ಪ್ರವಾಹ: ಬೆಂಗಳೂರು-ಮೈಸೂರು ಹೆದ್ದಾರಿ ಪ್ಲಾನ್ ಮಾಡಿದವನಿಗೆ ಪ್ರಶಸ್ತಿ ಕೊಡಿ, ಡಿಕೆಶಿ
ರಸ್ತೆ ಮಾಡುವಾಗ ಪ್ರಜ್ಞೆ ಇರಬೇಕು, ಹೆದ್ದಾರಿ ಸ್ಥಿತಿಯೇ ಹೀಗೆ. ಹಳ್ಳಿ ರಸ್ತೆ ಗತಿ ಏನು?: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು(ಆ.31): ಮಳೆ ನೀರಿನಲ್ಲಿ ಮುಳುಗಿದ ಬೆಂಗಳೂರು- ಮೈಸೂರು ಹೆದ್ದಾರಿಯ ಪ್ಲಾನ್ ಮಾಡಿರುವ ಎಂಜಿನಿಯರ್‌ಗಳಿಗೆ ಮುಖ್ಯಮಂತ್ರಿಯವರು ಪದ್ಮಭೂಷಣ ಅಥವಾ ಬೇರೆ ಪ್ರಶಸ್ತಿ ಕೊಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ನಿರ್ಮಾಣ ಎಂದರೆ ಜಲ್ಲಿ, ಟಾರು ಅಥವಾ ಕಾಂಕ್ರೀಟ್ ಹಾಕಿ ಹಣ ಪಡೆಯುವುದಲ್ಲ. ಮಳೆ ಬಂದಾಗ ನೀರು ಹೇಗೆ ಹೋಗಬೇಕು, ಎಲ್ಲಿ ಕಾಲುವೆ ತೆಗೆಯಬೇಕು ಎಂದು ಯೋಜನೆ ರೂಪಿಸುವುದು ಸರ್ಕಾರ ಹಾಗೂ ಎಂಜಿನಿಯರ್‌ಗಳ ಕರ್ತವ್ಯ. ರಾಷ್ಟ್ರೀಯ ಹೆದ್ದಾರಿ ಮಾಡುವಾಗ ಎತ್ತರ ಪ್ರದೇಶದಲ್ಲಿ ನೀರು ಯಾವ ರೀತಿ ಹೋಗಬೇಕು ಎಂಬುದರ ಬಗ್ಗೆ ಸಾಮಾನ್ಯ ಪ್ರಜ್ಞೆ ಇಟ್ಟುಕೊಂಡು ಯೋಜನೆ ರೂಪಿಸಬೇಕು ಎಂದು ವಾಗ್ದಾಳಿ ನಡೆಸಿದರು.
ವಾಹನ ಓಡಾಡೋಕೆ ರಸ್ತೆ ಮಾಡಿ ಅಂದ್ರೆ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದ್ದಾರೆ: ಪ್ರತಾಪ್ ಸಿಂಹ ವಿರುದ್ಧ ಎಚ್‌ಡಿಕೆ ಕಿಡಿ
ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಹೀಗಾದರೆ ಹಳ್ಳಿ ರಸ್ತೆಗಳ ಪರಿಸ್ಥಿತಿ ಏನಾಗಬೇಕು? ಒಬ್ಬಿಬ್ಬರ ಪ್ರಾಣ ಹಾನಿಯಾಗಿರುವ ಮಾಹಿತಿ ಬಂದಿದ್ದು, ರಾಮನಗರ, ಚನ್ನಪಟ್ಟಣ, ಕನಕಪುರದ ಕೆಲವು ಭಾಗಗಳಿಗೆ ಹೋಗಿ ಪರಿಸ್ಥಿತಿ ಪರಿಶೀಲಿಸುತ್ತೇನೆ. ಅವರಿಗೆ ಧೈರ್ಯ ತುಂಬುತ್ತೇನೆ. ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ. ಪ್ರಸ್ತುತ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಜಾಗ ಈಗ ಕೆರೆಯಂತಾಗಿದ್ದು, ಮುಖ್ಯಮಂತ್ರಿಗಳು ಕೂಡಲೇ ಈ ವಿಚಾರದಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರವಾಹ ಪರಿಸ್ಥಿತಿಯಲ್ಲಿ ಆಡಳಿತ ವ್ಯವಸ್ಥೆ ಚುರುಕಾಗಿ ಕೆಲಸ ಮಾಡಬೇಕು. ಒಂದು ವಾರ ಅಥವಾ 10 ದಿನಗಳಲ್ಲಿ ಪರಿಹಾರ ನೀಡುತ್ತೇನೆ ಎಂದು ಹೇಳುವುದು ಸರಿಯಲ್ಲ. ತಕ್ಷಣ ಸ್ಥಳದಲ್ಲೇ ಚೆಕ್ ಮೂಲಕ ಪರಿಹಾರ ನೀಡಲು ಸಮಸ್ಯೆ ಏನು? ಹಾನಿಗೆ ಒಳಗಾದವರನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು. ಅತಿಯಾದ ಮಳೆಗೆ ಆಸ್ತಿಪಾಸ್ತಿಗಳು ನಷ್ಟವಾಗುತ್ತಿವೆ. ಹೀಗಾಗಿ ಸರ್ಕಾರ ಸಂತ್ರಸ್ತರ ನೆರವಿಗೆ ನಿಲ್ಲಬೇಕು. ತಗ್ಗು ಪ್ರದೇಶದಲ್ಲಿ ಇರುವ ಜನರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ರೈತರ ಪಂಪ್‌ಸೆಟ್‌ಗಾಗಿ ಕಾಂಗ್ರೆಸ್ ಸರ್ಕಾರ 12 ರಿಂದ 15 ಸಾವಿರ ಕೋಟಿ ರು. ನೀಡಿತ್ತು. ಇನ್ನು ನಮ್ಮ ಸರ್ಕಾರ ವಿದ್ಯುತ್ ಕಂಪನಿಗಳಿಂದ ಕರೆಂಟ್ ಖರೀದಿ ಮಾಡಿ ಅದನ್ನು ಕಡಿಮೆ ಬೆಲೆಗೆ ರೈತರಿಗೆ ನೀಡಿತ್ತು. ಅಣೆಕಟ್ಟುಗಳು ತುಂಬಿದಾಗ ಕಡಿಮೆ ದರದಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಬಹುದು. ಒಂದು ದಿನ ಮಳೆ ಹೆಚ್ಚಾಗಿ ಸುರಿದರೆ ರೈತ ಪಂಪ್ ಸೆಟ್ ಆನ್ ಮಾಡದೆ, ಜನ ಎಸಿ ಬಳಸದೆ ಇದ್ದರೆ ಹಾಗೂ ಇತರ ಮಾರ್ಗಗಳಿಂದ ಸರ್ಕಾರದ ಬೊಕ್ಕಸಕ್ಕೆ 1 ಸಾವಿರ ಕೋಟಿ ರು. ಉಳಿಯುತ್ತದೆ. ಹೀಗಾಗಿ ಮಳೆಯಿಂದ ಈ ಎಲ್ಲಾ ಲಾಭದಾಯಕ ಅಂಶಗಳು ಇವೆ ಎಂದರು.
ರಾಮನಗರ ಮಳೆ ಹಾನಿ: ಡಿಕೆಶಿ ಪರಿಶೀಲನೆ
ಚನ್ನಪಟ್ಟಣ/ರಾಮನಗರ: ಹಿಂದೆಂದೂ ಕಂಡರಿಯದ ನೆರೆಹಾವಳಿ ಜಿಲ್ಲೆ ಕಂಡಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಪ್ರವಾಹದ ಭೀತಿ: ಕೆರೆಯಂತಾದ ಬೆಂಗಳೂರು-ಮೈಸೂರು ಹೆದ್ದಾರಿ
ಮಂಗಳವಾರ ಜಿಲ್ಲೆಯ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯಿಂದ ಹಾನಿಯನ್ನು ಸ್ವತಃ ಮುಖ್ಯಮಂತ್ರಿಗಳೇ ಬಂದು ಕಣ್ಣಾರೆ ಕಂಡಿದ್ದಾರೆ. ಆದ್ದರಿಂದ ಸಂತ್ರಸ್ತರಿಗೆ ಪರಿಹಾರ ನೀಡಲು ವಿಳಂಬ ಮಾಡಬಾರದು.ಉತ್ತರ ಕರ್ನಾಟಕದಲ್ಲಿ ಯಾವ ರೀತಿ ಪರಿಹಾರ ಕೊಟ್ಟ ರೀತಿ ಪರಿಹಾರ ಕೊಡಬೇಕು. ಹಾನಿಯ ಕುರಿತು ಜಿಲ್ಲಾಕಾರಿಗಳೊಂದಿಗೂ ಮಾತನಾಡಿದ್ದೇನೆ ಎಂದರು.
ಮಳೆಯಿಂದ ಆಗಿರುವ ಸಮಸ್ಯೆಯನ್ನು ಸರ್ಕಾರ ಸರಿಯಾಗಿ ನಿಭಾಯಿಸಬೇಕು. ಏನು ನಷ್ಟಆಗಿದೆ ಇದಕ್ಕೆ ಸರಿಯಾಗಿ ಪ್ಲಾನ್ ಮಾಡಬೇಕು. ನೀರು ಸರಾಗವಾಗಿ ಹರಿಯಲು ಕಾಲುವೆ ನಿರ್ಮಾಣ ಮಾಡಬೇಕು. ಮನೆಗಳನ್ನು ಎತ್ತರದಲ್ಲಿ ಕಟ್ಟಬೇಕು. ಜನರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಆದರೆ ಈ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.