ಖರ್ಗೆ, ಸಿದ್ದು, ಕೆಎಚ್ಚೆಂ, ದಿನೇಶ್‌ ಮನೆಗೆ ಡಿಕೆಶಿ| ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಯತ್ನ| ನಾಲ್ವರೂ ನಾಯಕರ ಜತೆ ರಾಜಕೀಯ ಸಮಾಲೋಚನೆ

ಬೆಂಗಳೂರು[ಮಾ.15]: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ನಿರೀಕ್ಷೆಯಂತೆಯೇ ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ತಮ್ಮ ಪ್ರಯತ್ನ ಆರಂಭಿಸಿದ್ದು, ಶನಿವಾರ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಕೆ.ಎಚ್‌. ಮುನಿಯಪ್ಪ ಹಾಗೂ ದಿನೇಶ್‌ ಗುಂಡೂರಾವ್‌ ಅವರ ನಿವಾಸಗಳಿಗೆ ಭೇಟಿ ನೀಡಿ ಪಕ್ಷವನ್ನು ಮುನ್ನಡೆಸಲು ಸಹಕಾರ ಕೋರಿದರು.

Add Asianetnews Kannada as a Preferred SourcegooglePreferred

ಶನಿವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಾಂಧಿ ಭವನ ಸಮೀಪದ ನಿವಾಸಕ್ಕೆ ಭೇಟಿ ನೀಡಿದ ಅವರು, ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿದರು. ಬಳಿಕ ಸುಮಾರು ಒಂದು ಗಂಟೆ ಕಾಲ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕೂಡ ಡಿ.ಕೆ. ಶಿವಕುಮಾರ್‌ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

ಬಳಿಕ ಸದಾಶಿವ ನಗರದಲ್ಲಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿದ ಶಿವಕುಮಾರ್‌ ಅವರು ಖರ್ಗೆ ಅವರಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವಂತಹ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆಗೆ ಹಿರಿಯರ ಅನುಭವ, ಮಾರ್ಗದರ್ಶನ, ಯುವಕರ ಸ್ಫೂರ್ತಿ, ಮಹಿಳೆಯರ ಸಂಘಟನಾ ಶಕ್ತಿ ಅತ್ಯಗತ್ಯ. ಇಲ್ಲದಿದ್ದರೆ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ ಎಂದು ಹೇಳಿದರು.

ಅಧಿಕಾರ ಸ್ವೀಕಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ನಾಯಕರೊಂದಿಗೆ ಶೀಘ್ರವೇ ದೆಹಲಿಗೆ ತೆರಳಲಿದ್ದೇನೆ. ಆ ನಂತರ ಯಾವ ದಿನ ಅಧಿಕಾರ ಸ್ವೀಕಾರ ಮಾಡಬೇಕು ಎನ್ನುವ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಶನಿವಾರ ಸಂಜೆ ರಾಜ್‌ಮಹಲ್‌ವಿಲಾಸ್‌ 2ನೇ ಹಂತದಲ್ಲಿರುವ ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಗುಂಡೂರಾವ್‌ ಪತ್ನಿ ಟಬು ಗುಂಡೂರಾವ್‌ ಅವರು ಇದ್ದರು. ಅನಂತರ ಸಂಜಯ್‌ ನಗರದ ಪೋಸ್ಟಲ್‌ ಕಾಲೋನಿಯಲ್ಲಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಅವರ ನಿವಾಸಕ್ಕೂ ಭೇಟಿ ನೀಡಿದ ಡಿ.ಕೆ.ಶಿವಕುಮಾರ್‌ ಅವರು ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿದರು.