ಜೆಡಿಎಸ್ ಅಧಿಕಾರಕ್ಕೆ ಬರೋದು ಕನಸು: ಡಿ.ಕೆ.ಶಿವಕುಮಾರ್
ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಅದು ಕೇವಲ ಕನಸು. ಭ್ರಷ್ಟಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ನಿರ್ಧರಿಸಿದ್ದಾರೆ. ರಾಜ್ಯ, ರಾಷ್ಟ್ರದ ಹಿತ ಕಾಪಾಡಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮದ್ದೂರು (ಫೆ.11): ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಅದು ಕೇವಲ ಕನಸು. ಭ್ರಷ್ಟಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ನಿರ್ಧರಿಸಿದ್ದಾರೆ. ರಾಜ್ಯ, ರಾಷ್ಟ್ರದ ಹಿತ ಕಾಪಾಡಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದ ಜನ ಸಾಮಾನ್ಯರು ಹಾಗೂ ರೈತರ ಬದುಕಿಗೆ ಬದಲಾವಣೆ ತರುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಸಮುದ್ರ ಪಾಲಾಗುವ ಕಾವೇರಿ ನೀರನ್ನು ಉಳಿಸಲು ಮೇಕೆದಾಟು ಯೋಜನೆ ಜಾರಿಗೊಳಿಸುವ ಅವಶ್ಯಕತೆ ಇದೆ. ಈ ಬಗ್ಗೆ ತಾಂತ್ರಿಕವಾಗಿ ಚರ್ಚೆ ಮಾಡಿದ್ದೇನೆ. ಈ ಯೋಜನೆ ಪೂರ್ಣ ಮಾಡುವ ಜವಾಬ್ದಾರಿ ಡಿ.ಕೆ.ಶಿವಕುಮಾರ್ ಮೇಲಿದೆ ಎಂದರು.
ಬಿಜೆಪಿ ಸರ್ಕಾರಕ್ಕೆ ಭ್ರಷ್ಟಸರ್ಕಾರ ಎಂಬ ಹೆಸರು ಬಂದಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನರ ಆದಾಯ ಮಾತ್ರ ಹಾಗೇ ಇದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲಾಗದೆ, ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸದ ಸರ್ಕಾರ ಅಧಿಕಾರದಲ್ಲಿರಬೇಕೆ ಎಂದು ಪ್ರಶ್ನಿಸಿದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಒಂದೇ ಕಾರಣಕ್ಕೆ 37 ಜನ ಶಾಸಕರಿದ್ದ ಜೆಡಿಎಸ್‌ಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಆದರೆ, ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಕುಮಾರಸ್ವಾಮಿ ಕೈಚೆಲ್ಲಿದರು. ಸಮರ್ಥ ಆಡಳಿತದೊಂದಿಗೆ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವಲ್ಲಿ ವಿಫಲರಾದರು ಎಂದು ದೂಷಿಸಿದರು.
ತಂದೆಗಾದಂತೆ ಶಾಸಕ ಪ್ರಿಯಾಂಕ್‌ಗೂ ಶಾಸ್ತಿ ತಪ್ಪಿದ್ದಲ್ಲ: ಎನ್.ರವಿಕುಮಾರ್
ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆದಾಗ ಕಾಂಗ್ರೆಸ್ ಅಭ್ಯರ್ಥಿ ಹಾಕಿರಲಿಲ್ಲ. ಕೆಲ ಮುಖಂಡರ ಅಸಮಾಧಾನ ಇದ್ದರೂ ನಾವು ಜೆಡಿಎಸ್ ಬೆಂಬಲಿಸಿದ್ದೆವು. ಇದೇ ಮಂಡ್ಯದಲ್ಲಿ ಕುಮಾರಣ್ಣ ನಾನು ಜೋಡೆತ್ತು ಎಂದಿದ್ದೆ. ಅಂದಿನ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ. ರಾಜಕಾರಣ ಯಾವತ್ತಿಗೂ ನಿಂತ ನೀರಲ್ಲ, ಏನು ಬೇಕಾದರೂ ಬದಲಾವಣೆ ಆಗಬಹುದು. ಕಾಂಗ್ರೆಸ್ ಬೆಂಬಲ ನೀಡಿದ ಕಾರಣಕ್ಕೆ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಲು ಕಾರಣವಾಯಿತು. ಭಗವಂತ, ನಾವು, ನೀವು ಎಲ್ಲರೂ ಸೇರಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆವು. ಆದರೆ ಯಾರು ಸಹಾಯ ಮಾಡಿದ್ದಾರೆ, ಯಾರು ತ್ಯಾಗ ಮಾಡಿದ್ದಾರೆ ಅವರನ್ನು ನೆನಯಬೇಕು ಎಂದು ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಹೇಳಿದರು.
ಜನರ ಕಷ್ಟಸುಖ ಕೇಳಲು, ಜನರಿಗಾಗಿ ಏನೆಲ್ಲಾ ಕೆಲಸಗಳನ್ನು ಮಾಡಬಹುದು ಎಂದು ತಿಳಿಯಲು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ಪ್ರತಿ ತಿಂಗಳು ಮನೆ ಒಡತಿ ಖಾತೆಗೆ 2000 ರು. ಕೊಡುವ ತೀರ್ಮಾನ ಮಾಡಿದ್ದೇವೆ. ಆ ಹಣವನ್ನು ಗಂಡಸರ ಅಕೌಂಟಿಗೆ ಹಾಕಲ್ಲ, ಹೆಂಗಸರ ಅಕೌಂಟಿಗೆ ಹಣ ಹಾಕ್ತೀವಿ. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಈ ವಿಚಾರಗಳಲ್ಲಿ ನಾನು ಮತ್ತು ಸಿದ್ದರಾಮಯ್ಯ ಗ್ಯಾರಂಟಿ ಚೆಕ್ ಸಹಿ ಮಾಡಿದ್ದೇವೆ. 2000 ದುಡ್ಡು, ಉಚಿತ ಕರೆಂಟ್ ಕೊಡಲಿಲ್ಲ ಎಂದರೆ ಮತ್ತೆಂದೂ ನಿಮ್ಮ ಮುಂದೆ ಬಂದು ಮತ ಕೇಳುವುದಿಲ್ಲ ಎಂದು ನುಡಿದರು.
ಮಹಿಳೆಯರಿಗೂ ಅಧಿಕಾರ ಕೊಟ್ಟಿದ್ದು ಮಂಡ್ಯ ಜಿಲ್ಲೆ ಎಂದು ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ರಮ್ಯಾ, ಸುಮಲತಾ ಸೇರಿದಂತೆ ಹಿರಿಯ ನಾಯಕಿಯರ ಹೆಸರು ಪ್ರಸ್ತಾಪ ಮಾಡಿದ ಡಿ.ಕೆ.ಶಿವಕುಮಾರ್, ಮದ್ದೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೂ ಅಲ್ಲ, ಡಿ.ಕೆ.ಶಿವಕುಮಾರ್ ಎಂದುಕೊಂಡು ಮತ ನೀಡಿ. ನಿಮ್ಮ ಮಗನಾದ ನನ್ನ ಕೈ ಬಲಪಡಿಸಿ, ನಿಮ್ಮ ಮಗನ ಆಡಳಿತ ನೀವು ನೋಡಬೇಕು. ಅದಕ್ಕಾಗಿ ನಿಮ್ಮ ಮನೆ ಮಗನಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ, ದಾನ-ಧರ್ಮ ಮಾಡಿರುವ ಕೈ ಅಧಿಕಾರಕ್ಕೆ ಬಂದರೆ ಚೆಂದ ಎಂದು ಯುವಕನೋರ್ವ ವಾಟ್ಸಪ್‌ನಲ್ಲಿ ಕಳುಹಿಸಿದ್ದ ಕವಿತೆ ಹೇಳಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ತರುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಪರ ಆಡಳಿತ: ಶಾಸಕ ಶರತ್ ಬಚ್ಚೇಗೌಡ
ಸಮಾವೇಶದಲ್ಲಿ ಮಾಜಿ ಸಚಿವರಾದ ಯು.ಟಿ.ಖಾದರ್, ಎಚ್.ಎಂ.ರೇವಣ್ಣ, ವಿ.ಎಸ್ .ಉಗ್ರಪ್ಪ, ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾ ಉಸ್ತುವಾರಿ ಚಂದ್ರಶೇಖರ್, ಮುಖಂಡರಾದ ಕುಸುಮಕುಮಾರ್ ಚೌದರಿ, ಕಾಂಗ್ರೆಸ್ ಅಭ್ಯರ್ಥಿ ಎಸ್.ಗುರುಚರಣ್, ಮಾಜಿ ಶಾಸಕರಾದ ಬಿ.ರಾಮಕೃಷ್ಣ, ಕೆ.ಬಿ.ಚಂದ್ರಶೇಖರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ, ಮೂರ್ತಿ, ಅಮರಾವತಿ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ನಾಗೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಗೋಪಿ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ಸಂದರ್ಶ, ಎಸ್ಸಿಎಸ್ಟಿಘಟಕದ ರಾಜ್ಯಾಧ್ಯಕ್ಷ ಸುರೇಶ್ ಕಂಠಿ, ಹೊಂಬಯ್ಯ ಸೇರಿದಂತೆ ಹಲವರು ಇದ್ದರು.