150 ಸೀಟು ಗೆಲ್ಲಲು ರಾಗಾ ಪಾದಯಾತ್ರೆ ಉತ್ಸಾಹ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಡೆಸುತ್ತಿರುವ ಐತಿಹಾಸಿಕ ಭಾರತ್ ಜೋಡೋ ಪಾದಯಾತ್ರೆ ಭಾನುವಾರ ರಾಜ್ಯದಲ್ಲಿ ಮುಕ್ತಾಯಗೊಳ್ಳಲಿದೆ. ಬದಲಾವಣೆಯ ಹೆಜ್ಜೆಯಾಗಿರುವ ಈ ಯಾತ್ರೆಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಮೂಡಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಯಚೂರು (ಅ.23): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಡೆಸುತ್ತಿರುವ ಐತಿಹಾಸಿಕ ಭಾರತ್ ಜೋಡೋ ಪಾದಯಾತ್ರೆ ಭಾನುವಾರ ರಾಜ್ಯದಲ್ಲಿ ಮುಕ್ತಾಯಗೊಳ್ಳಲಿದೆ. ಬದಲಾವಣೆಯ ಹೆಜ್ಜೆಯಾಗಿರುವ ಈ ಯಾತ್ರೆಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಮೂಡಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಮಾತನಾಡಿದ ಅವರು, ಯಾತ್ರೆಗೆ ಅಭೂತಪೂರ್ವ ಜನಬೆಂಬಲ ದೊರಕಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಮಹಿಳೆಯರು, ರೈತರು ಮತ್ತು ಮಕ್ಕಳು ಭಾಗಿಯಾಗಿದ್ದಾರೆ ಎಂದರು. ನಾವು ಹಾಕಿದ ರಸ್ತೆ ಮೇಲೆ ಕಾಂಗ್ರೆಸ್ ಯಾತ್ರೆ ಮಾಡುತ್ತಿದೆ ಎಂಬ ಬಿಜೆಪಿಯವರ ಲೇವಡಿ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕೊಟ್ಟಪ್ರಜಾಪ್ರಭುತ್ವ ವ್ಯವಸ್ಥೆಯಡಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್, ದೇಶದ ಜನರಿಗೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜವನ್ನು ಕೊಟ್ಟಿದೆ ಎಂದು ತಿರುಗೇಟು ನೀಡಿದರು.
Bharat Jodo Yatra: ರಾಹುಲ್ ಗಾಂಧಿ ಪಾದಯಾತ್ರೆಗೆ ಇಂದು ರಾಜ್ಯದಲ್ಲಿ ತೆರೆ
ಯಾತ್ರೆಯಲ್ಲಿ ಜನರು ಹೇಳಿಕೊಂಡಿರುವ ಸಮಸ್ಯೆ, ನೋವುಗಳಿಗೆ ಪರಿಹಾರ ಕಲ್ಪಿಸಲು ಯೋಜನೆ ರೂಪಿಸಿ ಪ್ರಣಾಳಿಕೆಯಲ್ಲಿ ಅವುಗಳನ್ನು ಸೇರಿಸಲಾಗುವುದು. ಇಂದು ರೈತರು, ಜನ ಸಾಮಾನ್ಯರು, ಯುವಕರು ಜೀವನ ಮಾಡುವುದು ಕಷ್ಟವಾಗಿದೆ. ಯುವಕರಿಗೆ ಉದ್ಯೋಗ ಇಲ್ಲ. ರೈತರಿಗೆ ಬೆಂಬಲ ಬೆಲೆ ಇಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಯಾತ್ರೆ ವೇಳೆ ಹೆಚ್ಚಿನ ಚರ್ಚೆ ಆಗಿದೆ. ರಾಜ್ಯದಲ್ಲಿ ಸಾಗಿದ ಭಾರತ್ ಜೋಡೋ ಯಾತ್ರೆ ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಜೋಡೋ ಜೋಷ್: ಜೋಡೋ ಯಾತ್ರೆ ಎರಡನೇ ದಿನವಾದ ಶನಿವಾರ ಬೆಳಗ್ಗೆ ರಾಯಚೂರು ತಾಲೂಕಿನ ಯರಗೇರಾ ಗ್ರಾಮದಿಂದ ಅರಂಭಗೊಂಡಿತು. ರಾಹುಲ್ ಗಾಂಧಿ ಸೇರಿದಂತೆ ಮುಖಂಡರು, ಯಾತ್ರಿಗರು ಜೋಷ್‌ನಲ್ಲಿ ಹೆಜ್ಜೆಗಳನ್ನಿಟ್ಟರು. 167 ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಸಾಗಿದ ಯಾತ್ರೆಯು ತಾಲೂಕಿನ ಮಿಟ್ಟಿಮಲ್ಕಾಪುರ, ತುಂಟಾಪುರ, ಮಲಿಯಾಬಾದ್ ಹೆದ್ದಾರಿಯಲ್ಲಿ ಸಾಗಿ ರಾಯಚೂರು ನಗರದ ಹೊರವಲಯದ ಬೃಂದಾವನ ಹೋಟೆಲ್‌ಗೆ ಬಂದು ತಲುಪಿತು. ಶುಕ್ರವಾರ ಆಂಧ್ರ ದಾಟಿ ಕರ್ನಾಟಕ ರಾಜ್ಯಕ್ಕೆ ಆಗಮಿಸಿದ ಯಾತ್ರೆಯನ್ನು ಸ್ವಾಗತಿಸಲು ಜನಸ್ತೋಮವೇ ಹರಿದುಬಂತಿತ್ತು. ಅದೇ ಉತ್ಸಾಹವು ಎರಡನೇ ದಿನವೂ ಕಂಡುಬಂದಿತು. ಯಾತ್ರೆಯುದ್ದಕ್ಕು ರಾಹುಲ್ ಗಾಂಧಿಯನ್ನು ನೋಡಲು ಸಾವಿರಾರು ಸಂಖ್ಯೆಯ ಜನರು ಮುಗಿಬೀಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು. ಯಾತ್ರೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ರೈತರು, ಕೃಷಿ- ಕೂಲಿ ಕಾರ್ಮಿಕರು, ಮಹಿಳೆಯರು, ಯುವಕರು, ಮುಖಂಡರು ಹಾಗೂ ಮಾಜಿ ಸೈನಿಕರು ರಾಹುಲ್ ಗಾಂಧಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು.
ರಾಗ ಓಟ: ಮಿಟ್ಟಿಮಲ್ಕಾಪುರ-ಮಲಿಯಾದ್ ಮಧ್ಯದಲ್ಲಿ ಸಾಗಿದ್ದ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಏಕಾಏಕಿ ಓಟವನ್ನು ಆರಂಭಿಸುತ್ತಿದ್ದಂತೆ ಜೊತೆಗಿದ್ದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಪಕ್ಷದ ಮುಖಂಡರು, ಯಾತ್ರಿಗಳು, ಪೊಲೀಸರು, ವಿವಿಧ ಅಧಿಕಾರಿಗಳು, ಜನಸಾಮಾನ್ಯರು ಅವರೊಂದಿಗೆ ಓಡಿದರು. ಪಾದಯಾತ್ರೆಯೊಂದಿಗೆ ಸೇರಿಕೊಂಡು ರಾಯಚೂರು ಜಿಲ್ಲೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಸದಸ್ಯರು ರಾಹುಲ್‌ಗಾಂಧಿ ಅವರಿಗೆ ರಾಷ್ಟ್ರಧ್ವಜವನ್ನು ನೀಡಿ ಓಟದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ರಾಹುಲ್ ಗಾಂಧಿ ಓಟವನ್ನು ಕಂಡು ಜನರು ಕೇಕೆ-ಸಿಳ್ಳೆಗಳ ಮುಖಾಂತರ ಸಂಭ್ರಮವನ್ನು ವ್ಯಕ್ತಪಡಿಸಿದರು. ಈ ಓಟವು ಪಾದಯಾತ್ರೆಯ ಉತ್ಸಾಹವನ್ನು ಇಮ್ಮಡಿಸಿತು.
ಉಪಹಾರ ಸೇವನೆ: ಇದೇ ವೇಳೆ ರಾಹುಲ್ ಗಾಂಧಿ ಅವರು ಮಿಟ್ಟಿಮಲ್ಕಾಪುರ ಗ್ರಾಮದ ನಿವಾಸಿ ರೈತ ಹನುಮೇಶ ಅವರ ಮನೆಗೆ ತೆರಳಿ ಎರಡು ಇಡ್ಲಿ, ಒಂದು ವಡಾ ಹಾಗೂ ಚಹ ಸೇವನೆ ಮಾಡಿ ಕೆಲ ವೇಳೆ ಕುಟುಂಬಸ್ಥರನ್ನು ಮಾತನಾಡಿಸಿದರು. ಅಲ್ಲಿಂದ ಮತ್ತೆ ಪ್ರಾರಂಭಗೊಂಡ ಯಾತ್ರೆಯಲ್ಲಿ ರೈತರು, ಮಹಿಳೆಯರು, ಯುವಕರು, ಮಾಜಿ ಸೈನಿಕರು ತಮ್ಮ ತಮ್ಮ ಅನುಭವ, ಸಮಸ್ಯೆಗಳನ್ನು ರಾಹುಲ್ ಗಾಂಧಿ ಅವರ ಮುಂದೆ ಹಂಚಿಕೊಂಡು ಭಾವುಕರಾದರು. ಯಾತ್ರೆಯು ನಗರ ಬೃಂದಾವನ ಹೋಟೆಲ್‌ಗೆ ಬಂದು ಸೇರಿ ವಿಶ್ರಾಂತಿ ಪಡೆದು ಬಳಿಕ ಉದ್ಯೋಗ ಖಾತ್ರಿ ಕೂಲಿಕಾರ್ಮಿಕರು, ಅಲ್ಪಸಂಖ್ಯಾತರೊಂದಿಗೆ ರಾಗಾ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ರಾಜಕೀಯ ಜೀವನಕ್ಕೆ ಗುಡ್‌ಬೈ ಹೇಳುವ ಸುಳಿವು ನೀಡಿದ ಡಿಕೆಶಿ
ಬ್ಯಾಂಡ್ ಬಾರಿಸಿದ ಡಿಕೆಶಿ, ತಮಟೆ ಹೊಡೆದ ಕೃಷ್ಣ ಭೈರೇಗೌಡ: ರಾಯಚೂರಿನಲ್ಲಿ ಸಾಗಿದ ಎರಡನೇ ದಿನದ ಜೋಡೋ ಪಾದಯಾತ್ರೆಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬ್ಯಾಂಡ್ ಬಾರಿಸುವುದರ ಮೂಲಕ ಎಲ್ಲರ ಗಮನ ಸೆಳೆದರು. ರಾಹುಲ್ ಗಾಂಧಿ ಅವರಿಗಿಂತ ಮುಂಚೆ ಪಕ್ಷದ ಬ್ಯಾಂಡ್ ಯಾತ್ರೆಯನ್ನು ಮುನ್ನಡೆಸುತ್ತದೆ. ಈ ವೇಳೆ ಬ್ಯಾಂಡ್ ಬಳಿಗೆ ಬಂದ ಡಿಕೆಶಿ ಸುಮಾರು 3 ಕಿ.ಮೀ. ವರೆಗೂ ನುರಿತ ಕಲಾವಿದರ ಹಾಗೆ ಬ್ಯಾಂಡ್‌ನ್ನು ಲಯಬದ್ಧವಾಗಿ ಭಾರಿಸಿದರು. ಇದೇ ವೇಳೆ ಕೃಷ್ಣ ಭೈರೇಗೌಡ ಅವರು ಸಹ ತಮಟೆಯನ್ನು ಹೊಡೆಯುತ್ತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಮಾಜಿ ಸೈನಿಕರು ನೀಡಿದ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದ ರಾಹುಲ್ ಗಾಂಧಿ ಅವರು ಯಾತ್ರೆಯಲ್ಲಿ ಓಡುತ್ತಿದ್ದಂತೆ ದೇಶಭಕ್ತಿಯ ಘೋಷಣೆಗಳನ್ನು ಮೊಳಗಿಸಿ ಹುರಿದುಂಬಿಸಲಾಯಿತು.