ಬೆಂಗಳೂರು, (ಮೇ.02): ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ತಮ್ಮ ಸ್ವಂತ ಊರಿಗೆ ಮರಳಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ನಿಲ್ದಾಣಕ್ಕೆ ಶನಿವಾರ ಸಾವಿರಾರು ಪ್ರಯಾಣಿಕರು ಆಗಮಿಸಿದ್ದು, ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಬೆಳಗ್ಗೆಯಿಂದ ಊಟ ತಿಂಡಿ ಇಲ್ಲದೇ ಇಲ್ಲದೇ ಇವರೆಲ್ಲರೂ ಪರದಾಡಿದ್ದಾರೆ.

ಈ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ಖುದ್ದು ಸ್ಥಳಕ್ಕೆ ಬಂದು ಪರಿಸ್ಥಿತಿ ವೀಕ್ಷಿಸಿದರು. ಬೆಳಗ್ಗೆಯಿಂದ ಊಟ ತಿಂಡಿ ಇಲ್ಲದೇ ಬಸ್ ಗಾಗಿ ಕಾಯುತ್ತಿರುವ ಕಾರ್ಮಿಕರ ಪರದಾಟ ನೋಡಿ ಮರುಗಿದರು.

ಸುವರ್ಣನ್ಯೂಸ್ ವರದಿಗೆ ಎಚ್ಚೆತ್ತ ಸರ್ಕಾರ; ಡಬಲ್ ದರ ಪ್ರಸ್ತಾಪ ಕೈಬಿಟ್ಟ ಸಾರಿಗೆ! 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಮಾನ್ಯ ಮುಖ್ಯಮಂತ್ರಿಗಳೇ ಇವರೆಲ್ಲಾ ಈಗ ಎಲ್ಲಿಗೆ ಹೋಗಬೇಕು? ಇವರ ರಕ್ಷಣೆ ಮಾಡುವವರು ಯಾರು? ಇವರನ್ನು ಅವರ ಊರಿಗೆ ಉಚಿತವಾಗಿ ಕಳುಹಿಸಲು ಎಷ್ಟು ದುಡ್ಡು ಬೇಕು ಹೇಳಿ. ನಾನು ಭಿಕ್ಷೆ ಬೇಡಿಯಾದ್ರೂ ಅದನ್ನು ಕಟ್ಟುತ್ತೇನೆ. ಅನೇಕ ದಾನಿಗಳು, ನಮ್ಮ ಪಕ್ಷದ ನಾಯಕರು ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಒಬ್ಬೊಬ್ಬರಿಗೆ ಐನೂರೋ, ಸಾವಿರವೋ ಈ ಬಡ ಜನರ ಪ್ರಯಾಣ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಬಿಜೆಪಿಯ 26 ಸಂಸದರಿದ್ದಾರೆ. ರೈಲ್ವೇ ಸಚಿವರೂ ನಮ್ಮ ರಾಜ್ಯದವರೇ ಆಗಿದ್ದಾರೆ. ಗುಜರಾತ್ ಸೇರಿ ಬೇರೆ ರಾಜ್ಯಗಳಲ್ಲಿ ಶ್ರಮಿಕ್ ರೈಲು ಎಂದು ಬಿಟ್ಟಿದ್ದಾರಲ್ಲಾ, ಅದೇ ರೀತಿ ನಮ್ಮ ರಾಜ್ಯದಲ್ಲೂ ರೈಲು ವ್ಯವಸ್ಥೆ ಕಲ್ಪಿಸಲು ಈ ಸಂಸದರಿಂದ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸೋಂಕು ತೀವ್ರತೆ ಇದ್ದಾಗ ಗುಜರಾತ್ ಗೆ 1800 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಉತ್ತರಾಖಂಡದಲ್ಲಿ ಪ್ರವಾಸಿಗರಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಕೇರಳ, ರಾಜಸ್ಥಾನ ಸೇರಿದಂತೆ ಬೇರೆ ರಾಜ್ಯಗಳಿಗೆ ವಿದೇಶಗಳಿಂದ 10 ವಿಶೇಷ ವಿಮಾನದಲ್ಲಿ ಜನರನ್ನು ಕರೆದುಕೊಂಡು ಬರಲಾಗಿದೆ. ತೆಲಂಗಾಣದಲ್ಲಿ ಉಚಿತ ಪಾಸ್ ನೀಡುತ್ತಿದ್ದಾರೆ. ಜಾರ್ಖಂಡ್, ಕೇರಳ ಹೀಗೆ ಚಿಕ್ಕ ಚಿಕ್ಕ ರಾಜ್ಯಗಳು ತಮ್ಮ ಕಾರ್ಮಿಕರ ನೆರವಿಗೆ ಬಂದಿವೆ. ಆದರೆ ನಿಮಗೇನು ಬಂದಿದೆ ಮುಖ್ಯಮಂತ್ರಿಗಳೇ? ಈ ಬಡ ಕಾರ್ಮಿಕರು, ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿರುವುದೇಕೆ? ಸುಮಾರು 200 ಬಸ್ ವ್ಯವಸ್ಥೆ ಕಲ್ಪಿಸಿದರೆ ಸಾಕು ಇಲ್ಲಿನ ಎಲ್ಲ ಕಾರ್ಮಿಕರು ತಮ್ಮ ಊರು ಸೇರಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.

ತಮ್ಮ ಗಂಟು-ಮೂಟೆ ಕಟ್ಟಿಕೊಂಡು ಬಂದಿರುವ ಹೆಣ್ಣುಮಕ್ಕಳು ರಾತ್ರಿ ಎಲ್ಲಿ ಹೋಗುತ್ತಾರೆ? ಅವರು ಉಳಿದುಕೊಳ್ಳಲು ಏನು ವ್ಯವಸ್ಥೆ ಕಲ್ಪಿಸಿದ್ದೀರಿ? ಇವರೆಲ್ಲ ಎಲ್ಲಿ ಹೋಗಬೇಕು? ಮುಖ್ಯಮಂತ್ರಿಗಳೇ ನಿಮ್ಮ ಸಚಿವರನ್ನು ಕಳಿಸಿ. ಇವರ ಕಷ್ಟ ಏನು ಅಂತಾ ಕೇಳುವಂತೆ ಮಾಡಿ. ಸರಿಯಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿದ್ದ ಮೇಲೆ ಇವರನ್ನು ಊರಿಗೆ ಕಳುಹಿಸಲಾಗುವುದು ಎಂದು ಕರೆ ನೀಡಿದ್ದಾದರೂ ಏಕೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು.