ಡಬ್ಬಿ ಹಣಕ್ಕೂ ಕನ್ನಹಾಕುತ್ತಿದೆ. ಈಗ ಹೇಳಿ ಸಬ್ಸಿಡಿ ರದ್ದು ಮಾಡಿದ್ದು ನಿಮ್ಮ ಸರ್ಕಾರವೋ ಅಥವಾ ಅದು ಕೂಡ ACT OF GOD ಪರಿಣಾಮವೋ? ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಮುಂದೆ ಅಡುಗೆ ಅನಿಲ ಸಬ್ಸಿಡಿ ದೇಶದ ಜನರ ಖಾತೆಯಲ್ಲಿ ಜಮಾ ಆಗುವುದಿಲ್ಲ. ಎಲ್‌ಪಿಜಿ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.