ಬಿಜೆಪಿ, ಜೆಡಿಎಸ್ ಷಡ್ಯಂತ್ರ ನಡೆಯೋಲ್ಲ: ಪಿ.ಎಂ.ನರೇಂದ್ರಸ್ವಾಮಿ
ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಷಡ್ಯಂತ್ರದಿಂದ ಕಾಂಗ್ರೆಸ್‌ಗೆ ಸೋಲುಂಟಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಅವರ ಯಾವುದೇ ಷಡ್ಯಂತ್ರಗಳು ನಡೆಯುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ನೇರವಾಗಿ ಹೇಳಿದರು.
ಮಳವಳ್ಳಿ (ಫೆ.12): ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಷಡ್ಯಂತ್ರದಿಂದ ಕಾಂಗ್ರೆಸ್‌ಗೆ ಸೋಲುಂಟಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಅವರ ಯಾವುದೇ ಷಡ್ಯಂತ್ರಗಳು ನಡೆಯುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ನೇರವಾಗಿ ಹೇಳಿದರು. ಪಟ್ಟಣದ ಅನಂತರಾಮ ವೃತ್ತದಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ಬಾರಿ ಬಿಜೆಪಿ, ಜೆಡಿಎಸ್ ಮಾಡಿಕೊಂಡ ಒಳ ಒಪ್ಪಂದದಿಂದ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಸೋಲುಂಟಾಗಿತ್ತು. ಈಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ. ಎರಡೂ ಪಕ್ಷಗಳು ಯಾವುದೇ ಷಡ್ಯಂತ್ರ ನಡೆಸಿದರೂ ಫಲಿಸುವುದಿಲ್ಲ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿ ತಾಲೂಕಿನೊಳಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ತಾಲೂಕಿನಲ್ಲಿ ಸುಮಾರು 5000 ಎಕರೆ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ. ತಾಲೂಕು ಕಚೇರಿಯನ್ನು ಭ್ರಷ್ಟಾಚಾರದ ಕೂಪವಾಗಿ ರೂಪಾಂತರಿಸಿದ್ದಾರೆ. ಜನಪರ ಮತ್ತು ಅಭಿವೃದ್ಧಿಗೆ ಪೂರಕವಾದ ಒಂದೇ ಒಂದು ಯೋಜನೆಯನ್ನು ನೀಡಿದ್ದರೆ ಬಹಿರಂಗವಾಗಿ ಹೇಳಲಿ ಎಂದು ಹಾಲಿ ಶಾಸಕರಿಗೆ ಸವಾಲು ಹಾಕಿದರು. ನಾನು ಅಧಿಕಾರಕ್ಕೆ ಬರುವ ಮುನ್ನ ಕ್ಷೇತ್ರದಲ್ಲಿ ವಿದ್ಯುತ್ ಕುಡಿಯುವ ನೀರು, ರಸ್ತೆ, ಆಸ್ಪತ್ರೆ, ಶಾಲೆಗಳು, ಕ್ರೀಡಾಂಗಣ ಸೇರಿದಂತೆ ಅನೇಕ ಮೂಲ ಸೌಲಭ್ಯಗಳು ಇರಲಿಲ್ಲ.
ಈ ತಿಂಗಳಲ್ಲೇ ಜೆಡಿಎಸ್ 2ನೇ ಪಟ್ಟಿ ಬಿಡುಗಡೆ: ಎಚ್.ಡಿ.ಕುಮಾರಸ್ವಾಮಿ
ನಾನು ಅಧಿಕಾರಕ್ಕೆ ಬಂದ ನಂತರ ಮೂಲ ಸೌಲಭ್ಯಗಳಿಗೆ ಕೊರತೆಯಾಗದಂತೆ ಹಂತ ಹಂತವಾಗಿ ಎಲ್ಲವನ್ನೂ ಜಾರಿಗೊಳಿಸಿದೆ ಎಂದರು. ಬಡವರಿಗೆ ನಿರಂತರ ಜ್ಯೋತಿ ಯೋಜನೆ, ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ತಾಂತ್ರಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಿ ನಿರುದ್ಯೋಗ ಯೋಗ ಯುವತಿಯರ ಉದ್ಯೋಗಕ್ಕೆ ಅನುಕೂಲ ಮಾಡಿಕೊಟ್ಟಿದ್ದೆ. ಪಟ್ಟಣಕ್ಕೆ 70 ಕೋಟಿ ರು. ವೆಚ್ಚದಲ್ಲಿ ಕುಡಿವ ನೀರನ್ನು ಒದಗಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಮುಂದಾಗಿದ್ದೆ. ಆ ಯೋಜನೆ ಜಾರಿಯಾಗದಂತೆ ಸಂಚು ರೂಪಿಸಿದರು. ಯೋಜನೆಗೆ ಅಳವಡಿಸಿದ್ದ ಸಾಮಗ್ರಿಗಳನ್ನು ಕಳ್ಳತನ ಮಾಡಿದರು.
ಇದರ ಪರಿಣಾಮ ಸಿಡಿಹಬ್ಬದ ವೇಳೆ ಬಿಂದಿಗೆ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಾನು ಮಂಜೂರು ಮಾಡಿಸಿದ ಮಹತ್ವಕಾಂಕ್ಷೆಯ 590 ಕೋಟಿ ರು. ವೆಚ್ಚದ ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಕುಮಾರಸ್ವಾಮಿ ಸರ್ಕಾರದಿಂದ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ನರೇಂದ್ರಸ್ವಾಮಿ ಅವರು, ನನ್ನ ಕನಸಿನ ಯೋಜನೆಯನ್ನು ಮಣ್ಣು ಪಾಲು ಮಾಡಿದರು ಎಂದು ಬೇಸರದಿಂದ ನುಡಿದರು.
ಕಾಂಗ್ರೆಸ್ ಜನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳನ್ನು ಜಾರಿಗೊಳಿಸಲು ಜನರು ಶಕ್ತಿ ತುಂಬಬೇಕು. ಕೊರೋನಾ ಔಷಧಿಯನ್ನು ಕಳ್ಳತನ ಮಾಡುವ ಸರ್ಕಾರ ಅಧಿಕಾರದಲ್ಲಿ ಇರಬೇಕೇ ಅಥವಾ ಇರಬೇಡವೇ ಎಂಬುದನ್ನು ಜನರು ನಿರ್ಧಾರ ಮಾಡಬೇಕು. ಕಾಂಗ್ರೆಸ್ ಇಂದಿಗೂ ಜನರು ಕೊಟ್ಟ ಮಾತಿಗೆ ತಪ್ಪಿಲ್ಲ. ಮುಂದೆ ತಪ್ಪುವುದಿಲ್ಲ. ಅದೇ ವಿಶ್ವಾಸದೊಂದಿಗೆ ಜನರ ಬಳಿ ಮತಯಾಚಿಸುತ್ತಿದೆ. ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ನುಡಿದರು.
ಸುರಪುರದಲ್ಲಿ ಕಾಂಗ್ರೆಸ್ ಗೆಲ್ಲೋದು ಖಚಿತ: ಪ್ರಿಯಾಂಕ್ ಖರ್ಗೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮರ್ಥ ಒಕ್ಕಲಿಗ ನಾಯಕರಾಗಿದ್ದು, ಅವರ ಕೈ ಬಲಪಡಿಸಬೇಕಿದೆ. ನೂರು ಕೇಸ್ ಹಾಕಿದರೂ ಈ ಸಿಂಹ ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ. ಸಿಬಿಐ, ಇಡಿ ಆದಾಯ ತೆರಿಗೆ ಇಲಾಖೆ ಯಾರೇ ಬಂದರೂ ಹೆದರುವುದು ಇಲ್ಲ. ಆನೆ ನಡೆದಿದ್ದೇ ಹಾದಿ ಎಂಬಂತೆ ಧೈರ್ಯದಿಂದ ಮುನ್ನುಗ್ಗುತ್ತಿರುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ.
-ಪಿ.ಎಂ.ನರೇಂದ್ರಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ