ನಿಜವಾದ ಬಂಡೆ ಮಲ್ಲಿಕಾರ್ಜುನ ಖರ್ಗೆ: ಡಿ.ಕೆ.ಶಿವಕುಮಾರ್‌ ಪ್ರಶಂಸೆ

‘ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ರಾಜ್ಯಕ್ಕೆ ಮಾತ್ರವಲ್ಲ, ಇಡೀ ರಾಷ್ಟ್ರದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ. ಹೀಗಾಗಿ ಉದಯಪುರ ಸಂಕಲ್ಪ ಶಿಬಿರದ ತೀರ್ಮಾನದಂತೆ ಖರ್ಗೆ ನೇತೃತ್ವದಲ್ಲಿ ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

KPCC President DK Shivakumar Talks Over Mallikarjun Kharge gvd

ಬೆಂಗಳೂರು (ನ.07): ‘ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ರಾಜ್ಯಕ್ಕೆ ಮಾತ್ರವಲ್ಲ, ಇಡೀ ರಾಷ್ಟ್ರದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ. ಹೀಗಾಗಿ ಉದಯಪುರ ಸಂಕಲ್ಪ ಶಿಬಿರದ ತೀರ್ಮಾನದಂತೆ ಖರ್ಗೆ ನೇತೃತ್ವದಲ್ಲಿ ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಾನು ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ ಕಾಂಗ್ರೆಸ್ಸಿಗರೆಲ್ಲರೂ ಶಕ್ತಿ ಮೀರಿ ದುಡಿದು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ವಾತಾವರಣ ನಿರ್ಮಿಸಿದ್ದೀರಿ. ಇದನ್ನು ಸಾಧಿಸಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಕ್ತಿ ತುಂಬೋಣ’ ಎಂದರು.

ಜನರ ಸಂಕಲ್ಪದಿಂದ ಕಾಂಗ್ರೆಸ್‌ಗೆ ಅಧಿಕಾರ: ಡಿ.ಕೆ.ಶಿವಕುಮಾರ್‌

ಖರ್ಗೆ ಅವರು ಪಕ್ಷ ನಿಷ್ಠೆಗಾಗಿ ಎಷ್ಟೇ ನೋವು ಇದ್ದರೂ ಒಂದು ದಿನವೂ ಮಾಧ್ಯಮದ ಮುಂದೆ ಹೇಳದೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈಗ ಅವರು ಅಧಿಕಾರ ಹುಡುಕಿಕೊಂಡು ಹೋಗಲಿಲ್ಲ. ಅವರ ತ್ಯಾಗದ ಗುಣವೇ ಆ ಸ್ಥಾನವನ್ನು ಹುಡುಕಿಕೊಂಡು ಬಂದಿದೆ. ಸೋನಿಯಾ ಗಾಂಧಿ ಅವರು ಸಂಸತ್ತಿನಲ್ಲಿ ಮಾತನಾಡುತ್ತಾ ಮಲ್ಲಿಕಾರ್ಜುನ ಖರ್ಗೆ ಅವರು ಬಡವರ ಪರವಾಗಿ ಬಂಡೆಯಂತೆ ಕೆಲಸ ಮಾಡುವ ನಾಯಕ ಎಂದು ಗುಣಗಾನ ಮಾಡಿದ್ದರು. ನೀವೆಲ್ಲಾ ನನ್ನನ್ನು ಕನಕಪುರ ಬಂಡೆ ಎನ್ನುತ್ತೀರಿ. ನಿಜವಾದ ಬಂಡೆ ಖರ್ಗೆ ಅವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

52 ವರ್ಷಗಳ ಬಳಿಕ ರಾಜ್ಯದ ನಾಯಕರೊಬ್ಬರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ತನ್ಮೂಲಕ ಖರ್ಗೆ ಅವರು ಮಹಾತ್ಮ ಗಾಂಧೀಜಿ, ಸುಭಾಷ್‌ ಚಂದ್ರಬೋಸ್‌, ನೆಹರು, ಇಂದಿರಾಗಾಂಧಿ, ನಿಜಲಿಂಗಪ್ಪ ಅಲಂಕರಿಸಿದ್ದ ಸ್ಥಾನದಲ್ಲಿ ಕೂತಿದ್ದಾರೆ. ಮಹಾತ್ಮ ಗಾಂಧಿ ಪ್ರಾರಂಭಿಸಿದ ಸರ್ವೋದಯ ಹೋರಾಟ ಹಾಗೂ ಧ್ವನಿ ಮೇಲೆ ಖರ್ಗೆ ಅವರು ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಸರ್ವೋದಯ ಸಮಾವೇಶ ಎಂದು ಹೆಸರಿಟ್ಟಿದ್ದೇವೆ ಎಂದು ಹೇಳಿದರು.

ರಾಜ್ಯ ಸರ್ಕಾರವನ್ನು ಕಿತ್ತೊಗೆಯಿರಿ: ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯು ಚುನಾವಣೆ ಸಮಯದಲ್ಲಿ 600 ಭರವಸೆ ನೀಡಿದ್ದು ಅದರಲ್ಲಿ 550 ರಷ್ಟನ್ನು ಈಡೇರಿಸಿಲ್ಲ. ನಮ್ಮ ಪ್ರಶ್ನೆಗಳಿಗೂ ಉತ್ತರಿಸಿಲ್ಲ. ಡಬಲ್‌ ಎಂಜಿನ್‌ ಕೊಟ್ಟಭರವಸೆಗಳಲ್ಲಾ ಏನಾಯಿತು? ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ 1 ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಅದನ್ನೂ ಮಾಡಿಲ್ಲ. ಬದಲಿಗೆ 40 ಪರ್ಸೆಂಟ್‌ ಕಮಿಷನ್‌ನಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

ಮೀಸಲು ಸುಗ್ರೀವಾಜ್ಞೆ ‘ಚಾಕೋಲೇಟ್‌’: ಡಿಕೆಶಿ ಕಿಡಿ

ಸಂಕಲ್ಪ ಮಾಡೋಣ- ಸುರ್ಜೆವಾಲಾ: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಮಾತನಾಡಿ, ಬಿಜೆಪಿ ತನ್ನ ಪಕ್ಷದಲ್ಲಿ ಚುನಾವಣೆ ನಡೆಸಲು ಸಾಧ್ಯವೇ ಇಲ್ಲ. ಆದರೆ, ಕಾಂಗ್ರೆಸ್‌ ಪಕ್ಷದಲ್ಲಿ ಸೋನಿಯಾಗಾಂಧಿ ಅವರು ಇದನ್ನು ಮಾಡಿ ತೋರಿಸಿದ್ದಾರೆ. ಕಾರ್ಮಿಕರ ಮಗ, ದಲಿತ ವ್ಯಕ್ತಿಯನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಅಧ್ಯಕ್ಷರನ್ನಾಗಿ ಚುನಾಯಿಸಲಾಗಿದೆ. ಹೀಗಾಗಿ ಅವರು ಬಡವರು, ಶೋಷಿತರ ಪರ ಧ್ವನಿಯಾಗಿ ಹೋರಾಟ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶದ ಮೂಲೆ ಮೂಲೆಯಲ್ಲಿರುವ ಕಾರ್ಯಕರ್ತರಿಗೆ ಖರ್ಗೆ ಅವರ ಮೇಲೆ ನಂಬಿಕೆ ಇದೆ. ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವ ಈ ಸಂದರ್ಭದಲ್ಲಿ ಖರ್ಗೆ ಅವರ ನೇತೃತ್ವದಲ್ಲಿ 40 ಪರ್ಸೆಂಟ್‌ ಕಮಿಷನ್‌ ಸರ್ಕಾರವನ್ನು ಕಿತ್ತು ಹಾಕಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ಹೇಳಿದರು.

Latest Videos
Follow Us:
Download App:
  • android
  • ios