ಬೀದರ್, (ಸೆ.07): ನೆರೆ ಪರಿಹಾರ, ಅನುದಾನ ಹಂಚಿಕೆ ಸೇರಿದಂತೆ ಪ್ರತಿ ಹಂತದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಎಸಗುತ್ತಿದೆ. ಆದರೂ ಪ್ರಧಾನ ಮಂತ್ರಿಗಳನ್ನು ಈ ವಿಷಯದಲ್ಲಿ ಕೇಳಲು ಧೈರ್ಯ ತೋರದ ರಾಜ್ಯದ ಬಿಜೆಪಿ ಸಂಸದರು ಪುಕ್ಕಲರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

ಇಂದು (ಸೋಮವಾರ) ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದೆ. ಜಿಎಸ್‌ಟಿ ಹಣ ನಮ್ಮ ಹಕ್ಕು, ಭೀಕ್ಷೆ ಅಲ್ಲ. ಆದರೆ, ಹಣ ಕೊಡಲು ಕೇಂದ್ರ ಮಲತಾಯಿ ಧೋರಣೆ ತೋರುತ್ತಿದೆ. ರಾಜ್ಯದಿಂದ 25 ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿರುವ ಕನ್ನಡಿಗರ ಮೇಲೆಯೇ ಯಾಕೆ ಅಸಮಾಧಾನ ಎಂದು ಪ್ರಶ್ನಿಸಿದರು.

'LPG ಸಬ್ಸಿಡಿ ರದ್ದು ಮಾಡಿ ಮಹಿಳೆಯರು ಕೂಡಿಡುವ ಡಬ್ಬಿ ಹಣಕ್ಕೂ ಮೋದಿ ಸರ್ಕಾರ ಕನ್ನ'

ದೇಶದಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸಿದ್ದೇವೆ ಎಂದು ಬಿಜೆಪಿ ಸರ್ಕಾರ ತನ್ನ ಬೆನ್ನು ತಾವೇ ತಟ್ಟಿಕೊಳ್ಳುತ್ತ ಬಂದಿತ್ತು. ವ್ಯಾಪಕವಾಗಿ ಹರಡುತ್ತಿರುವ ಸೋಂಕು ಹತೋಟಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದಕ್ಕೆ ಸರ್ಕಾರಗಳ ನಿರ್ಲಕ್ಷ ಮತ್ತು ಎಡವಟ್ಟುಗಳೇ ಕಾರಣವಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ಭಾರತ ಈಗಾಗಲೇ ಜಗತ್ತಿನಲ್ಲಿ 2ನೇ ಸ್ಥಾನದಲ್ಲಿದ್ದು, ಇನ್ನೇರಡು ತಿಂಗಳಲ್ಲಿ ಮೊದಲ ಸ್ಥಾನಕ್ಕೆ ಬಂದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಅಸಮರ್ಥ ಆಡಳಿತ, ತಪ್ಪು ನೀತಿಗಳಿಂದಾಗಿ ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಇಳಿದಿದೆ. 23.09ಕ್ಕೆ ಜಿಡಿಪಿ ಕುಸಿದಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ ದಿವಾಳಿಯಂಚಿಗೆ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.