‘ಮರಕ್ಕೆ ಬೇರು ಎಷ್ಟು ಮುಖ್ಯವೋ, ಅದೇ ರೀತಿ ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ದೇವರು ಎರಡು ಆಯ್ಕೆ ನೀಡಿದ್ದಾನೆ. ಕೊಟ್ಟು ಹೋಗುವುದು, ಬಿಟ್ಟು ಹೋಗುವುದು. ತಾಳ್ಮೆ ಇದ್ದವರು ಜಗತ್ತನ್ನೇ ಗೆಲ್ಲುತ್ತಾರೆ’ ಎಂದು ಡಿ.ಕೆ.ಶಿವಕುಮಾರ್‌ ನುಡಿದಿದ್ದಾರೆ.

ವಿಜಯಪುರ : ‘ಮರಕ್ಕೆ ಬೇರು ಎಷ್ಟು ಮುಖ್ಯವೋ, ಅದೇ ರೀತಿ ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ದೇವರು ನಮಗೆ ಎರಡು ಆಯ್ಕೆ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಇನ್ನೊಂದು ಬಿಟ್ಟು ಹೋಗುವುದು. ತಾಳ್ಮೆ ಇದ್ದವರು ಜಗತ್ತನ್ನೇ ಗೆಲ್ಲುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ

ವಿಜಯಪುರದಲ್ಲಿ ಶುಕ್ರವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪಾಲ್ಗೊಂಡು ಸಂದರ್ಭೋಚಿತವಾಗಿ ಅವರಾಡಿದ ಮಾತುಗಳು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನೇ ಉದ್ದೇಶಿಸಿ ಹೇಳಿದಂತಿತ್ತು. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಒಪ್ಪಂದ ಆಗಿದೆ ಎನ್ನಲಾಗುತ್ತಿದ್ದು, ಈ ವಿಚಾರ ಮುನ್ನೆಲೆಗೆ ಬಂದಿರುವ ಈ ವೇಳೆಯಲ್ಲಿ ಡಿಸಿಎಂ ಅವರ ಈ ಮಾರ್ಮಿಕ ನುಡಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಡಿಕೆಶಿ, ‘ನಿಂಬೆಗಿಂತ ಹುಳಿ‌ ಇಲ್ಲ, ದುಂಬಿಗಿಂತ ಕಪ್ಪಿಲ್ಲ, ಶಂಭುವಿನಿಗಿಂತ ದೇವರಿಲ್ಲ. ನಂಬಿಕೆಗಿಂತ ಶ್ರೇಷ್ಠ ಗುಣ ಇಲ್ಲ’ ಎಂಬ ತ್ರಿಪದಿ ಸಾಲನ್ನು ಉಲ್ಲೇಖಿಸಿದರು. ‘ಶ್ರೇಷ್ಠ ಹುಳಿ ಲಿಂಬೆ ಹುಳಿ, ಲಿಂಬೆ ಪೂಜೆಗೆ, ದೃಷ್ಟಿ ತೆಗೆಯಲು ಉಪಯೋಗ. ನಂಬಿಕೆಗಿಂತ ದೊಡ್ಡ ಗುಣ ಇಲ್ಲ’ ಎಂದು ನಂಬಿಕೆಯ ಕುರಿತು ಮಾತನಾಡಿದರು. ‘ಬುದ್ಧಿ ಇದ್ದರೆ ಯುದ್ಧ ಗೆಲ್ತಾರೆ, ಗುಣ ಇದ್ದರೆ ಹೃದಯ ಗೆಲ್ತಾರೆ. ತಾಳ್ಮೆ ಇದ್ದರೆ ಜಗತ್ತನ್ನೇ ಗೆಲ್ತಾರೆ’ ಎಂದು ಮಾರ್ಮಿಕವಾಗಿ ಮಾತನಾಡಿದರು.

ಡಿಕೆಶಿ ನುಡಿ

- ಬುದ್ಧಿ ಇದ್ದರೆ ಯುದ್ಧ ಗೆಲ್ತಾರೆ, ಗುಣ ಇದ್ದರೆ ಹೃದಯ ಗೆಲ್ತಾರೆ. ತಾಳ್ಮೆ ಇದ್ದರೆ ಜಗತ್ತನ್ನೇ ಗೆಲ್ತಾರೆ

- ನಿಂಬೆಗಿಂತ ಹುಳಿ‌ ಇಲ್ಲ, ದುಂಬಿಗಿಂತ ಕಪ್ಪಿಲ್ಲ, ಶಂಭುವಿನಿಗಿಂತ ದೇವರಿಲ್ಲ. ನಂಬಿಕೆಗಿಂತ ಶ್ರೇಷ್ಠ ಗುಣ ಇಲ್ಲ

- ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ

- ದೇವರು ನಮಗೆ ಎರಡು ಆಯ್ಕೆ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಇನ್ನೊಂದು ಬಿಟ್ಟು ಹೋಗುವುದು