ಕೇಂದ್ರ ಸರ್ಕಾರದ ಬಜೆಟ್ಗಳ ಮೇಲೆ ನಿರೀಕ್ಷೆಗಳೇ ಇಲ್ಲ ಎಂದಲ್ಲಾ. ಆದರೆ ನಾವು ಇಟ್ಟುಕೊಂಡ ನಿರೀಕ್ಷೆಗಳೆಲ್ಲಾ ಸುಳ್ಳಾಗುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.31): ಕೇಂದ್ರ ಸರ್ಕಾರದ ಬಜೆಟ್ಗಳ ಮೇಲೆ ನಿರೀಕ್ಷೆಗಳೇ ಇಲ್ಲ ಎಂದಲ್ಲಾ. ಆದರೆ ನಾವು ಇಟ್ಟುಕೊಂಡ ನಿರೀಕ್ಷೆಗಳೆಲ್ಲಾ ಸುಳ್ಳಾಗುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು. ಕೊಡಗಿನ ಭಾಗಮಂಡಲದಲ್ಲಿ ಮೇಲ್ಸೇತುವೆ ಉದ್ಘಾಟನೆಗೆ ಬಂದಿದ್ದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯಕ್ಕೆ ತೆರಿಗೆಯ ಹಣ ಸಾಕಷ್ಟು ಬರಬೇಕಾಗಿದೆ. ಅದನ್ನು ನಾವು ಕೇಂದ್ರದ ಬಳಿ ಕೇಳಿದ್ದೇವೆ. ಅಲ್ಲಿಗೆ ಹೋಗಿ ಪ್ರತಿಭಟನೆಯನ್ನೂ ಮಾಡಿದೆವು. ಕೇಂದ್ರ ಯೋಜನೆಗಳ ಪಾಲು ಕಡಿಮೆ ಆಗುತ್ತಿದೆ ಅಂತ ಕೇಳಿದ್ದೇವೆ. ನಮಗೆ ಅನುದಾನಗಳನ್ನೇನೂ ಕೊಡುತ್ತಿಲ್ಲ ಎಂದು ಕೇಳಿದ್ದೇವೆ. ಕೇಂದ್ರ ಸರ್ಕಾರದವರು ಕಿವಿ ಕೇಳಿದರೂ ಕಿವುಡರಂತೆ ಇದ್ದಾರೆ. 

ಕಳೆದ ವರ್ಷದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಿಸಿದ್ದರು. ಅದರಲ್ಲಿ ಒಂದೇ ಒಂದು ಪೈಸೆ ಕೊಟ್ಟಿದ್ದಾರಾ.? ಆದ್ದರಿಂದ ಈ ಸರ್ಕಾರದಿಂದ ನಿರೀಕ್ಷೆ ಮಾಡುತ್ತೇವೆ, ನಿರೀಕ್ಷೆ ಮಾಡುವುದೇ ಇಲ್ಲ ಅಂತಲ್ಲ, ಆದರೆ ನಿರೀಕ್ಷೆ ಸುಳ್ಳಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆ ನಾವು ನಿರೀಕ್ಷೆ ಮಾಡಲೇಬೇಕು. ಕೇಂದ್ರಕ್ಕೆ ತೆರಿಗೆ ಕೊಡುತ್ತೇವೆ. ನಮಗೆ ನ್ಯಾಯಯುತವಾಗಿ ಬರಬೇಕಾಗಿರುವ ತೆರಿಗೆ ಪಾಲಿಗಾಗಿ ನಿರಂತರ ಹೋರಾಟ ಮಾಡ್ತೇವೆ ಎಂದು ಕೊಡಗಿನ ಭಾಗಮಂಡಲದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಿದ್ದು, ಆನೆ ಚಿರತೆಗಳ ಸಂಖ್ಯೆಯೂ ಕರ್ನಾಟಕದಲ್ಲಿ ಹೆಚ್ಚಿದೆ. ಹೀಗಾಗಿ ಆಹಾರ ನೀರಿಗಾಗಿ ಕಾಡಿನಿಂದ ಹೊರಗಡೆ ಬರುತ್ತಿವೆ. ಅದಕ್ಕಾಗಿಯೇ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದ್ದು, ಅವುಗಳನ್ನು ಹೊರಗೆ ಬಾರದಂತೆ ತಡೆಯುವ ಪ್ರಯತ್ನ ಆಗುತ್ತಿದೆ. 

ಮಾನವ ಮತ್ತು ವನ್ಯ ಜೀವಿ ಸಂಘರ್ಷ ತಪ್ಪಿಸಲು ಎಲ್ಲಾ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಸಿಎಂ ಆದ ಬಳಿಕ ನಾಲ್ಕನೇ ಬಾರಿಗೆ ಕೊಡಗಿಗೆ ಆಗಮಿಸಿರುವ ಸಿಎಂ ಸಿದ್ದರಾಮಯ್ಯ ಮೊದಲಿಗೆ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದ ಎದುರಿಗೆ ಇರುವ ಉದ್ಯಾನವನವನ್ನು ಉದ್ಘಾಟಿಸಿದ ಸಿದ್ದರಾಮಯ್ಯ ಅವರು ಕಾವೇರಿ ಉಗಮಸ್ಥಾನ ತಲಕಾವೇರಿಗೆ ಭೇಟಿ ನೀಡಿದರು. ಅಲ್ಲಿಯೂ ಗಣಪತಿ, ಅಗಸ್ತ್ಯಮುನಿಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ತೀರ್ಥ ಕುಂಡಿಕೆಯ ಬಳಿಗೆ ತೆರಳಿದ ಸಿದ್ದರಾಮಯ್ಯ ಅವರು ಅಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ತಲಕಾವೇರಿಗೆ ತೆರಳಿದ್ದ ಸಿದ್ದರಾಮಯ್ಯನವರಿಗೆ ಅಲ್ಲಿ ದೇವಾಲಯ ಸಮಿತಿ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. 

ಇದು ಬಹುತ್ವದ ದೇಶ, ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ, ನಿಮ್ಮ ಆಶೀರ್ವಾದದಿಂದ ಸಿಎಂ ಆಗಿದ್ದೇನೆ: ಸಿದ್ದರಾಮಯ್ಯ

ಬಳಿಕ ಭಾಗಮಂಡಲಕ್ಕೆ ಆಗಮಿಸಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಮೇಲ್ಸೇತುವೆಯನ್ನು ಉದ್ಘಾಟಿಸಿ, ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆ ಮಾಡಿದರು. ಕೊಡಗು ಉಸ್ತುವಾರಿ ಸಚಿವ ಭೋಸರಾಜ್, ಮಡಿಕೇರಿ ಶಾಸಕ ಮಂತರ್ ಗೌಡ, ವಿರಾಜಪೇಟೆ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು. ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ನೀಡಿರುವ ಅನುದಾನಗಳ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಹೇಳಿದ್ರು. ಯಾವುದೇ ಸರ್ಕಾರ ನೀಡಿದ ಅನುದಾನಕ್ಕಿಂತ ಅತಿಹೆಚ್ಚು ಅನುದಾನವನ್ನು ಸಿದ್ದರಾಮಯ್ಯನವರ ಸರ್ಕಾರ ನೀಡಿದೆ ಎಂದರು. ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳನ್ನು ಕೆಲವರು ಟೀಕಿಸಿದರು. ಆದರೆ ಈ ಯೋಜನೆಗಳನ್ನು ಇಂದು ಎಲ್ಲರೂ ಅನುಸರಿಸುತ್ತಿದ್ದಾರೆ. ನಮ್ಮ ಯೋಜನೆಗಳು ರಾಷ್ಟ್ರದಲ್ಲಿಯೇ ಅಷ್ಟೇ ಅಲ್ಲ, ಅಂತರರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿವೆ ಎಂದಿದ್ದಾರೆ. ಸಿದ್ದರಾಮಯ್ಯ ಕೊಡುಗೆಗಾಗಿ ಅವರಿಗೆ ಕಾವೇರಿ ಪುತ್ಥಳಿ ನೀಡಿ ಗೌರವಿಸಿದ್ರು.