* ಹೈಕಮಾಂಡ್‌ ಒಪ್ಪಿದರೆ ಕೆಪಿಸಿಸಿಗೆ ಭಾರೀ ಸರ್ಜರಿ?* ರಾಹುಲ್‌ ಭೇಟಿಗಾಗಿ ನಾಳೆ ಡಿಕೆಶಿ ದಿಲ್ಲಿಗೆ: ಕುತೂಹಲ!* 10ರಿಂದ 15 ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಬದಲು?

ಬೆಂಗಳೂರು(ಜೂ.20): ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಭರ್ಜರಿ ಸರ್ಜರಿ ಮಾಡಲು ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಜ್ಜಾಗಿದ್ದು, ಈ ಸರ್ಜರಿಗೆ ಅನುಮೋದನೆ ಪಡೆಯಲು ಸೋಮವಾರ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.

ಒಂದು ವೇಳೆ ಈ ಸರ್ಜರಿಗೆ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ನೀಡಿದ್ದೇ ಆದರೆ ಪ್ರಮುಖವಾಗಿ ರಾಜ್ಯದ 10ರಿಂದ 15 ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್‌ ಸಮಿತಿ (ಡಿಸಿಸಿ) ಅಧ್ಯಕ್ಷರ ಬದಲಾವಣೆಯಾಗಲಿದೆ. ಜತೆಗೆ ಕಳೆದ ಲೋಕಸಭಾ ಚುನಾವಣೆ ನಂತರ ಖಾಲಿ ಇರುವ ಕೆಪಿಸಿಸಿಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ನೇಮಕಾತಿ ನಡೆಯಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆಯೂ ಆಗಲಿದೆ.

ಬಿಜೆಪಿ ಆಯ್ತು ಈಗ ಕಾಂಗ್ರೆಸ್ ಸರದಿ, ಜಮೀರ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ಡಿಕೆಶಿ

ಹಾಲಿ ಅಧ್ಯಕ್ಷ ರಕ್ಷಾ ರಾಮಯ್ಯ ಬದಲಿಗೆ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಅವರಿಗೆ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಪಟ್ಟದೊರೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಅವರು ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಸೋಮವಾರ ಭೇಟಿಯಾಗಲು ದೆಹಲಿಗೆ ತೆರಳಲಿದ್ದು, ಈ ವೇಳೆ ಈ ಪ್ರಸ್ತಾವನೆಗಳಿಗೆ ಹೈಕಮಾಂಡ್‌ನ ಒಪ್ಪಿಗೆ ಕೋರಲಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಮುಂಬರುವ ಚುನಾವಣೆಗೆ ಪಕ್ಷ ಸಂಘಟನೆ ಮತ್ತು ಬಲವರ್ಧನೆ ದೃಷ್ಟಿಯಿಂದ 10ರಿಂದ 15 ಜಿಲ್ಲೆಗಳ ಡಿಸಿಸಿ ಅಧ್ಯಕ್ಷರ ಬದಲಾವಣೆಗೆ ಶಿವಕುಮಾರ್‌ ಮುಂದಾಗಿದ್ದಾರೆ. ಅಲ್ಲದೆ, ಈ ಹಿಂದಿನ ಕೆಪಿಸಿಸಿ ಅಧ್ಯಕ್ಷರ ಅವಧಿಯಲ್ಲಿ 296 ಇದ್ದ ಕೆಪಿಸಿಸಿ ಪದಾಧಿಕಾರಿಗಳ ಸಂಖ್ಯೆಯನ್ನು 80ರಿಂದ 90ಕ್ಕೆ ಸೀಮಿತಗೊಳಿಸುವ ಯೋಜನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಲಪಾಡ್‌ಗೆ ಯುವ ಕಾಂಗ್ರೆಸ್‌ ಪಟ್ಟ:

ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದರೂ ತಮ್ಮ ವಿರುದ್ಧದ ಕೆಲ ಪ್ರಕರಣಗಳಿಂದಾಗಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಆಯ್ಕೆ ಊರ್ಜಿತಗೊಳಿಸುವಂತೆ ಹೈಕಮಾಂಡ್‌ಗೆ ಶಿವಕುಮಾರ್‌ ಮನವಿ ಮಾಡಲಿದ್ದಾರೆ ಎನ್ನಲಾಗಿದೆ

'ಆಗಸ್ಟ್ 15 ರ ನಂತರ ರಾಜಕೀಯ ಬದಲಾವಣೆ' ಕೆಪಿಸಿಸಿ ಕಾರ್ಯಾಧ್ಯಕ್ಷ ಭವಿಷ್ಯ.

ಕಳೆದ ಜನವರಿಯಲ್ಲಿ ನಡೆದ ಯುವ ಕಾಂಗ್ರೆಸ್‌ ಚುನಾವಣೆಯಲ್ಲಿ ಮೊಹಮ್ಮದ್‌ ನಲಪಾಡ್‌ 64,203 ಮತ ಪಡೆದು ಮೊದಲ ಸ್ಥಾನ ಪಡೆದರೂ ಅವರ ಮೇಲಿನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಫೌಂಡೇಷನ್‌ ಫಾರ್‌ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಡ್‌ ಆಫ್‌ ಎಲೆಕ್ಷಸ್ಸ್‌ (ಫೇಮ…) ಸಮಿತಿಯು ಅವರ ಆಯ್ಕೆಯನ್ನು ಅನರ್ಹಗೊಳಿಸಿತ್ತು. ಹೀಗಾಗಿ ನಲಪಾಡ್‌ ನಂತರ ಅತಿ ಹೆಚ್ಚು ಮತ ಗಳಿಸಿದ್ದ ಮಾಜಿ ಸಚಿವ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು.