Asianet Suvarna News Asianet Suvarna News

ಜನರ ಸಂಕಲ್ಪದಿಂದ ಕಾಂಗ್ರೆಸ್‌ಗೆ ಅಧಿಕಾರ: ಡಿ.ಕೆ.ಶಿವಕುಮಾರ್‌

ಮಿತಿಮೀರಿದ ಭ್ರಷ್ಟಾಚಾರ, ಜನವಿರೋಧಿ ನೀತಿಯಿಂದ ರಾಜ್ಯದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಜನರು ಬೇಸತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಬೇಕು ಎನ್ನುವ ಸಂಕಲ್ಪವನ್ನು ರಾಜ್ಯದ ಜನತೆ ಮಾಡಿದ್ದಾರೆ. 

Congress is empowered by the will of the people says dk shivakumar gvd
Author
First Published Oct 29, 2022, 1:45 AM IST

ಸಾಗರ (ಅ.29): ಮಿತಿಮೀರಿದ ಭ್ರಷ್ಟಾಚಾರ, ಜನವಿರೋಧಿ ನೀತಿಯಿಂದ ರಾಜ್ಯದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಜನರು ಬೇಸತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಬೇಕು ಎನ್ನುವ ಸಂಕಲ್ಪವನ್ನು ರಾಜ್ಯದ ಜನತೆ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್‌ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ತಾಲೂಕಿನ ಹುತ್ತಾದಿಂಬ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಮಧ್ಯಾಹ್ನ ಪಟ್ಟಣದ ಕಾಗೋಡು ತಿಮ್ಮಪ್ಪರ ಮನೆಯಲ್ಲಿ ಭೋಜನ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, 40 ಪರ್ಸೆಂಟ್‌ ಕಮಿಷನ್‌ ಸರ್ಕಾರವಾಗಿರುವ ಬಿಜೆಪಿಯನ್ನು ಜನರೇ ಕಿತ್ತೊಗೆಯುತ್ತಾರೆ ಎಂದು ಹೇಳಿದರು.

ಭಿನ್ನಾಭಿಪ್ರಾಯ ಸಹಜ: ಜೋಡೋ ಯಾತ್ರೆ ಸಂಚಲನ ಮೂಡಿಸಿರುವ ಹೊತ್ತಲ್ಲಿ ಕಾಂಗ್ರೆಸ್‌ನಲ್ಲಿರುವ ಭಿನ್ನಮತ ಶಮನಕ್ಕೆ ಯಾವ ಪ್ರಯತ್ನ ಮಾಡುವಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಕುಟುಂಬವೊಂದರಲ್ಲಿ ಭಿನ್ನಾಭಿಪ್ರಾಯ ಹೇಗೆ ಸಹಜವೋ ಪಕ್ಷವೊಂದರಲ್ಲಿಯೂ ಭಿನ್ನಾಭಿಪ್ರಾಯ ಸಹಜ. ಇದಕ್ಕೆ ಪಕ್ಷದ ಚೌಕಟ್ಟಿನಲ್ಲಿ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುತ್ತೇವೆ. ಸಂಘಟಿತ, ರಚನಾತ್ಮಕ ಪ್ರಯತ್ನದ ಮೂಲಕ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೀಸಲು ಸುಗ್ರೀವಾಜ್ಞೆ ‘ಚಾಕೋಲೇಟ್‌’: ಡಿಕೆಶಿ ಕಿಡಿ

ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ 4-5 ಪ್ರಬಲ ಅಭ್ಯರ್ಥಿಗಳು ಟಿಕೆಟ್‌ ಆಕಾಂಕ್ಷಿಗಳಿರುವುದು ಅಭ್ಯರ್ಥಿ ಆಯ್ಕೆಗೆ ತೊಡಕಾಗುವುದಿಲ್ಲವೇ?ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ ಪಕ್ಷದಲ್ಲಿ ಪೈಪೋಟಿ ಸಹಜವಾಗಿರುತ್ತದೆ. 10 ಅಭ್ಯರ್ಥಿಗಳು ಪೈಪೋಟಿ ನಡೆಸಿದರೂ ಪರಸ್ಪರ ಚರ್ಚೆ, ಸಮಾಲೋಚನೆ ಮೂಲಕ ಪಕ್ಷದ ಗೆಲುವಿಗೆ ಹಾಗೂ ತತ್ವ ಸಿದ್ಧಾಂತಗಳಿಗೆ ಬೆಲೆ ನೀಡುವ ಪೂರಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.

ಗೆಲುವಿಗಾಗಿ ಸಂಘಟಿತ ಪ್ರಯತ್ನ: ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು ಮಾತನಾಡಿ, ಪಕ್ಷದ ಕಾರ್ಯಕರ್ತನೊಬ್ಬನ ಸಾವಿಗೆ ಸಾಂತ್ವನ ಹೇಳಲು ಕೆಪಿಸಿಸಿ ಅಧ್ಯಕ್ಷರು ಬಂದಿರುವುದು ಹೆಮ್ಮೆಯ ಸಂಗತಿ. ಇದು ಕಾರ್ಯಕರ್ತರ ಬಗ್ಗೆ ಪಕ್ಷದ ಕಳಕಳಿಯ ತೋರಿಸುತ್ತದೆ ಎಂದರು. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವ ನಿಟ್ಟಿನಲ್ಲಿ ಪಕ್ಷವು ಸಂಘಟಿತ ಪ್ರಯತ್ನ ನಡೆಸುತ್ತದೆ. 

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಆಯಾ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಪಟ್ಟಿಮಾಡಲಾಗಿದೆ. ಪ್ರಣಾಳಿಕೆಯಲ್ಲಿ ಈ ಅಂಶಗಳನ್ನು ಸೇರಿಸಲಾಗುವುದು. ಖರ್ಗೆಯವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ರಾಜ್ಯ ಕಾಂಗ್ರೆಸ್ಸಿಗೆ ಆನೆಬಲ ತಂದುಕೊಟ್ಟಿದೆ. ಚುನಾವಣೆಯಲ್ಲಿ ಖರ್ಗೆಯವರ ಅನುಭವವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ ಎಂದು ಹೇಳಿದರು. ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಕಾಂಗ್ರೆಸ್‌ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸುಂದರೇಶ್‌ ಮುಂತಾದವರು ಉಪಸ್ಥಿತರಿದ್ದರು.

ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆ ಯಶಸ್ವಿ: ಡಿ.ಕೆ. ಶಿವಕುಮಾರ್‌

ಪಕ್ಷದ ಕಾರ್ಯಕರ್ತ ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವುದು ನೋವು ತಂದಿದೆ. ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿಯವರ ಸೂಚನೆ ಮೇರೆಗೆ ಮೃತ ರಮೇಶ್‌ ಕುಟುಂಬಕ್ಕೆ ಪರಿಹಾರದ ಮೂಲಕ ಖುದ್ದು ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದೇನೆ.
ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Follow Us:
Download App:
  • android
  • ios