2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಜನಪರ ಯೋಜನೆಗಳನ್ನು ಜಾರಿ ಮಾಡಲಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ (ಫೆ.11): 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಜನಪರ ಯೋಜನೆಗಳನ್ನು ಜಾರಿ ಮಾಡಲಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. ತಾಲೂಕಿನ ಮುಗಬಾಳ ಗ್ರಾಪಂ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ಸುಮಾರು 30 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ಅಗತ್ಯ ದಿನ ಬಳಕೆ ವಸ್ತುಗಳನ್ನು ಗಣನೀಯವಾಗಿ ಏರಿಕೆ ಮಾಡುವ ಮೂಲಕ ಬಡ, ಮಧ್ಯಮ ವರ್ಗದವರ ಹಿತಾಸಕ್ತಿ ಮರೆತಿದೆ. 

ಕಾಂಗ್ರೆಸ್‌ ಸರ್ಕಾರದ ಅವ​ಧಿಯಲ್ಲಿ ಸಿದ್ದರಾಮಯ್ಯ ಅವರು ನೀಡಿದ ಅನ್ನಭಾಗ್ಯ ಅಕ್ಕಿಯನ್ನು ಕೂಡ ಕಡಿತಗೊಳಿಸುವ ಮೂಲಕ ಬಡವರಿಗೆ ಶಾಪವಾಗಿ ಪರಿಣಮಿಸಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅ​ಧಿಕಾರಕ್ಕೆ ಬರಲಿದ್ದು, ಪ್ರತಿ ತಲೆಗೆ 10 ಕೆಜಿ ಅಕ್ಕಿ ವಿತರಣೆ ಮಾಡುವುದರಲ್ಲಿ ಸಂದೇಹವಿಲ್ಲ. ಜೊತೆಗೆ 200 ಯೂನಿಟ್‌ ವಿದ್ಯುತ್‌ ಉಚಿತ, ಪ್ರತಿ ಮನೆ ಯಜಮಾನಿಗೆ 2 ಸಾವಿರ ಆರ್ಥಿಕೆ ನೆರವು ನೀಡುವ ಬಗ್ಗೆಯೂ ಈಗಾಗಲೆ ಘೋಷಣೆ ಮಾಡಲಾಗಿದೆ. ಆಧ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅ​ಕಾರ ಕೊಡಬೇಕು ಎಂದರು.

ರಾಜಕೀಯಕ್ಕೆ ಬಂದಿರುವುದು ಜನ ಸೇವೆ ಮಾಡಲಿಕ್ಕೆ: ಸಚಿವ ಎಂಟಿಬಿ ನಾಗರಾಜ್‌

ಮಾಜಿ ತಾಪಂ ಅಧ್ಯಕ್ಷ ಟಿ.ಎಸ್‌.ರಾಜಶೇಖರ್‌ ಮಾತನಾಡಿ, ಕ್ಷೇತ್ರದಲ್ಲಿ ಶರತ್‌ ಬಚ್ಚೇಗೌಡ ಅವರು ಶಾಸಕರಾದಾಗಿನಿಂದ ಚಿಕ್ಕನಹಳ್ಳಿ ಗ್ರಾಮಕ್ಕೆ ಸುಮಾರು 60 ರಿಂದ 70 ಲಕ್ಷ ಅನುದಾನ ನೀಡುವುದರ ಮೂಲಕ ಅಗತ್ಯ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಅಗತ್ಯ ಹೈಮಾಸ್ಟ್‌ ದೀಪವನ್ನು ಅಳವಡಿಕೆ ಮಾಡಲಾಗಿದೆ. ಈಗ ಶಾಸಕರ ಅನುದಾನದಲ್ಲಿ ನೂತನ ಪೈಪ್‌ ಲೈನ್‌ ಅಳವಡಿಕೆಗೂ ಚಾಲನೆ ನೀಡಲಾಗಿದೆ. ಆದ್ದರಿಂದ ಮತ್ತಷ್ಟುಅಭಿವೃದ್ದಿಗೆ ಮುಂದಿನ ದಿನಗಳಲ್ಲಿ ಶಾಸಕ ಶರತ್‌ ಬಚ್ಚೇಗೌಡರನ್ನು ಬೆಂಬಲಿಸಬೇಕು ಎಂದರು. ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್‌ ಅಧ್ಯಕ್ಷ ಎಲ್‌ಎನ್‌ಟಿ ಮಂಜುನಾಥ್‌, ಗ್ರಾಪಂ ಮಾಜಿ ಅಧ್ಯಕ್ಷ ಯಳಚಹಳ್ಳಿ ರವಿ, ಗುತ್ತಿಗೆದಾರ ಗುರುಬಸಪ್ಪ, ಜಿಪಂ ಮಾಜಿ ಸದಸ್ಯ ಕಲ್ಲಪ್ಪ, ಮುಖಂಡರಾದ ಕೃಷ್ಣಪ್ಪ, ಪ್ರಭಾಕರ್‌, ಭೈರೇಗೌಡ, ಸೋಮಶೇಖರ್‌, ದೇವರಾಜ್‌ ಇತರರಿದ್ದರು.

ಮಾದರಿ ಕ್ಷೇತ್ರ ಮಾಡುವುದೇ ಗುರಿ: ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ರಸ್ತೆಗಳ ಅಭಿವೃದ್ಧಿ ತುಂಬಾ ಮುಖ್ಯ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು. ತಾಲೂಕಿನ ಹಳೇ ಊರಿನಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಡಿ 2.40 ಕೋಟಿ ವೆಚ್ಚದಲ್ಲಿ ರಾಮಗೋವಿಂದಪುರ, ಚೀಮಸಂದ್ರ, ಅನುಪಹಳ್ಳಿ, ಬೆಂಡಿಗಾನಹಳ್ಳಿ ಮಾರ್ಗವಾಗಿ 4.5 ಕಿ.ಮೀ. ಹೊಸಕೋಟೆ-ಶಿಡ್ಲಘಟ್ಟರಸ್ತೆಗೆ ಸಂಪರ್ಕ ಕಲ್ಪಿಸುವ ಡಾಂಬರು ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹೋಬಳಿಯ ಎಲ್ಲ ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಹಂತ-ಹಂತವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 

ರಸ್ತೆಗಳ ಡಾಂಬರೀಕರಣ ಮತ್ತು ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ಮಾಡಲಾಗುತ್ತಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಗ್ರಾಮೀಣರಿಗೆ ಸಮುದಾಯ ಭವನ, ಕುಡಿಯುವ ನೀರು, ಚರಂಡಿಗಳ ನಿರ್ಮಾಣ, ಶಾಲಾ- ಕಾಲೇಜುಗಳ ನಿರ್ಮಾಣ ಪೂರ್ಣಗೊಳಿಸಿ, ಮಾದರಿ ಕ್ಷೇತ್ರವನ್ನಾಗಿಸುವುದೆ ಧ್ಯೇಯವಾಗಿದೆ ಎಂದು ಹೇಳಿದರು. 

ಬಿಜೆಪಿಗೆ ವಿರೋಧ ಪಕ್ಷ ಸ್ಥಾನ ಖಾಯಂ: ಡಿ.ಕೆ.ಶಿವಕುಮಾರ್‌

ಕಾರ‍್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಚ್ಚೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಲ್‌ಎನ್‌ಟಿ ಮಂಜುನಾಥ್‌, ತಾಪಂನ ಮಾಜಿ ಅಧ್ಯಕ್ಷ ಕೆಂಚೇಗೌಡ, ಎಪಿಎಂಸಿಯ ಮಾಜಿ ಅಧ್ಯಕ್ಷ ಧರ್ಮೇಶ್‌, ಗ್ರಾಪಂನ ಅಧ್ಯಕ್ಷೆ ಮಂಜುಳ ನಾಗೇಶ್‌, ಉಪಾಧ್ಯಕ್ಷೆ ಗಾಯಿತ್ರಿ ನಾಗೇಶ್‌, ಸದಸ್ಯರಾದ ಚಂದ್ರಪ್ಪ, ಮಂಜುನಾಥ್‌, ವೀರರಾಜ್‌, ಅಯೂಬ್‌ ಬೇಗ್‌, ಕಮಲಶಿವು, ರಮೇಶ್‌, ಬಿಂದು ದೇವೇಗೌಡ, ಲಕ್ಷ್ಮೇನಾರಾಯಣ, ಮಾಜಿ ಎಸ್‌ಎಫ್‌ಸಿಎಸ್‌ ಅಧ್ಯಕ್ಷ ಶ್ರೀನಿವಾಸ್‌, ಗುತ್ತಿಗೆದಾರ ದೇವರಾಜ್‌ ಮುಖಂಡರಾದ ಶಂಕರ್‌ ನಾರಾಯಣ್‌, ಮುನಿಶಾಮಪ್ಪ, ದೊಡ್ಡನಾರಾಯಣಪ್ಪ, ಸೊಣ್ಣೇಗೌಡ, ಮಾರೇಗೌಡ ಗ್ರಾಮಸ್ಥರು ಹಾಜರಿದ್ದರು.