Asianet Suvarna News Asianet Suvarna News

ಭಾರತ್‌ ಜೋಡೋ ಯಾತ್ರೆಗೆ ಎಲ್ಲರಿಗೂ ಅವಕಾಶ: ಡಿಕೆಶಿ

ಇಡೀ ದೇಶದ ಒಳಿತಿಗಾಗಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ಭಾರತ್‌ ಜೋಡೋ ಐಕ್ಯತಾ ಯಾತ್ರೆ’ಯಲ್ಲಿ ಪಕ್ಷಾತೀತವಾಗಿ ಎಲ್ಲ ಸಮಾಜ, ಸಮುದಾಯ, ವರ್ಗ ಹಾಗೂ ಕ್ಷೇತ್ರಗಳ ಜನರೂ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

kpcc president dk shivakumar talks over bharat jodo yatra gvd
Author
First Published Sep 2, 2022, 1:28 AM IST

ಬೆಂಗಳೂರು (ಸೆ.02): ಇಡೀ ದೇಶದ ಒಳಿತಿಗಾಗಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ಭಾರತ್‌ ಜೋಡೋ ಐಕ್ಯತಾ ಯಾತ್ರೆ’ಯಲ್ಲಿ ಪಕ್ಷಾತೀತವಾಗಿ ಎಲ್ಲ ಸಮಾಜ, ಸಮುದಾಯ, ವರ್ಗ ಹಾಗೂ ಕ್ಷೇತ್ರಗಳ ಜನರೂ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಭಾರತ್‌ ಜೋಡೋಯಾತ್ರೆ ಕುರಿತು ಪಕ್ಷದ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿ ಅವರ ಮುಂದಾಳತ್ವದಲ್ಲಿ ದೇಶದ ಉದ್ದಗಲಕ್ಕೂ 3500 ಕಿ.ಮೀ. ಯಾತ್ರೆ ನಡೆಯಲಿದೆ. 

ಇದರಲ್ಲಿ ಕರ್ನಾಟಕದಲ್ಲಿ ಸೆ.30ರಿಂದ ಅ.29ರವರೆಗೆ 21 ದಿನಗಳ ಕಾಲ 511 ಕಿ.ಮೀ ದೂರ ಯಾತ್ರೆ ಸಾಗಲಿದೆ. ದೇಶವನ್ನು ಒಗ್ಗೂಡಿಸಲು ರೂಪಿಸಿರುವ ಈ ಯಾತ್ರೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಲು ಅವಕಾಶವಿದೆ. ಕನ್ನಡಪರ ಸಂಘಟನೆಗಳು, ಚಿತ್ರರಂಗ, ಸಾಹಿತ್ಯ, ರಂಗಭೂಮಿ, ರೈತರು, ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಸೇರಿ ಎಲ್ಲ ಸಮುದಾಯ, ವರ್ಗ, ಕ್ಷೇತ್ರಗಳ ಜನರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಮತ್ತೋರ್ವ ಹಿರಿಯ ನಾಯಕ ಕಾಂಗ್ರೆಸ್‌ಗೆ ಗುಡ್‌ ಬೈ: ಸಿದ್ದು, ಡಿಕೆಶಿ ಭೇಟಿಯಾಗಿ ರಾಜೀನಾಮೆ ಘೋಷಣೆ

ಇನ್ನು, ಯಾತ್ರೆ ಬಗ್ಗೆ ಈಗಾಗಲೇ ಪಕ್ಷದ ಪದಾಧಿಕಾರಿಗಳು ಹಾಗೂ ಶಾಸಕರ ಜೊತೆ ಎಐಸಿಸಿ ಪ್ರಧಾನ ಕಾಐರ್‍ದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಸಭೆ ನಡೆಸಿ ಚರ್ಚಿಸಿದ್ದಾರೆ. ರಾಜ್ಯದ ಪ್ರತಿಯೊಂದು ಬ್ಲಾಕ್‌ನಿಂದ ಕೂಡ ನಮ್ಮ ಕಾರ್ಯಕರ್ತರನ್ನು ಕರೆತರಲು ತೀರ್ಮಾನಿಸಲಾಗಿದೆ. ಇದರ ಜವಾಬ್ದಾರಿಯನ್ನು ಆಯಾ ಕ್ಷೇತ್ರದ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್‌ ಮುಖಂಡರುಗಳಿಗೆ ವಹಿಸಲಾಗಿದೆ ಎಂದರು.

ಭಾರತ್ ಜೋಡೋ ಯಾತ್ರೆ ಲೋಗೋ ಬಿಡುಗಡೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀಜಿಯವರ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಯಾತ್ರೆಯ ಲೋಗೊ ಬಿಡುಗಡೆ ಮಾಡಿದರು. ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಸಲೀಂ ಅಹಮ್ಮದ್, ರಾಮಲಿಂಗಾ ರೆಡ್ಡಿ ಸೇರಿದಂತೆ ಮತ್ತಿತರ ನಾಯಕರ ಉಪಸ್ಥಿತಿಯಲ್ಲಿ ಭಾರತ್ ಜೋಡೋ ಯಾತ್ರೆಯ ಲೋಗೋ ಬಿಡುಗಡೆಗೊಳಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಭಾರತ ಐಕ್ಯತೆ ಯಾತ್ರೆ ಗುಂಡ್ಲುಪೇಟೆಯಿಂದ ಪ್ರಾರಂಭ ಆಗಲಿದೆ. 21 ದಿನ ಕರ್ನಾಟಕದಲ್ಲಿ ರೂಟ್ ಫಿಕ್ಸ್ ಮಾಡಿದ್ದೇವೆ. ಪ್ರತಿದಿನ‌ 25 ಕಿಮೀ ನಂತೆ ಪಾದಯಾತ್ರೆ ನಡೆಯುತ್ತದೆ. ಭಾರತವನ್ನು ಒಗ್ಗೂಡಿಸುವ ಐಕ್ಯತೆ ಮಾಡುವ ಕೆಲಸ ಮಾಡುತ್ತೇವೆ ಎಂದರು.ಇದು ಕೇವಲ ಪಕ್ಷದ ಕಾರ್ಯಕ್ರಮ ಅಲ್ಲ, ಭಾರತವನ್ನು ಓಗ್ಗೂಡಿಸುವ ಕೆಲಸದಲ್ಲಿ ಯಾರು ಬೇಕಾದರೂ ಹೆಜ್ಜೆ ಹಾಕಬಹುದು. ಬಳ್ಳಾರಿ ಮೇಕೆದಾಟು ಸ್ವಾತಂತ್ರ್ಯ ನಡಿಗೆ ಬಳಿಕ ಇದು ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.

ಪ್ರವಾಹ: ಬೆಂಗಳೂರು-ಮೈಸೂರು ಹೆದ್ದಾರಿ ಪ್ಲಾನ್‌ ಮಾಡಿದವನಿಗೆ ಪ್ರಶಸ್ತಿ ಕೊಡಿ, ಡಿಕೆಶಿ

ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗ್ತಿದ್ದಾರೆ. ಯುವಕರಿಗೆ ಉದ್ಯೋಗ ಸಿಗದೇ ಮಾನಸಿಕ ಒತ್ತಡ ಆಗ್ತಿದೆ. ಖಾಸಗಿಯಾಗಿ ಅಥವಾ ಸರ್ಕಾರಿ ಉದ್ಯೋಗ‌ ನೀಡಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆ ಆಗಬೇಕು. ರಾಜ್ಯದಲ್ಲಿ ಇರುವ ಪ್ರತಿ ರೈತನ ಬದುಕು ಹಸನಾಗಬೇಕು. ಎಲ್ಲರಿಗೂ ಉತ್ತಮವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. ಹಸ್ತದಲ್ಲಿ 5 ಬೆರಳುಗಳು ಇರುವ ರೀತಿ ಪಂಚಸೂತ್ರದ ಮೂಲಕ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡಬೇಕಿದೆ. ಭಾರತ್ ಜೋಡೋ ಯಾತ್ರೆ ಹೊಸ ಟ್ರೆಂಡ್ ಸೆಟ್ ಮಾಡುತ್ತದೆ ಎಂಬ ನಂಬಿಕೆ ಇದೆ. ಇಡೀ ದೇಶಕ್ಕೆ ಈ ಯಾತ್ರೆ ಮಾದರಿಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

Follow Us:
Download App:
  • android
  • ios